ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ

| Updated By: ಝಾಹಿರ್ ಯೂಸುಫ್

Updated on: Aug 28, 2023 | 10:52 PM

ಈ ಬಾರಿಯ ಏಷ್ಯಾಕಪ್​ ಬುಧವಾರದಿಂದ (ಆಗಸ್ಟ್ 30) ಶುರುವಾಗಲಿದೆ. ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳನ್ನಾಡಲಾಗುತ್ತದೆ. ಇನ್ನು ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳವನ್ನು ಎದುರಿಸಿದರೆ, ಶ್ರೀಲಂಕಾ ತಂಡ ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯಲಿದೆ.

ಏಷ್ಯಾಕಪ್ ಆರಂಭಕ್ಕೂ ಮುನ್ನವೇ ಸಂಕಷ್ಟಕ್ಕೆ ಸಿಲುಕಿದ ಶ್ರೀಲಂಕಾ
Sri Lanka
Follow us on

ಏಷ್ಯಾಕಪ್ 2023 ಆರಂಭಕ್ಕೆ ಕೇವಲ ಎರಡು ದಿನಗಳು ಮಾತ್ರ ಉಳಿದಿವೆ. ಆದರೆ ಶ್ರೀಲಂಕಾ ಇನ್ನೂ ಕೂಡ ಏಷ್ಯಾಕಪ್​ ತಂಡವನ್ನು ಪ್ರಕಟಿಸಿಲ್ಲ. ಇದಕ್ಕೆ ಮುಖ್ಯ ಕಾರಣ ಆಟಗಾರರ ಗಾಯದ ಸಮಸ್ಯೆ. ಪ್ರಸ್ತುತ ಮಾಹಿತಿ ಪ್ರಕಾರ ನಾಲ್ವರು ಪ್ರಮುಖ ಆಟಗಾರರು ಏಷ್ಯಾಕಪ್​ನಿಂದ ಹೊರಗುಳಿಯುವ ಸಾಧ್ಯತೆಯಿದೆ.

ಈ ಪಟ್ಟಿಯಲ್ಲಿ ತಂಡದ ಪ್ರಮುಖ ಆಲ್​ರೌಂಡರ್ ವನಿಂದು ಹಸರಂಗ ಕೂಡ ಕಾಣಿಸಿಕೊಂಡಿದ್ದಾರೆ. ಹಸರಂಗ ಲಂಕಾ ಪ್ರೀಮಿಯರ್ ಲೀಗ್ ವೇಳೆ ಗಾಯಗೊಂಡಿದ್ದು, ಹೀಗಾಗಿ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇನ್ನು ಭುಜದ ಗಾಯದ ಕಾರಣ ಪ್ರಮುಖ ವೇಗಿ ದುಷ್ಮಂತ ಚಮೀರಾ ಏಷ್ಯಾಕಪ್​ನಿಂದ ಹೊರಗುಳಿಯುತ್ತಿರುವುದು ಖಚಿತವಾಗಿದೆ. ಹಾಗೆಯೇ ಅಭ್ಯಾಸದ ವೇಳೆ ದಿಲ್ಶನ್ ಮಧುಶಂಕ ಕೂಡ ಗಾಯಗೊಂಡಿದ್ದು, ಅವರು ಸಹ ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.

ಈ ಮೂವರಲ್ಲದೆ ಲಹಿರು ಕುಮಾರ ಸಹ ಗಾಯದಿಂದ ಬಳಲುತ್ತಿದ್ದು, ಹೀಗಾಗಿ ಅವರು ಕೂಡ ಅಲಭ್ಯರಾಗುವ ಸಾಧ್ಯತೆಯಿದೆ. ಇತ್ತ ಅತ್ಯುತ್ತಮ ಬದಲಿ ಆಟಗಾರರ ಕೊರತೆಯಿಂದ ಶ್ರೀಲಂಕಾ ತಂಡವು ಸಂಕಷ್ಟಕ್ಕೆ ಸಿಲುಕಿದೆ. ಇದೇ ಕಾರಣದಿಂದಾಗಿ ಇದೀಗ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಂಡವನ್ನು ಪ್ರಕಟಿಸಲು ವಿಳಂಬ ಮಾಡುತ್ತಿದೆ.

