ಆಗಸ್ಟ್ 28ಕ್ಕೆ ಕ್ಷಣಗಣನೆ ನಡೆಯುತ್ತಿದೆ. ಭಾರತ-ಪಾಕಿಸ್ತಾನ (India Vs Pakistan) ಕ್ರಿಕೆಟ್ ಅಭಿಮಾನಿಗಳು ಕಾತುರರಾಗಿದ್ದಾರೆ. 4 ಗಂಟೆಗಳ ಪಂದ್ಯಕ್ಕಾಗಿ 4 ವಾರಗಳ ಕಾಲ ಕುತೂಹಲದಿಂದ ಕಾಯುತ್ತಿದ್ದೇವೆ. ಭಾರತ-ಪಾಕಿಸ್ತಾನ ತಂಡಗಳು ಕೇವಲ ಐಸಿಸಿ ಈವೆಂಟ್ಗಳಲ್ಲಿ ಆಡುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಇದೇ ಕಾರಣಕ್ಕೆ ಎರಡು ತಂಡಗಳ ನಡುವಿನ ಹಣಾಹಣಿಗಾಗಿ ಕ್ರಿಕೆಟ್ ಪ್ರೇಮಿಗಳು ಕಾತರರಾಗಿದ್ದಾರೆ. ಏಷ್ಯಾಕಪ್ 2022 (Asia Cup 2022) ಗಾಗಿ ಭಾರತ-ಪಾಕಿಸ್ತಾನ ತಂಡ ಯುಎಇ ತಲುಪಿದ್ದು, ಉಭಯ ತಂಡಗಳ ಅಭ್ಯಾಸವೂ ಆರಂಭವಾಗಿದೆ.
28 ರಂದು ಮೈದಾನದಲ್ಲಿ ನಡೆಯಲಿರುವ ಕದನ ಭಾರತ ತಂಡಕ್ಕೆ ದೊಡ್ಡ ಸವಾಲಾಗಿದೆ. ಏಕೆಂದರೆ ಕಳೆದ ಪಂದ್ಯದಲ್ಲಿ ಭಾರತ ತಂಡವನ್ನು ಪಾಕಿಸ್ತಾನ 10 ವಿಕೆಟ್‌ಗಳ ಬೃಹತ್ ಅಂತರದಿಂದ ಸೋಲಿಸಿದ ಮೈದಾನ ಇದಾಗಿದೆ. ಇದೊಂದು ಮುಜುಗರದ ಸೋಲು ಇಡೀ ಭಾರತೀಯರನ್ನೇ ಘಾಸಿಗೊಳಿಸಿತ್ತು.
ಆ ಸೋಲಿನ ನೆನಪಿನಿಂದ ಹೊರಬರಬೇಕು
ಆ ಪಂದ್ಯದಲ್ಲಿ ಭಾರತ ತಂಡ ಅನುಸರಿಸಿದ ಅತಿ ರಕ್ಷಣಾತ್ಮಕ ವರ್ತನೆ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ಆರಂಭಿಕ ಓವರ್‌ನಲ್ಲಿ ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಔಟಾದ ನಂತರ ಭಾರತ ತಂಡ ಅತ್ಯಂತ ರಕ್ಷಣಾತ್ಮಕ ಬ್ಯಾಟಿಂಗ್ ಮಾಡಿತು. ಇದೀಗ ಸುಮಾರು ಒಂದು ವರ್ಷದ ಬಳಿಕ ಮತ್ತೊಮ್ಮೆ ಭಾರತ-ಪಾಕಿಸ್ತಾನ ಮುಖಾಮುಖಿಯಾದಾಗ ಭಾರತ ತಂಡ ಆ ತಪ್ಪನ್ನು ತಿದ್ದಿಕೊಳ್ಳಬೇಕಿದೆ.
ಪ್ರತಿ ಪಂದ್ಯವೂ ಹೊಸ ಪಂದ್ಯ ಎಂದು ಕ್ರಿಕೆಟಿಗರು ಎಷ್ಟು ಬಾರಿ ಕ್ಯಾಮರಾಗೆ ಹೇಳಿದರೂ, ಹಿಂದಿನ ಪಂದ್ಯದ ನೆನಪುಗಳು ಪ್ರತಿಯೊಬ್ಬ ಆಟಗಾರನ ಮನಸ್ಸಿನಲ್ಲಿ ತಾಜಾವಾಗಿರುತ್ತವೆ. ಹಿಂದಿನ ಸ್ಪರ್ಧೆಯ ಹೀರೋ, ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಈ ಪಂದ್ಯದಲ್ಲಿ ಆಡುತ್ತಿಲ್ಲ. ಹೀಗಾಗಿ ಟೀಂ ಇಂಡಿಯಾ ಇದರ ಲಾಭದೊಂದಿಗೆ ತನ್ನ ಸಾಮಥ್ಯ್ರಕ್ಕೆ ತಕ್ಕಂತಹ ಆಟ ಪ್ರದರ್ಶಿಸಬೇಕಿದೆ. ಜೊತೆಗೆ ಅತಿಯಾದ ರಕ್ಷಣಾತ್ಮಕವಾಗಿ ಆಡದಿದ್ದಾಗ ಮಾತ್ರ ಸೋಲಿನ ಕಹಿ ನೆನಪುಗಳು ನಮ್ಮ ಮನಸಿನಿಂದ ಹೊರಹೋಗುತ್ತವೆ.
