The 6ixty: ಸತತ 4 ಸಿಕ್ಸರ್; ದಿ ಸಿಕ್ಸ್ಟಿ ಲೀಗ್ನಲ್ಲಿ ಸಿಕ್ಸರ್‌ಗಳ ಮಳೆಗರೆದ 19 ವರ್ಷದ ಬೇಬಿ ಎಬಿ..! ವಿಡಿಯೋ
Dewald Brevis: ಬ್ರೆವಿಸ್ ಸತತ ನಾಲ್ಕು ಎಸೆತಗಳಲ್ಲಿ ಒಂದರ ಹಿಂದೆ ಒಂದರಂತೆ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಮೈಕಾದ ಬೌಲರ್‌ಗಳನ್ನು ಹೆಡೆಮುರಿ ಕಟ್ಟಿದರು.
ಕ್ರಿಕೆಟ್ ಆಟವನ್ನು ನಿರಂತರವಾಗಿ ಹೊಸ ಸ್ವರೂಪಗಳಿಗೆ ಬದಲಾಯಿಸುವ ಮೂಲಕ ಮೊದಲಿಗಿಂತ ಹೆಚ್ಚು ರೋಮಾಂಚನಕಾರಿಯಾಗಿ ಮಾಡುವ ಪ್ರಯತ್ನಗಳು ಕೆಲವು ವರ್ಷಗಳಿಂದ ಆರಂಭವಾಗಿವೆ. ಅದರ ಫಲವಾಗಿ ಐಪಿಎಲ್, ಬಿಗ್ ಬ್ಯಾಷ್, ಕೆರಿಬಿಯನ್ ಲೀಗ್ನಂತಹ ಪಂದ್ಯಾವಳಿಗಳು ಆರಂಭವಾಗಿವೆ. ಜೊತೆಗೆ ಈ ಹೊಸ ಸ್ವರೂಪಗಳಲ್ಲಿ ಆಡುವ ಆಟಗಾರರು ಕೂಡ ಅಬ್ಬರಿಸುವ ಮೂಲಕ ಈ ಹೊಸ ಅವಿಷ್ಕಾರವನ್ನು ಇನ್ನಷ್ಟು ಉತ್ತುಂಗಕ್ಕೆ ಕೊಂಡೊಯ್ಯುತ್ತಿದ್ದಾರೆ. ಅದರಲ್ಲೂ ಕ್ರಿಕೆಟ್ ಲೋಕದಲ್ಲಿ ಹೊರಹೊಮ್ಮುತ್ತಿರುವ ಹೊಸ ಮತ್ತು ಯುವ ಬ್ಯಾಟ್ಸ್‌ಮನ್‌ಗಳು ತಲ್ಲಣ ಮೂಡಿಸಿದ್ದಾರೆ. ಅವರುಗಳಲ್ಲಿ ಪ್ರಮುಖ ಹೆಸರು ಡೆವಾಲ್ಡ್ ಬ್ರೆವಿಸ್ (Dewald Brevis). ದಕ್ಷಿಣ ಆಫ್ರಿಕಾದ ಈ ಅಂಡರ್-19 ಕ್ರಿಕೆಟ್ ತಂಡದ ಹೊಸ ಸ್ಟಾರ್, ಕ್ರಿಕೆಟ್‌ನ ಹೊಸ ಸ್ವರೂಪದಲ್ಲಿ ಅಂದರೆ ಸಿಕ್ಸ್ಟಿ ಲೀಗ್ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸಿದ್ದಾರೆ.
ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಯ ಹೊಸ 60-ಬಾಲ್ ಪಂದ್ಯಾವಳಿ ದಿ ಸಿಕ್ಸ್ಟಿ ಪ್ರಾರಂಭವಾಗಿದ್ದು, ಈ ಪಂದ್ಯಾವಳಿ ಕೆರಿಬಿಯನ್ ಪ್ರೀಮಿಯರ್ ಲೀಗ್‌ನ ತಂಡಗಳ ನಡುವೆ ಮಾತ್ರ ನಡೆಯುತ್ತಿದೆ. ಪಂದ್ಯಾವಳಿಯಲ್ಲಿ ಕೆಲವು ಪಂದ್ಯಗಳು ನಡೆದಿದ್ದು ಅಂತಹ ಒಂದು ಪಂದ್ಯ ಜಮೈಕಾ ತಲ್ಲವಾಸ್ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ ಪೇಟ್ರಿಯಾಟ್ಸ್ ನಡುವೆ ಗುರುವಾರ ಆಗಸ್ಟ್ 25 ರಂದು ನಡೆಯಿತು. ಜಮೈಕಾ ಈ ಪಂದ್ಯದಲ್ಲಿ ಗೆಲುವು ಸಾಧಿಸಿತ್ತಾದರೂ, ಎದುರಾಳಿ ತಂಡದ 19 ವರ್ಷದ ಆಟಗಾರ ಡೆವಾಲ್ಡ್ ಬ್ರೆವಿಸ್ ಒಂದು ಕ್ಷಣ ಜಮೈಕಾ ಗೆಲುವಿಗೆ ಅಡ್ಡಿಯಾಗಿದ್ದರು.