ಲಂಕಾ ತಂಡಕ್ಕೆ ಉತ್ತಮ ಅವಕಾಶ:

ಈ ಬಾರಿಯ ಏಷ್ಯಾಕಪ್​​ನ ಬಹುತೇಕ ಪಂದ್ಯಗಳು ಲಂಕಾದಲ್ಲಿ ನಡೆಯುತ್ತಿರುವುದರಿಂದ ಪ್ರಶಸ್ತಿ ಗೆಲ್ಲುವ ಪಟ್ಟಿಯಲ್ಲಿ ಶ್ರೀಲಂಕಾ ಫೇವರೇಟ್ ಎನಿಸಿಕೊಂಡಿತ್ತು. ಆದರೀಗ ನಾಲ್ವರು ಪ್ರಮುಖ ಆಟಗಾರರು ಹೊರಗುಳಿಯುತ್ತಿರುವುದು ತಂಡಕ್ಕೆ ಹಿನ್ನಡೆಯಾಗಬಹುದು.

ಏಷ್ಯಾಕಪ್​ನಲ್ಲಿ ಭಾರತದ್ದೇ ಪಾರುಪತ್ಯ:

ಏಷ್ಯಾಕಪ್ ಇತಿಹಾಸದಲ್ಲಿ ಭಾರತ ತಂಡ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದಿದೆ. ಟೀಮ್ ಇಂಡಿಯಾ ಏಳು ಬಾರಿ ಪ್ರಶಸ್ತಿ ಜಯಿಸಿದರೆ, ಶ್ರೀಲಂಕಾ ಆರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಬಾರಿ ಶ್ರೀಲಂಕಾದಲ್ಲೇ ಟೂರ್ನಿ ನಡೆಯುತ್ತಿರುವುದರಿಂದ ಪ್ರಶಸ್ತಿ ವಿಷಯದಲ್ಲಿ ಭಾರತದ ದಾಖಲೆಯನ್ನು ಸರಿಗಟ್ಟುವ ಉತ್ತಮ ಅವಕಾಶ ಲಂಕಾ ಪಡೆಗಿತ್ತು. ಆದರೀಗ ಶ್ರೀಲಂಕಾ ತಂಡಕ್ಕೆ ಗಾಯಾಳುಗಳದ್ದೇ ಚಿಂತೆಯಾಗಿ ಬಿಟ್ಟಿದೆ.

ಇದನ್ನೂ ಓದಿ: ಏಷ್ಯಾಕಪ್​ನಲ್ಲಿ ನಿರ್ಧಾರವಾಗಲಿದೆ ಯಾರು ನಂಬರ್ 1

ಏಷ್ಯಾಕಪ್ ಯಾವಾಗ ಶುರು?

ಈ ಬಾರಿಯ ಏಷ್ಯಾಕಪ್​ ಬುಧವಾರದಿಂದ (ಆಗಸ್ಟ್ 30) ಶುರುವಾಗಲಿದೆ. ಪಾಕಿಸ್ತಾನ್ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಈ ಟೂರ್ನಿಯಲ್ಲಿ ಒಟ್ಟು 13 ಪಂದ್ಯಗಳನ್ನಾಡಲಾಗುತ್ತದೆ. ಇನ್ನು ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡವು ನೇಪಾಳವನ್ನು ಎದುರಿಸಿದರೆ, ಶ್ರೀಲಂಕಾ ತಂಡ ಬಾಂಗ್ಲಾದೇಶ್ ವಿರುದ್ಧ ಕಣಕ್ಕಿಳಿಯಲಿದೆ. ಹಾಗೆಯೇ ಸೆಪ್ಟೆಂಬರ್ 2 ರಂದು ನಡೆಯಲಿರುವ ಪಾಕಿಸ್ತಾನ್ ವಿರುದ್ಧದ ಪಂದ್ಯದ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ.