
ಹದಿನೈದನೆ ಆವೃತ್ತಿಯ ಏಷ್ಯಾಕಪ್ ಟೂರ್ನಿಗೆ (Asia Cup 2022) ಇಂದು ಚಾಲನೆ ಸಿಗಲಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಕೂಡ ಏಕದಿನದ ಬದಲು ಟಿ20 ಮಾದರಿಯಲ್ಲಿ ನಡೆಯಲಿದೆ. 38 ವರ್ಷಗಳ ಇತಿಹಾಸ ಹೊಂದಿರುವ ಏಷ್ಯಾಕಪ್ ಟೂರ್ನಿಯಲ್ಲಿ ಏಷ್ಯಾದ ಅಗ್ರ ಆರು ತಂಡಗಳು ಸೆಣೆಸಾಟ ನಡೆಸಲಿದೆ. ಈ ಬಾರಿ ಒಂದು ಟ್ರೋಫಿಗಾಗಿ ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ ಹಾಗೂ ಹಾಂಕಾಂಗ್ ಸ್ಥಾನ ಪಡೆದುಕೊಂಡಿದ್ದರೆ, ಗ್ರೂಪ್ ಬಿ ಯಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ (Sri Lanka vs Afghanistan) ಹಾಗೂ ಬಾಂಗ್ಲಾದೇಶ ಇದೆ. ದುಬೈ ಮತ್ತು ಶಾರ್ಜಾದಲ್ಲಿ ಆಗಸ್ಟ್ 27 ರಿಂದ ಸೆಪ್ಟೆಂಬರ್ 11 ರವರೆಗೆ ಒಟ್ಟು 13 ಪಂದ್ಯಗಳನ್ನು ನಡೆಲಿದೆ.
2018 ರ ಕೋವಿಡ್-19 ಕಾರಣದಿಂದಾಗಿ ಯುಎಇಯಲ್ಲಿ ಕೊನೆಯದಾಗಿ ನಡೆದ ಏಷ್ಯಾಕಪ್ ಟೂರ್ನಿ ನಂತರ 2020 ರಿಂದ 2022 ಕ್ಕೆ ಮುಂದೂಡಲಾಯಿತು. ಮೊದಲಿಗೆ ಈ ಬಾರಿಯ ಏಷ್ಯಾಕಪ್ ಶ್ರೀಲಂಕಾದಲ್ಲಿ ಆಯೋಜನೆ ಮಾಡಲಾಗಿತ್ತು. ಆದರೆ, ದ್ವೀಪ ರಾಷ್ಟ್ರದಲ್ಲಿ ಅಗಾಧವಾದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಬಿಕ್ಕಟ್ಟಿನ ಕಾರಣ ಏಷ್ಯಾಕಪ್ ಅನ್ನು ಲಂಕಾದಿಂದ ಯುಎಇಗೆ ಸ್ಥಳಾಂತರಿಸಲಾಗಿದೆ.
ಶ್ರೀಲಂಕಾ–ಅಫ್ಘಾನ್ ಮುಖಾಮುಖಿ:
ಇಂದು ಏಷ್ಯಾಕಪ್ನ ಉದ್ಘಾಟನಾ ಪಂದ್ಯದಲ್ಲಿ ಗ್ರೂಪ್ ಬಿ ಯಲ್ಲಿರುವ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ತಂಡ ಸೆಣೆಸಾಟ ನಡೆಸಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಟೂರ್ನಿಯಲ್ಲಿ ಐದು ಬಾರಿ ಟ್ರೋಫಿ ಗೆದ್ದು ಎರಡನೇ ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿರುವ ಶ್ರೀಲಂಕಾದಲ್ಲಿ ಈಗ ಮೊದಲಿನ ಖದರ್ ಇಲ್ಲ. ಆಲ್‌ರೌಂಡರ್ ದಸುನ್ ಶನಕ ಲಂಕಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ಪ್ರಮುಖ ವೇಗಿ ದುಷ್ಮಾಂತ ಚಮೀರ ಟೂರ್ನಿಯಿಂದ ಔಟಾಗಿರುವುದು ತಂಡಕ್ಕೆ ದೊಡ್ಡ ಹಿನ್ನಡೆ. ಪತುಮ್ ನಿಸಂಕ, ಭಾನುಕ ರಾಜಪಕ್ಷ, ವಾನಿಂದು ಹಸರಂಗ ಹಾಗೂ ಮಹೀಶ ತೀಕ್ಷಣ ಸ್ಟಾರ್ ಆಟಗಾರರಿದ್ದಾರೆ.
