ಏಷ್ಯಾಕಪ್ 2022 (Asia Cup 2022) ಪ್ರಾರಂಭವಾಗಲು ಕೇವಲ ಎರಡು ದಿನಗಳು ಉಳಿದಿವೆ, ಆದರೆ ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿನ ( Pakistan cricket team) ತೊಂದರೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡ ಈಗಾಗಲೇ ತನ್ನ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿಯನ್ನು (Shaheen Shah Afridi) ಗಾಯದಿಂದ ಕಳೆದುಕೊಂಡಿದೆ. ಇದೀಗ ಪಾಕಿಸ್ತಾನದ ಮತ್ತೋರ್ವ ವೇಗದ ಬೌಲರ್ ಗಾಯದ ಸುಳಿಗೆ ಸಿಲುಕಿದ್ದು, ಪಾಕ್ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ವರದಿಗಳ ಪ್ರಕಾರ, ಯುವ ವೇಗದ ಬೌಲರ್ ಮೊಹಮ್ಮದ್ ವಾಸಿಂ ಜೂನಿಯರ್ ಅವರಿಗೆ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಜಿಯೋ ನ್ಯೂಸ್ ಪತ್ರಕರ್ತ ಅರ್ಫಾ ಫಿರೋಜ್ ಜೇಕ್ ಅವರು ಆಗಸ್ಟ್ 25 ರ ಸಂಜೆ ಟ್ವೀಟ್‌ನಲ್ಲಿ ವಾಸಿಮ್ ಅವರ ಗಾಯದ ಬಗ್ಗೆ ಮಾಹಿತಿ ನೀಡಿದ್ದಾರೆ. “ಮೊಹಮ್ಮದ್ ವಾಸಿಂ ಜೂನಿಯರ್ ಅಭ್ಯಾಸದ ಅವಧಿಯಲ್ಲಿ ಬೌಲಿಂಗ್ ಮಾಡುವಾಗ ಇಂಜುರಿಗೆ ಒಳಗಾಗಿದ್ದು, ಅಲ್ಲಿಂದ ಅವರನ್ನು ವೈದ್ಯಕೀಯ ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.
Update — Mohammad Wasim Jr has felt back pain while bowling during practice sessions and has been sent to the hospital for further medical assistance. #AsiaCup2022
— Arfa Feroz Zake (@ArfaSays_) August 25, 2022
21 ವರ್ಷದ ಮೊಹಮ್ಮದ್ ವಾಸಿಂ ಜೂನಿಯರ್ ಕಳೆದ ವರ್ಷವಷ್ಟೇ ಪಾಕಿಸ್ತಾನ ಪರ ಟಿ20 ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ, ಈ ವರ್ಷ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ವಾಸಿಂ ಇದುವರೆಗೆ ಪಾಕಿಸ್ತಾನ ಪರ 11 ಟಿ20 ಪಂದ್ಯಗಳಲ್ಲಿ 17 ವಿಕೆಟ್ ಪಡೆದಿದ್ದರೆ, 8 ಏಕದಿನ ಪಂದ್ಯಗಳಲ್ಲಿ 15 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಹಾಕಿಕೊಂಡಿದ್ದಾರೆ. ಶಾಹೀನ್ ಶಾ ಆಫ್ರಿದಿ ಅನುಪಸ್ಥಿತಿಯಲ್ಲಿ ವಾಸಿಮ್ ಪಾಕಿಸ್ತಾನದ ಆಟಗಾರರ XI ನಲ್ಲಿ ಸ್ಥಾನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯಾವಳಿಯ ಪ್ರಾರಂಭದ ಸಮೀಪದಲ್ಲಿ ಅವರ ಗಾಯದ ಸುದ್ದಿ ಪಾಕಿಸ್ತಾನ ತಂಡ ಮತ್ತು ಅದರ ಅಭಿಮಾನಿಗಳ ಕಳವಳವನ್ನು ಹೆಚ್ಚಿಸಿದೆ.
ಕಳೆದ ವಾರವಷ್ಟೇ ಪಾಕಿಸ್ತಾನ ತನ್ನ ಸ್ಟಾರ್ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ಗಾಯಗೊಂಡಿದ್ದ ಆಘಾತಕಾರಿ ಸುದ್ದಿಯನ್ನು ಎದುರಿಸಬೇಕಾಯಿತು. ಕಳೆದ ವರ್ಷ ಭಾರತ ವಿರುದ್ಧದ ಟಿ20 ವಿಶ್ವಕಪ್ ಪಂದ್ಯದಲ್ಲಿ ತಲ್ಲಣ ಮೂಡಿಸಿದ್ದ ಶಾಹೀನ್ ಮೊಣಕಾಲಿನ ಗಾಯದಿಂದಾಗಿ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಶಾಹೀನ್ ಬದಲಿಗೆ, ಪಾಕಿಸ್ತಾನಿ ಮಂಡಳಿಯು ಮೊಹಮ್ಮದ್ ಹಸ್ನೈನ್ ಅವರನ್ನು ತಂಡಕ್ಕೆ ಸೇರಿಸಿದೆ. ಆದರೆ ಎತ್ತರದ ಎಡಗೈ ವೇಗಿ ಶಾಹೀನ್ ಇಲ್ಲದೆ, ಪಾಕಿಸ್ತಾನದ ಬೌಲಿಂಗ್ ವಿಭಾಗದ ಅನುಭವ ಕಡಿಮೆಯಾದಂತೆ ಕಾಣುತ್ತಿದೆ.
Published On - 9:35 pm, Thu, 25 August 22