ಸತತ 4 ಸಿಕ್ಸರ್
ಅಂಡರ್-19 ವಿಶ್ವಕಪ್‌ನಿಂದ ಐಪಿಎಲ್ 2022 ರವರೆಗೂ ತಮ್ಮ ವಿಧ್ವಂಸಕ ಬ್ಯಾಟಿಂಗ್ ಅನ್ನು ಹರಡಿರುವ ಬ್ರೆವಿಸ್ ಇದೀಗ ಸಿಕ್ಸ್ಟಿ ಲೀಗ್ನಲ್ಲಿ ಅಬ್ಬರಿಸಿದ್ದಾರೆ. ಅದೂ ಕೂಡ, ದೊಡ್ಡ ಬ್ಯಾಟ್ಸ್‌ಮನ್‌ಗಳಿಗೂ ಇದನ್ನು ಮಾಡಲು ಸಾಧ್ಯವಾಗದ ಸಮಯದಲ್ಲಿ ಈ ರೀತಿಯ ಪ್ರದರ್ಶನ ನೀಡುತ್ತಿದ್ದಾರೆ. ಬ್ರೆವಿಸ್ ಸತತ ನಾಲ್ಕು ಎಸೆತಗಳಲ್ಲಿ ಒಂದರ ಹಿಂದೆ ಒಂದರಂತೆ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಜಮೈಕಾದ ಬೌಲರ್‌ಗಳನ್ನು ಹೆಡೆಮುರಿ ಕಟ್ಟಿದರು. ಇಷ್ಟೇ ಅಲ್ಲ, ಬ್ರೆವಿಸ್ ಕೇವಲ 11 ಎಸೆತಗಳನ್ನು ಆಡಿ, 309 ಸ್ಟ್ರೈಕ್ ರೇಟ್ನಲ್ಲಿ 34 ರನ್ ಬಾರಿಸಿದರು.
Dewald Brevis just casually smashing 34 (11) deliveries#6ixtyCricket pic.twitter.com/9tyWPnluwh
— Werner (@Werries_) August 25, 2022
ಆದರೂ ಸೋತ ತಂಡ
ಆದಾಗ್ಯೂ, ಈ ಅಬ್ಬರದ ಇನ್ನಿಂಗ್ಸ್ ಕೂಡ ಪೇಟ್ರಿಯಾಟ್ಸ್ ಗೆಲುವಿಗೆ ಸಹಾಯ ಮಾಡಲಿಲ್ಲ ಏಕೆಂದರೆ ಇಡೀ ಪೇಟ್ರಿಯಾಟ್ಸ್ ತಂಡವು ಕೇವಲ 84 ರನ್‌ಗಳಿಗೆ ಆಲೌಟ್ ಆಗಿ, 55 ರನ್‌ಗಳಿಂದ ಸೋತಿತು. ಮೊದಲು ಬ್ಯಾಟ್ ಮಾಡಿದ ಜಮೈಕಾ 60 ಎಸೆತಗಳಲ್ಲಿ 139 ರನ್ ಗಳಿಸಿತ್ತು. ಜಮೈಕಾ ಪರ, ವೆಸ್ಟ್ ಇಂಡೀಸ್ ಆಲ್‌ರೌಂಡರ್ ಫ್ಯಾಬಿಯನ್ ಅಲೆನ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿ, ಕೇವಲ 18 ಎಸೆತಗಳಲ್ಲಿ 45 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಅಲೆನ್ 5 ಸಿಕ್ಸರ್ ಮತ್ತು 2 ಬೌಂಡರಿಗಳನ್ನೂ ಬಾರಿಸಿದ್ದರು.