ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾಯುತ್ತಿದೆ. ಇತ್ತೀಚೆಗೆ, ಈ ಉಭಯ ತಂಡಗಳು ಏಷ್ಯಾಕಪ್‌ನಲ್ಲಿ (Asia Cup) ಎರಡು ಬಾರಿ ಮುಖಾಮುಖಿಯಾಗಿದ್ದವು. ಆ ಬಳಿಕ 2022 ರ ಟಿ20 ವಿಶ್ವಕಪ್‌ನಲ್ಲಿ (T20 World Cup) ಎರಡು ತಂಡಗಳ ನಡುವೆ ರೋಚಕ ಪಂದ್ಯ ನಡೆದಿತ್ತು. ಇದೀಗ ಭಾರತ-ಪಾಕಿಸ್ತಾನ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುವ ಕಾಲ ಸನಿಹವಾಗಿದೆ. ಈ ಎರಡೂ ತಂಡಗಳು 2023ರ ಏಷ್ಯಾಕಪ್ (Asia Cup 2023)ನಲ್ಲಿ ಎದುರುಬದುರಾಗಲಿವೆ. ಏಷ್ಯನ್ ರಾಷ್ಟ್ರಗಳ 2023ರ ವೇಳಾಪಟ್ಟಿಯನ್ನು ಗುರುವಾರ ಪ್ರಕಟಿಸಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜೈ ಶಾ (Jay Shah) ಟ್ವೀಟ್ ಮಾಡುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಈ ಪಟ್ಟಿಯಲ್ಲಿ ಬಹು ನಿರೀಕ್ಷಿತ ಏಷ್ಯಾಕಪ್ ಬಗ್ಗೆಯೂ ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಈ ಬಾರಿಯ ಏಷ್ಯಾಕಪ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸಲಿದ್ದು, ಈ ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಗುಂಪಿನಲ್ಲಿರುವುದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಈ ಬಾರಿಯ ಏಷ್ಯಾಕಪ್ ಸೆಪ್ಟೆಂಬರ್‌ನಲ್ಲಿ ನಡೆಯಲಿದ್ದು, ಒಟ್ಟು 6 ತಂಡಗಳು ಈ ಟೂರ್ನಿಯಲ್ಲಿ ಆಡಲಿವೆ. ಈ ಬಾರಿಯ ಪಂದ್ಯಾವಳಿ ಏಕದಿನ ಮಾದರಿಯಲ್ಲಿ ನಡೆಯಲಿದ್ದು, ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಸಿಸಿ ಸಿದ್ಧಪಡಿಸಿರುವ ಸ್ವರೂಪದ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿವೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಗ್ರೂಪ್ 1ರಲ್ಲಿ ಸ್ಥಾನ ಪಡೆದಿದ್ದರೆ, ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಪಡೆಯುವ ತಂಡ ಈ ಎರಡು ತಂಡಗಳೊಂದಿಗೆ ಮೊದಲನೇ ಗುಂಪಿನಲ್ಲಿ ಸ್ಥಾನ ಪಡೆಯಲ್ಲಿದೆ. ಇನ್ನು ಎರಡನೇ ಗುಂಪಿನಲ್ಲಿ ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ ತಂಡಗಳು ಸ್ಥಾನ ಪಡೆದಿವೆ. ಲೀಗ್ ಹಂತದಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು ನಂತರ, ಸೂಪರ್-4 ಸುತ್ತಿನ ಪಂದ್ಯಗಳನ್ನು ಆಡಲಾಗುತ್ತದೆ. ಇದರರ್ಥ ಭಾರತ, ಪಾಕಿಸ್ತಾನ ಮತ್ತು ಕ್ವಾಲಿಫೈಯರ್ ತಂಡದ ಪೈಕಿ, ಒಂದು ತಂಡದ ಪ್ರಯಾಣವು ಗುಂಪು ಹಂತದಲ್ಲಿಯೇ ಕೊನೆಗೊಳ್ಳಲಿದೆ. ಸೂಪರ್ 4 ಸುತ್ತಿನಲ್ಲಿ ಒಟ್ಟು 6 ಪಂದ್ಯಗಳು ನಡೆಯಲಿದ್ದು, ಆ ಬಳಿಕ ಫೈನಲ್ ಆಡುವ ಎರಡು ತಂಡಗಳನ್ನು ನಿರ್ಧರಿಸಲಾಗುತ್ತದೆ. ಅಂದರೆ ಏಷ್ಯಾಕಪ್‌ನಲ್ಲಿ ಒಟ್ಟು 13 ಪಂದ್ಯಗಳು ನಡೆಯಲಿವೆ.
Presenting the @ACCMedia1 pathway structure & cricket calendars for 2023 & 2024! This signals our unparalleled efforts & passion to take this game to new heights. With cricketers across countries gearing up for spectacular performances, it promises to be a good time for cricket! pic.twitter.com/atzBO4XjIn
— Jay Shah (@JayShah) January 5, 2023
ಏಷ್ಯಾಕಪ್‌ನಲ್ಲಿ ಮೂರು ಬಾರಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಮೊದಲನೆಯದಾಗಿ ಉಭಯ ತಂಡಗಳ ನಡುವಿನ ಪೈಪೋಟಿ ಲೀಗ್ ಸುತ್ತಿನಲ್ಲಿ ನಡೆಯಲಿದೆ. ಇದಾದ ಬಳಿಕ ಸೂಪರ್-4 ಸುತ್ತಿನಲ್ಲೂ ಉಭಯ ತಂಡಗಳು ಸೆಣಸಬಹುದು. ಬಳಿಕ ಪಾಯಿಂಟ್ ಪಟ್ಟಿಯಲ್ಲಿ ಉಭಯ ತಂಡಗಳು ಅಗ್ರ ಎರಡು ಸ್ಥಾನ ಪಡೆದರೆ, ಎರಡೂ ತಂಡಗಳು ಫೈನಲ್ನಲ್ಲೂ ಹೋರಾಟ ನಡೆಸಲಿವೆ.
‘ನಿವೃತ್ತಿಯ ಬಳಿಕ ಭಾರತ- ಪಾಕ್ ಪಂದ್ಯವನ್ನು ಲೈವ್ ನೋಡುವುದೇ ನನ್ನ ಜೀವನದ ಹೆಬ್ಬಯಕೆ’; ಆಸೀಸ್ ನಾಯಕ
ವಾಸ್ತವವಾಗಿ 2023ರ ಏಷ್ಯಾಕಪ್ ಪಾಕಿಸ್ತಾನದಲ್ಲಿ ನಡೆಯಬೇಕಿತ್ತು. ಆದರೆ ಇತ್ತೀಚೆಗೆ ಎಸಿಸಿ ಮುಖ್ಯಸ್ಥ ಜೈ ಶಾ ಈ ಪಂದ್ಯಾವಳಿಯನ್ನು ಪಾಕಿಸ್ತಾನಿ ನೆಲದಲ್ಲಿ ಆಯೋಜಿಸುವುದಿಲ್ಲ ಎಂದು ಹೇಳಿದ್ದರು. ಈಗ ಈ ಟೂರ್ನಿಯನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:19 pm, Thu, 5 January 23