ಇತ್ತ ಟಿ20 ಲೀಗ್‌ಗಳಲ್ಲಿ ತನ್ನ ಶಕ್ತಿ ಪ್ರದರ್ಶನ ತೋರುತ್ತಿರುವ ಅಫಘಾನಿಸ್ತಾನ ತಂಡವನ್ನು ಕಡೆಗಣಿಸುವಂತಿಲ್ಲ. ಮೊಹಮ್ಮದ್ ನಬಿ, ರಶೀದ್ ಖಾನ್ ಮತ್ತು ಹಝರತ್ ಉಲ್ಲಾ ಝಜಾಯ್ ಅವರಂತಹ ಮ್ಯಾಚ್ ವಿನ್ನರ್‌ಗಳ ದಂಡೇ ಅಫ್ಘಾನ್ ತಂಡದಲ್ಲಿದೆ. ಹೀಗಾಗಿ ಮೊದಲ ಪಂದ್ಯವೇ ಸಾಕಷ್ಟು ರೋಚಕತೆ ಸೃಷ್ಟಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ಶುರುವಾಗಲಿದೆ. ಸ್ಟಾರ್ ಸ್ಪೋರ್ಟ್ಸ್ ಮತ್ತು ಹಾಟ್ ಸ್ಟಾರ್‌ನಲ್ಲಿ ನೇರ ಪ್ರಸಾರವಾಗಲಿದೆ.
ಏಷ್ಯಾ ಕಪ್ 2022 ಸಂಪೂರ್ಣ ವೇಳಾಪಟ್ಟಿ:
ಶ್ರೀಲಂಕಾ vs ಅಫ್ಘಾನಿಸ್ತಾನ – ಆಗಸ್ಟ್ 27, ದುಬೈ
ಭಾರತ vs ಪಾಕಿಸ್ತಾನ – ಆಗಸ್ಟ್ 28, ದುಬೈ
ಬಾಂಗ್ಲಾದೇಶ vs ಅಫ್ಘಾನಿಸ್ತಾನ – ಆಗಸ್ಟ್ 30, ಶಾರ್ಜಾ
ಭಾರತ vs ಹಾಂಕಾಂಗ್ – ಆಗಸ್ಟ್ 31, ದುಬೈ
ಶ್ರೀಲಂಕಾ vs ಬಾಂಗ್ಲಾದೇಶ – ಸೆಪ್ಟೆಂಬರ್ 1, ದುಬೈ
ಪಾಕಿಸ್ತಾನ vs ಹಾಂಕಾಂಗ್– ಸೆಪ್ಟೆಂಬರ್ 2, ಶಾರ್ಜಾ
ಗ್ರೂಪ್ ಎ ಮತ್ತು ಬಿ ಯಲ್ಲಿ ತಲಾ ಎರಡಡು ತಂಡಗಳು ಸೂಪರ್-4ಗೆ ಅರ್ಹತೆ ಪಡೆಯಲಿದೆ.
ಸೂಪರ್– 4 ವೇಳಾಪಟ್ಟಿ:
B1 vs B2 – ಸೆಪ್ಟೆಂಬರ್ 3, ಶಾರ್ಜಾ
A1 vs A2 – ಸೆಪ್ಟೆಂಬರ್ 4, ದುಬೈ
A1 vs B1 – ಸೆಪ್ಟೆಂಬರ್ 6, ದುಬೈ
A2 vs B2 – ಸೆಪ್ಟೆಂಬರ್ 7, ದುಬೈ
A1 vs B2 – ಸೆಪ್ಟೆಂಬರ್ 8, ದುಬೈ
B1 vs A2 – ಸೆಪ್ಟೆಂಬರ್ 9, ದುಬೈ
ಫೈನಲ್ ಪಂದ್ಯ – ಸೆಪ್ಟೆಂಬರ್ 11, ದುಬೈ
Published On - 7:39 am, Sat, 27 August 22