ಮಾಡು ಇಲ್ಲವೇ ಮಡಿ… 2180 ದಿನಗಳಿಂದ ಗೆಲ್ಲದ ಪಾಕಿಸ್ತಾನ್
Asia Cup 2025: ಏಷ್ಯಾಕಪ್ನ ಸೂಪರ್-4 ಹಂತದ ಮೂರನೇ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳು ಸೆಣಸಲಿದೆ. ದುಬೈನಲ್ಲಿ ನಡೆಯಲಿರುವ ಈ ಮ್ಯಾಚ್ ಉಭಯ ತಂಡಗಳ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಹೀಗಾಗಿಯೇ ಇಂದಿನ ಪಂದ್ಯದಲ್ಲಿ ಭರ್ಜರಿ ಪೈಪೋಟಿ ನಿರೀಕ್ಷಿಸಬಹುದು.

ಏಷ್ಯಾಕಪ್ನ 15ನೇ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ. ಏಕೆಂದರೆ ಎರಡೂ ತಂಡಗಳು ಸೂಪರ್-4 ಹಂತದ ಮೊದಲ ಮ್ಯಾಚ್ನಲ್ಲಿ ಮುಗ್ಗರಿಸಿದೆ.
ಪಾಕಿಸ್ತಾನ್ ತಂಡವು ಭಾರತದ ವಿರುದ್ಧ 6 ವಿಕೆಟ್ಗಳಿಂದ ಹೀನಾಯ ಸೋಲನುಭವಿಸಿದರೆ, ಶ್ರೀಲಂಕಾ ತಂಡವು ಬಾಂಗ್ಲಾದೇಶ್ ವಿರುದ್ಧ 4 ವಿಕೆಟ್ಗಳಿಂದ ಪರಾಜಯಗೊಂಡಿತ್ತು. ಇದೀಗ ಫೈನಲ್ ರೇಸ್ನಲ್ಲಿ ಉಳಿಯಬೇಕಿದ್ದರೆ ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕ. ಈ ಮ್ಯಾಚ್ನಲ್ಲಿ ಸೋಲುವ ತಂಡ ಬಹುತೇಕ ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿಯೇ ಇಂದಿನ ಪಂದ್ಯವು ಪಾಕಿಸ್ತಾನ್ ಹಾಗೂ ಶ್ರೀಲಂಕಾ ತಂಡಗಳಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿ ಮಾರ್ಪಟ್ಟಿದೆ.
2180 ದಿನಗಳಿಂದ ಗೆಲ್ಲದ ಪಾಕಿಸ್ತಾನ್:
ಭಾರತದ ವಿರುದ್ಧದ ಸೋಲಿನ ಹೊರತಾಗಿಯೂ ಫೈನಲ್ಗೇರುವ ಕನಸು ಕಾಣುತ್ತಿರುವ ಪಾಕಿಸ್ತಾನ್ ತಂಡವು 2180 ದಿನಗಳಿಂದ ಶ್ರೀಲಂಕಾ ವಿರುದ್ಧ ಗೆದ್ದಿಲ್ಲ ಎಂಬುದು ವಿಶೇಷ. ಅಂದರೆ ಕೊನೆಯ ಬಾರಿ ಪಾಕ್ ಪಡೆ ಲಂಕಾ ವಿರುದ್ಧ ಟಿ20 ಪಂದ್ಯ ಗೆದ್ದಿರುವುದು 2017 ರಲ್ಲಿ ಎಂದರೆ ನಂಬಲೇಬೇಕು. ಇದಾದ ಬಳಿಕ ಉಭಯ ತಂಡಗಳು 5 ಬಾರಿ ಮುಖಾಮುಖಿಯಾಗಿವೆ. ಈ ವೇಳೆ ಎಲ್ಲಾ ಪಂದ್ಯಗಳಲ್ಲೂ ಶ್ರೀಲಂಕಾ ತಂಡ ಜಯ ಸಾಧಿಸಿದೆ.
