Virat Kohli: ವಿರಾಟ್ ಕೊಹ್ಲಿ ಎಸೆದ ಆ ಒಂದು ಓವರ್ ಯಾಕೆ ವಿಶೇಷ ಅಂದರೆ…
Asia Cup 2022: ಈ ಬೃಹತ್ ಗುರಿಯನ್ನು ಬೆನ್ನತ್ತಿದ ಹಾಂಗ್ ಕಾಂಗ್ ಬ್ಯಾಟ್ಸ್ಮನ್ಗಳಿಗೆ ಸ್ಪಿನ್ ಮೋಡಿ ಮಾಡುವಲ್ಲಿಯೂ ವಿರಾಟ್ ಕೊಹ್ಲಿ ಸಫಲರಾಗಿದ್ದರು.
Asia Cup 2022: ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಹಾಂಗ್ ಕಾಂಗ್ ವಿರುದ್ದ ಆಕರ್ಷಕ ಅರ್ಧಶತಕ ಬಾರಿಸುವ ಮೂಲಕ ಫಾರ್ಮ್ಗೆ ಮರಳಿರುವುದನ್ನು ಖಚಿತಪಡಿಸಿದ್ದಾರೆ. 44 ಎಸೆತಗಳನ್ನು ಎದುರಿಸಿದ್ದ ಕೊಹ್ಲಿ 3 ಸಿಕ್ಸ್ ಹಾಗೂ 1 ಫೋರ್ನೊಂದಿಗೆ 59 ರನ್ ಬಾರಿಸಿದ್ದರು. ಅಲ್ಲದೆ ಸೂರ್ಯಕುಮಾರ್ ಯಾದವ್ಗೆ ಉತ್ತಮ ಸಾಥ್ ನೀಡುವ ಮೂಲಕ ತಂಡದ ಮೊತ್ತವನ್ನು 192 ಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ಈ ಬೃಹತ್ ಗುರಿಯನ್ನು ಬೆನ್ನತ್ತಿದ ಹಾಂಗ್ ಕಾಂಗ್ ಬ್ಯಾಟ್ಸ್ಮನ್ಗಳಿಗೆ ಸ್ಪಿನ್ ಮೋಡಿ ಮಾಡುವಲ್ಲಿಯೂ ಕೊಹ್ಲಿ ಸಫಲರಾಗಿದ್ದರು. ಅಂದರೆ ಐವರು ಬೌಲರ್ಗಳೊಂದಿಗೆ ಕಣಕ್ಕಿಳಿದಿದ್ದ ಟೀಮ್ ಇಂಡಿಯಾ ಪರ ಹೆಚ್ಚುವರಿ ಬೌಲರ್ ಆಗಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಈ ಮೂಲಕ ಬರೋಬ್ಬರಿ 6 ವರ್ಷಗಳ ಬಳಿಕ ಮತ್ತೊಮ್ಮೆ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಬೌಲರ್ಗಳ ಪಟ್ಟಿಯಲ್ಲಿ ಕಾಣಿಸಿಕೊಂಡರು.
ಈ ಹಿಂದೆ 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಟಿ20 ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬೌಲಿಂಗ್ ಮಾಡಿದ್ದರು. ಇದಾದ ಬಳಿಕ ಚುಟುಕು ಕ್ರಿಕೆಟ್ನಲ್ಲಿ ಮತ್ತೆ ಚೆಂಡೆಸೆಯುವ ಪ್ರಯತ್ನ ಮಾಡಿರಲಿಲ್ಲ. ಇದೀಗ ಹಾಂಗ್ ಕಾಂಗ್ ವಿರುದ್ದದ ಪಂದ್ಯದಲ್ಲಿ ಟೀಮ್ ಇಂಡಿಯಾದ 6ನೇ ಬೌಲರ್ ಆಗಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದು ವಿಶೇಷ.
17ನೇ ಓವರ್ ಬೌಲಿಂಗ್ ಮಾಡಿದ್ದ ಕೊಹ್ಲಿ ನೀಡಿದ್ದು ಕೇವಲ 6 ರನ್ ಮಾತ್ರ. ಈ ಮೂಲಕ ನಾಯಕ ರೋಹಿತ್ ಶರ್ಮಾ ಇಟ್ಟುಕೊಂಡಿದ್ದ ನಿರೀಕ್ಷೆಯನ್ನು ಉಳಿಸಿಕೊಂಡರು. ಆದರೆ ಈ ಬಾರಿ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರಲಿಲ್ಲ. ಅಂದರೆ 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದ 1.4 ಓವರ್ ಬೌಲ್ ಮಾಡಿದ್ದ ಮಾಡಿದ್ದ ಕೊಹ್ಲಿ 15 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಈ ಬಾರಿ ವಿಕೆಟ್ ಪಡೆಯಲು ಯಶಸ್ವಿಯಾಗದಿದ್ದರೂ ರನ್ ನಿಯಂತ್ರಿಸುವಲ್ಲಿ ಸಫಲರಾಗಿದ್ದರು.
ಒಟ್ಟಿನಲ್ಲಿ ಬ್ಯಾಟಿಂಗ್ನಲ್ಲಿ ಫಾರ್ಮ್ಗೆ ಬರುತ್ತಿದ್ದಂತೆ ವಿರಾಟ್ ಕೊಹ್ಲಿ ಬೌಲಿಂಗ್ ಮೂಲಕ ಕೂಡ ಮೋಡಿ ಮಾಡಲು ಮುಂದಾಗಿರುವುದು ವಿಶೇಷ. ಅದರಲ್ಲೂ ಐವರು ಬೌಲರ್ಗಳೊಂದಿಗೆ ಟೀಮ್ ಇಂಡಿಯಾ ಕಣಕ್ಕಿಳಿದರೆ 6ನೇ ಬೌಲರ್ ಯಾರು ಎಂಬ ಪ್ರಶ್ನೆಗೆ ಸದ್ಯದ ಉತ್ತರ, ವಿರಾಟ್ ಕೊಹ್ಲಿ.