
ಟೀಂ ಇಂಡಿಯಾ ವಿರುದ್ಧದ ಏಷ್ಯಾಕಪ್ (Asia Cup 2023) ಪಂದ್ಯಕ್ಕೆ ಪಾಕ್ (India vs Pakistan) ತಂಡವನ್ನು ಪ್ರಕಟಿಸಲಾಗಿದೆ. ಆದರೆ ಟೀಂ ಇಂಡಿಯಾ ಮಾತ್ರ ಈ ಕಾಯುವಿಕೆಯನ್ನು ನಾಳೆ ಟಾಸ್ ನಡೆಯುವವರೆಗೆ ಮುಂದುವರೆಸುವ ಇರಾದೆಯೊಂದಿಗಿದೆ. ಹೀಗಾಗಿ ಟೀಂ ಇಂಡಿಯಾ (Team India) ಅಭಿಮಾನಿಗಳು ನಾಳೆ ಪಂದ್ಯ ಆರಂಭವಾಗುವವರೆಗು ಕಾಯಬೇಕಿದೆ. ಇನ್ನು ಭಾರತದ ವಿರುದ್ಧ ಬಲಿಷ್ಠ ತಂಡವನ್ನು ಕಣಕ್ಕಿಳಿಸಲು ಚಿಂತಿಸಿರುವ ಪಾಕ್ ಮಂಡಳಿ, ನೇಪಾಳ ವಿರುದ್ಧ ಕಣಕ್ಕಿಳಿದಿದ್ದ ತಂಡವನ್ನೇ ಭಾರತದ ವಿರುದ್ಧ ಆಡಿಸಲು ತೀರ್ಮಾನಿಸಿದೆ. ಪಂದ್ಯ ನಡೆಯುವ ಒಂದು ದಿನ ಮುಂಚಿತವಾಗಿ ಪಾಕ್ ತಂಡ ಪ್ರಕಟವಾಗಿರುವುದರಿಂದ, ಬಾಬರ್ ಪಡೆಯನ್ನು ನೋಡಿಕೊಂಡು ಟೀಂ ಇಂಡಿಯಾವನ್ನು ಆಯ್ಕೆ ಮಾಡುವುದಕ್ಕೆ ರೋಹಿತ್ (Rohit Sharma) ಹಾಗೂ ಕೋಚ್ ರಾಹುಲ್ಗೆ ಮತ್ತಷ್ಟು ಸುಲಭದಾಯಕವಾಗಿದೆ. ಆದರೆ ಅದಕ್ಕೂ ಮುನ್ನ ನಾಳಿನ ಪಂದ್ಯಕ್ಕೆ ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗ ಹೇಗಿರಲಿದೆ ಎಂಬುದಕ್ಕೆ ಇಲ್ಲಿದೆ ವಿವರ.
ಪಂದ್ಯ ಯಾವುದೇ ಇರಲಿ, ಆರಂಭಿಕ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡುವ ಹೊಣೆ ಹೊತ್ತಿರುತ್ತದೆ. ಅದೇ ಜವಾಬ್ದಾರಿಯು ಆರಂಭಿಕ ಜೋಡಿ ನಾಯಕ ರೋಹಿತ್ ಮತ್ತು ಶುಭ್ಮನ್ ಗಿಲ್ ಮೇಲೂ ಇರುತ್ತದೆ. ಪವರ್ ಪ್ಲೇನ ಮೊದಲ 10 ಓವರ್‌ಗಳಲ್ಲಿ ರೋಹಿತ್-ಶುಭ್ಮನ್ ಉತ್ತಮ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಲು ಪ್ರಯತ್ನಿಸಲಿದ್ದಾರೆ.
Breaking: ಟೀಂ ಇಂಡಿಯಾ ವಿರುದ್ಧದ ಪಂದ್ಯಕ್ಕೆ ಪಾಕ್ ತಂಡ ಪ್ರಕಟ! ಬಾಬರ್ ಪಡೆಯಲ್ಲಿ ಯಾರೆಲ್ಲ ಇದ್ದಾರೆ ಗೊತ್ತಾ?
ಎಂದಿನಂತೆ ವಿರಾಟ್ ಕೊಹ್ಲಿ ಮೂರನೇ ಸ್ಥಾನದಲ್ಲಿ ಮತ್ತು ಶ್ರೇಯಸ್ ಅಯ್ಯರ್ ನಾಲ್ಕನೇ ಸ್ಥಾನದಲ್ಲಿ ಆಡಲಿದ್ದಾರೆ. ಇನ್ನು ಕೆಎಲ್ ರಾಹುಲ್ ಗಾಯದ ಸಮಸ್ಯೆಯಿಂದಾಗಿ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಹೀಗಾಗಿ ಇಶಾನ್ ಕಿಶನ್ಗೆ ವಿಕೆಟ್ ಕೀಪಿಂಗ್ ಜೊತೆಗೆ 5ನೇ ಕ್ರಮಾಂಕದ ಬ್ಯಾಟಿಂಗ್ ಜವಬ್ದಾರಿಯೂ ಬೀಳಲಿದೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಮತ್ತು ರವೀಂದ್ರ ಜಡೇಜಾ ಏಳನೇ ಕ್ರಮಾಂಕದಲ್ಲಿ ಬರಲಿದ್ದಾರೆ.
ಎಡಗೈ ಸ್ಪಿನ್ನರ್ ಹಾಗೂ ಆಲ್ರೌಂಡರ್ ಆಗಿ ರವೀಂದ್ರ ಜಡೇಜಾ ತಂಡದಲ್ಲಿ ಸ್ಥಾನ ಪಡೆಯುವುದರಿಂದ ಅಕ್ಷರ್ ಪಟೇಲ್ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಗುವುದು ಅನುಮಾನ. ಹೀಗಾಗಿ ಪಾಕ್ ವಿರುದ್ಧ ಕುಲ್ದೀಪ್ ಯಾದವ್ ಕಣಕ್ಕಿಳಿಯಲ್ಲಿದ್ದಾರೆ. ಏಕೆಂದರೆ ತಂಡಕ್ಕೆ ಆಪ್ ಸ್ಪಿನ್ನರ್ ಜೊತೆಗೆ ಗೂಗ್ಲಿ ಮಾಸ್ಟರ್ನ ಅಗತ್ಯತೆಯೂ ಹೆಚ್ಚಿದೆ. ಇದಕ್ಕೆ ಪೂರಕವಾಗಿ ಕ್ಯಾಂಡಿ ಪಿಚ್ ಕೂಡ ಹೆಚ್ಚಾಗಿ ಸ್ಪಿನ್ನರ್ಗೆ ನೆರವಾಗಲಿದೆ.
ಟೀಮ್ ಇಂಡಿಯಾದ ವೇಗದ ಬೌಲಿಂಗ್ ಜವಾಬ್ದಾರಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಅವರ ಮೇಲಿರಲಿದೆ. ಈ ಮೂವರಿಗೂ ಡೆತ್ ಓವರ್‌ಗಳ ಜೊತೆಗೆ, ಆರಂಭದಲ್ಲಿ ವಿಕೆಟ್‌ಗಳನ್ನು ಉರುಳಿಸುವ ಮೂಲಕ ರನ್‌ಗಳಿಗೆ ಕಡಿವಾಣ ಹಾಕುವ ಸವಾಲು ಎದುರಾಗಿದೆ.
ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:14 pm, Fri, 1 September 23