ಪಾಕಿಸ್ತಾನ್ vs ಶ್ರೀಲಂಕಾ ಕೊನೆಯ 5 ಮುಖಾಮುಖಿ ಫಲಿತಾಂಶ:
- ಪಾಕಿಸ್ತಾನ್ vs ಶ್ರೀಲಂಕಾ (ಲಾಹೋರ್, 2022): ಶ್ರೀಲಂಕಾ ತಂಡಕ್ಕೆ 13 ರನ್ಗಳ ಜಯ
- ಪಾಕಿಸ್ತಾನ್ vs ಶ್ರೀಲಂಕಾ (ಲಾಹೋರ್, 2022): ಶ್ರೀಲಂಕಾ ತಂಡಕ್ಕೆ 35 ರನ್ಗಳ ಜಯ
- ಪಾಕಿಸ್ತಾನ್ vs ಶ್ರೀಲಂಕಾ (ಲಾಹೋರ್, 2022): ಶ್ರೀಲಂಕಾ ತಂಡಕ್ಕೆ 64 ರನ್ಗಳ ಜಯ
- ಪಾಕಿಸ್ತಾನ್ vs ಶ್ರೀಲಂಕಾ (ದುಬೈ, 2022): ಶ್ರೀಲಂಕಾ ತಂಡಕ್ಕೆ 22 ರನ್ಗಳ ಜಯ
- ಪಾಕಿಸ್ತಾನ್ vs ಶ್ರೀಲಂಕಾ (ದುಬೈ, 2022): ಶ್ರೀಲಂಕಾ ತಂಡಕ್ಕೆ 5 ವಿಕೆಟ್ಗಳ ಜಯ
ಅಂದರೆ ಕೊನೆಯ 5 ಮುಖಾಮುಖಿಯಲ್ಲೂ ಪಾಕಿಸ್ತಾನ್ ತಂಡಕ್ಕೆ ಸೋಲುಣಿಸುವಲ್ಲಿ ಶ್ರೀಲಂಕಾ ತಂಡ ಯಶಸ್ವಿಯಾಗಿದೆ. ಹೀಗಾಗಿಯೇ ಇಂದಿನ ಮ್ಯಾಚ್ನಲ್ಲೂ ಗೆಲ್ಲುವ ಫೇವರೇಟ್ ತಂಡವಾಗಿ ಲಂಕಾ ಪಡೆ ಗುರುತಿಸಿಕೊಂಡಿದೆ.
ಉಭಯ ತಂಡಗಳು:
ಪಾಕಿಸ್ತಾನ್ ತಂಡ: ಸಲ್ಮಾನ್ ಅಲಿ ಅಘಾ (ನಾಯಕ), ಅಬ್ರಾರ್ ಅಹ್ಮದ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಹಸನ್ ಅಲಿ, ಹಸನ್ ನವಾಝ್, ಹುಸೇನ್ ತಲತ್, ಖುಷ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ಸಾಹಿಬ್ಝಾದ್ ಫರ್ಹಾನ್, ಶಾಹೀನ್ ಅಫ್ರಿದಿ, ಸಲ್ಮಾನ್ ಮಿರ್ಝಾ, ಸೈಮ್ ಅಯ್ಯೂಬ್, ಸುಫಿಯಾನ್ ಮುಖಿಮ್.
ಇದನ್ನೂ ಓದಿ: ಟಿ20 ಇತಿಹಾಸದಲ್ಲೇ ಯಾರೂ ನಿರ್ಮಿಸದ ವಿಶ್ವ ದಾಖಲೆ ಬರೆದ ಕೀರನ್ ಪೊಲಾರ್ಡ್
ಶ್ರೀಲಂಕಾ ತಂಡ: ಚರಿತ್ ಅಸಲಂಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಕುಸಾಲ್ ಪೆರೆರಾ, ನುವಾನಿಡು ಫೆರ್ನಾಂಡೋ, ಕಮಿಂದು ಮೆಂಡಿಸ್, ಕಮಿಲ್ ಮಿಶ್ರಾ, ದಸುನ್ ಶಾನಕ, ವನಿಂದು ಹಸರಂಗ, ದುನಿತ್ ವೆಲ್ಲಲಾಗೆ, ಚಾಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ದುಷ್ಮಂತ ಚಮೀರ, ಬಿನುರ ಫೆರ್ನಾಂಡೊ, ನುವಾನ್ ತುಷಾರ, ಮಥೀಶ ಪತಿರಾಣ.
