
2025 ರ ಏಷ್ಯಾಕಪ್‌ಗಾಗಿ (Asia Cup 2025) ಟೀಂ ಇಂಡಿಯಾವನ್ನು ಪ್ರಕಟಿಸಿದ ಬಳಿಕ ತಂಡದ ಅನೇಕ ಮಾಜಿ ಅನುಭವಿ ಆಟಗಾರರು ತಂಡದ ಆಯ್ಕೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲು ಪ್ರಾರಂಭಿಸಿದ್ದಾರೆ. ಅದರಲ್ಲೂ ಭಾರತ ತಂಡದ ಪರ ಏಕೈಕ ಪಂದ್ಯವನ್ನಾಡಿರುವ ಯುವ ವೇಗಿ ಹರ್ಷಿತ್ ರಾಣಾ (Harshith Rana) ಆಯ್ಕೆಯ ಬಗ್ಗೆ ಭಾರತದ ಮಾಜಿ ಕ್ರಿಕೆಟಿಗ ಕೆ. ಶ್ರೀಕಾಂತ್ ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಹರ್ಷಿತ್ ರಾಣಾ ಈ ತಂಡದಲ್ಲಿ ಎಲ್ಲಿಂದ ಬಂದರು? ಎಂದು ಪ್ರಶ್ನೆ ಮಾಡಿರುವ ಶ್ರೀಕಾಂತ್, ‘ಐಪಿಎಲ್‌ನಲ್ಲಿ ಹರ್ಷಿತ್ ರಾಣಾ ಅವರ ಪ್ರದರ್ಶನ ತುಂಬಾ ಕಳಪೆಯಾಗಿತ್ತು. ಹೀಗಿರುವಾಗ ಅವರನ್ನು ಆಯ್ಕೆ ಮಾಡುವ ಮೂಲಕ ನೀವು ಇತರ ಆಟಗಾರರಿಗೆ ಯಾವ ಸಂದೇಶವನ್ನು ನೀಡುತ್ತಿದ್ದೀರಿ?. ಹರ್ಷಿತ್ ರಾಣಾ ಬದಲಿಗೆ ವಾಷಿಂಗ್ಟನ್ ಸುಂದರ್ ತಂಡದಲ್ಲಿ ಸ್ಥಾನ ಪಡೆಯಬೇಕಿತ್ತು ಎಂದು ಶ್ರೀಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಶ್ರೀಕಾಂತ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ, ‘ಹರ್ಷಿತ್ ರಾಣಾ ಎಲ್ಲಿಂದ ಬಂದರು? ಅವರು ಐಪಿಎಲ್‌ನಲ್ಲಿ ತುಂಬಾ ಕಳಪೆ ಪ್ರದರ್ಶನ ನೀಡಿದ್ದರು. ಅವರ ಎಕಾನಮಿ ರೇಟ್ ಪ್ರತಿ ಓವರ್‌ಗೆ 10 ರನ್‌ಗಳಿಗಿಂತ ಹೆಚ್ಚಿತ್ತು. ಹೀಗಿರುವಾಗ ಅವರನ್ನು ತಂಡಕ್ಕೆ ಆಯ್ಕೆ ಮಾಡುವ ಮೂಲಕ ಪ್ರಸಿದ್ಧ್ ಕೃಷ್ಣ ಮತ್ತು ಸಿರಾಜ್‌ಗೆ ನೀವು ಯಾವ ಸಂದೇಶವನ್ನು ನೀಡುತ್ತಿದ್ದೀರಿ? ಎಂಬ ಪ್ರಶ್ನೆಯನ್ನು ಬಿಸಿಸಿಐ ಮುಂದಿಟ್ಟಿದ್ದಾರೆ. ಹಾಗೆಯೇ ಶಿವಂ ದುಬೆ ಆಯ್ಕೆಯ ಬಗ್ಗೆಯೂ ಅಸಮಾಧಾನಗೊಂಡಿರುವ ಅವರು, ಶಿವಂ ದುಬೆ ಬದಲಿಗೆ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ಸಿಗಬೇಕಿತ್ತು.
ಏಕೆಂದರೆ ಸುಂದರ್ ನಿಮಗೆ 6ನೇ ಬೌಲಿಂಗ್ ಆಯ್ಕೆಯ ಜೊತೆಗೆ ಬ್ಯಾಟಿಂಗ್ನಲ್ಲೂ ನೆರವಾಗುತ್ತಿದ್ದರು. ಆದರೆ ನೀವು ಅವರನ್ನು ಕಡೆಗಣಿಸಿ, ತಿಲಕ್ ವರ್ಮಾ, ಅಭಿಷೇಕ್ ಶರ್ಮಾ ಅಥವಾ ಶಿವಂ ದುಬೆ ಅವರನ್ನು ಆರನೇ ಬೌಲರ್ ಆಗಿ ನೋಡುತ್ತಿದ್ದೀರಿ, ಇವರು ಐಪಿಎಲ್‌ನಲ್ಲಿ ಅಷ್ಟೇನೂ ಬೌಲಿಂಗ್ ಮಾಡಿಲ್ಲ. ಹೀಗಿರುವಾಗ ನೀವು 8 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರ ಜೊತೆಗೆ ಬೌಲಿಂಗ್ ಮಾಡುವ ಆಟಗಾರನನ್ನು ಬಯಸಿದರೆ, ವಾಷಿಂಗ್ಟನ್ ಸುಂದರ್ ಸೂಕ್ತ ಆಯ್ಕಯಾಗುತ್ತಿದ್ದರು ಎಂದು ಶ್ರೀಕಾಂತ್ ಹೇಳಿದ್ದಾರೆ.
Asia Cup 2025: ಸಂಜು ಸ್ಯಾಮ್ಸನ್ರನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿದ್ರಾ ಗೌತಮ್ ಗಂಭೀರ್..?
ಟೀಂ ಇಂಡಿಯಾದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಆಯ್ಕೆ ಮಾಡದಿರುವ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಜೈಸ್ವಾಲ್ ಟಿ20 ಸ್ವರೂಪದಲ್ಲಿಯೂ ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ, ಶ್ರೇಯಸ್ ಅಯ್ಯರ್ ಐಪಿಎಲ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದರು. ಆದರೆ ಏಷ್ಯಾಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಗಲಿಲ್ಲ. ಹೀಗಾಗಿ ಅವರಿಬ್ಬರನ್ನು ಕಡೆಗಣಿಸಿರುವುದು ಕೂಡ ಅಭಿಮಾನಿಗಳ ಹಾಗೂ ಅನುಭವಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:31 pm, Wed, 20 August 25