10 ವಿಕೆಟ್‌ಗಳ ಸೋಲನ್ನು ಅರಗಿಸಿಕೊಳ್ಳಲಾಗುತ್ತಿಲ್ಲ
ಕಳೆದ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರಿನ 10 ವಿಕೆಟ್‌ಗಳ ಸೋಲನ್ನು ಕ್ರಿಕೆಟ್ ಅಭಿಮಾನಿಗಳು ಇನ್ನೂ ಅರಗಿಸಿಕೊಂಡಿಲ್ಲ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ರಿಷಬ್ ಪಂತ್ ಅವರಂತಹ ಸ್ಟಾರ್ ಆಟಗಾರರನ್ನು ಹೊಂದಿರುವ ತಂಡ 10 ವಿಕೆಟ್‌ಗಳ ದೊಡ್ಡ ಅಂತರದಿಂದ ಸೋಲುವುದೆಂದರೆ ಹೇಗೆ. ಅಂದಿನ ಪಂದ್ಯದಲ್ಲಿ ಭಾರತ ಕೇವಲ 151 ಸ್ಕೋರ್ ಟಾರ್ಗೆಟ್ ನೀಡಿತ್ತು. ಈ 151 ರನ್‌ಗಳ ಟಾರ್ಗೆಟ್ ಸೋಲುವ ಟಾರ್ಗೆಟ್ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೆ. ಆದರೆ ಇನ್ನೂ 13 ಎಸೆತಗಳು ಬಾಕಿ ಇರುವಂತೆ 10 ವಿಕೆಟ್‌ಗಳ ಬೃಹತ್ ಅಂತರದಿಂದ ಪಂದ್ಯವನ್ನು ಸೋಲುವುದು ಸಣ್ಣ ಸೋಲಲ್ಲ.
ಈ ಸೋಲಿನ ಪರಿಣಾಮವೆಂದರೆ 2007ರ ಇತಿಹಾಸ ಯುಎಇಯಲ್ಲಿ ಮರುಕಳಿಸಲಿಲ್ಲ. 2007ರ ವಿಶ್ವಕಪ್‌ನಂತೆ 2021ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಇದೊಂದು ಕೆಟ್ಟ ಘಟ್ಟ. ಒಂದೇ ವ್ಯತ್ಯಾಸವೆಂದರೆ 2007ರಲ್ಲಿ 50 ಓವರ್‌ಗಳ ಪಂದ್ಯವಾಗಿತ್ತು, 2021ರಲ್ಲಿ 20 ಓವರ್‌ಗಳ ಪಂದ್ಯವಾಗಿತ್ತು.
2007ರ ವಿಶ್ವಕಪ್ ಸೋಲನ್ನು ಮರೆಯಲಾಗುವುದಿಲ್ಲ
ರಾಹುಲ್ ದ್ರಾವಿಡ್ 2007ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ನಾಯಕರಾಗಿದ್ದರು. ಭಾರತ ತಂಡದ ಶಿಬಿರದ ಬಗ್ಗೆ ಆಗಾಗ ಸುದ್ದಿ ಬರುತ್ತಿದ್ದ ಕಾಲವದು. ಸೌರವ್ ಗಂಗೂಲಿ ತಂಡದಲ್ಲಿದ್ದರೂ ನಾಯಕನಾಗಿರಲಿಲ್ಲ. ಬಾಂಗ್ಲಾದೇಶ ವಿರುದ್ಧ ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ವೀರೇಂದ್ರ ಸೆಹ್ವಾಗ್ ಔಟಾದರು. ಇದಾದ ಬಳಿಕ ಭಾರತದ ಬ್ಯಾಟಿಂಗ್ ವಿಭಾಗ ಕುಸಿಯಲಾರಂಬಿಸಿತು. ಗಂಗೂಲಿ ಅವರ 66 ರನ್ ಮತ್ತು ಯುವರಾಜ್ ಸಿಂಗ್ ಅವರ 47 ರನ್‌ಗಳ ನೆರವಿನಿಂದ ಭಾರತ ತಂಡ ಸ್ಕೋರ್‌ಬೋರ್ಡ್‌ನಲ್ಲಿ 191 ರನ್ ಸೇರಿಸಿತು.
ಬಾಂಗ್ಲಾದೇಶದ ಆರಂಭಿಕ ಆಟಗಾರ ತಮೀಮ್ ಇಕ್ಬಾಲ್, ಜಹೀರ್ ಖಾನ್ ಅವರನ್ನು ಗುರಿಯಾಗಿಸಿ, ಜಹೀರ್ ಖಾನ್ ಅವರ ಪ್ರತಿಯೊಂದು ಓವರ್‌ನಲ್ಲಿಯೂ ಬೌಂಡರಿಗಳನ್ನು ಬಾರಿಸಿದರು. ಮುನಾಫ್ ಪಟೇಲ್ 14 ನೇ ಓವರ್‌ನಲ್ಲಿ ತಮೀಮ್ ಇಕ್ಬಾಲ್ ಅವರನ್ನು ಔಟ್ ಮಾಡಿದರು ಆದರೆ ಆ ಹೊತ್ತಿಗೆ ಅವರು ತಮ್ಮ ತಂಡಕ್ಕೆ ಪಂದ್ಯದ ಗೆಲುವಿನ ರನ್ ಗಳಿಸಿದ್ದರು. ಈ ಸೋಲು ಭಾರತ ತಂಡ ಮತ್ತು ಅದರ ಅಭಿಮಾನಿಗಳನ್ನು ಬೆಚ್ಚಿಬೀಳಿಸಿತು. ಇದರ ಪರಿಣಾಮವಾಗಿ ಭಾರತ ತಂಡ ಮೊದಲ ಸುತ್ತಿನಲ್ಲೇ ಹೊರಬಿದ್ದಿತ್ತು.
Published On - 4:32 pm, Sat, 27 August 22