ಟೀಮ್ ಇಂಡಿಯಾ ವಿರುದ್ದ ಕದನಕ್ಕೆ ಸಜ್ಜು: ಬಲಿಷ್ಠ ಪಡೆಯೊಂದಿಗೆ ದುಬೈಗೆ ಬಂದಿಳಿದ ಪಾಕ್ ತಂಡ..!
Asia Cup 2022: ಮುಂದಿನ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಬಾರಿಯ ಮುಖಾಮುಖಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಭಾರತ-ಪಾಕ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.

ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್ಗಾಗಿ (Asia Cup 2022) ದಿನಗಣನೆ ಶುರುವಾಗಿದೆ. ಆಗಸ್ಟ್ 27 ರಿಂದ ಶುರುವಾಗಲಿರುವ ಈ ಟೂರ್ನಿಯು ಸೆಪ್ಟೆಂಬರ್ 11 ರವರೆಗೆ ನಡೆಯಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾದರೆ, 2ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ್ ಸೆಣಸಲಿದೆ. ಮುಂದಿನ ಭಾನುವಾರ (ಆಗಸ್ಟ್ 28) ನಡೆಯಲಿರುವ ಈ ಪಂದ್ಯಕ್ಕಾಗಿ ಇದೀಗ ಪಾಕಿಸ್ತಾನ್ ಪಡೆ ದುಬೈಗೆ ಬಂದಿಳಿದಿದೆ.
ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ದದ 3 ಪಂದ್ಯಗಳ ಸರಣಿ ಮುಗಿಸಿ, ಅಲ್ಲಿಂದಲೇ ಬಾಬರ್ ಆಜಂ ನೇತೃತ್ವದ ಪಾಕಿಸ್ತಾನ್ ತಂಡವು ಯುಎಇನತ್ತ ಪ್ರಯಾಣ ಬೆಳೆಸಿತು. ಇನ್ನು ಕೆಲ ಆಟಗಾರರು ಲಾಹೋರ್ನಿಂದ ಅರಬ್ನಾಡಿಗೆ ಬಂದಿಳಿದಿದ್ದಾರೆ. ಅದರಂತೆ ಮಂಗಳವಾರ ಪಾಕ್ ಆಟಗಾರರು ದುಬೈಗೆ ತಲುಪಿದ್ದು, ಶೀಘ್ರದಲ್ಲೇ ಅಭ್ಯಾಸವನ್ನು ಆರಂಭಿಸಲಿದ್ದಾರೆ.
ಇದಾಗ್ಯೂ ಏಷ್ಯಾಕಪ್ನಿಂದ ಹೊರಗುಳಿದಿರುವ ಪಾಕ್ ವೇಗಿ ಶಾಹೀನ್ ಅಫ್ರಿದಿ ಬದಲಿ ಆಟಗಾರ ಮೊಹಮ್ಮದ್ ಹಸ್ನೈನ್ ಇನ್ನೂ ಕೂಡ ತಂಡವನ್ನು ಕೂಡಿಕೊಂಡಿಲ್ಲ. ಇಂಗ್ಲೆಂಡ್ನಲ್ಲಿ ದಿ ಹಂಡ್ರೆಡ್ ಲೀಗ್ ಆಡುತ್ತಿರುವ ಹಸ್ನೈನ್ ಶೀಘ್ರದಲ್ಲೇ ಏಷ್ಯಾಕಪ್ಗಾಗಿ ಪ್ರಯಾಣ ಬೆಳೆಸಲಿದ್ದಾರೆ ಎಂದು ತಿಳಿದು ಬಂದಿದೆ.
ಇತ್ತ ಟೀಮ್ ಇಂಡಿಯಾ ಇನ್ನಷ್ಟೇ ಯುಎಇಗೆ ಪ್ರಯಾಣ ಬೆಳೆಸಬೇಕಿದ್ದು, ಅದಕ್ಕೂ ಮುನ್ನ ಭರ್ಜರಿ ಅಭ್ಯಾಸಕ್ಕಾಗಿ ಪಾಕ್ ತಂಡವು ಸಜ್ಜಾಗುತ್ತಿದೆ. ಮುಂದಿನ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಈ ಬಾರಿಯ ಮುಖಾಮುಖಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಏಕೆಂದರೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನಲ್ಲೂ ಭಾರತ-ಪಾಕ್ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ.
ಹೀಗಾಗಿ ಅದಕ್ಕೂ ಮುನ್ನ ಏಷ್ಯಾಕಪ್ನಲ್ಲಿ ಸಾಂಪ್ರದಾಯಿಕ ಎದುರಾಳಿ ವಿರುದ್ದ ಮೇಲುಗೈ ಸಾಧಿಸುವ ಪ್ಲ್ಯಾನ್ನಲ್ಲಿದೆ ಉಭಯ ತಂಡಗಳು. ಆದರೆ ಇತ್ತ 2021ರ ಟಿ20 ವಿಶ್ವಕಪ್ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿ ಟೀಮ್ ಇಂಡಿಯಾ ಇದ್ದು, ಹೀಗಾಗಿ ದುಬೈ ಇಂಟರ್ನ್ಯಾಷನಲ್ ಮೈದಾನದಲ್ಲಿ ಭಾನುವಾರ ರೋಚಕ ಹೋರಾಟವನ್ನು ನಿರೀಕ್ಷಿಸಬಹುದು.
Pakistan squad arrives in Dubai ?#BackTheBoysInGreen pic.twitter.com/pcESWSIoPH
— Pakistan Cricket (@TheRealPCB) August 23, 2022
ಏಷ್ಯಾಕಪ್ಗಾಗಿ ಉಭಯ ತಂಡಗಳು ಹೀಗಿವೆ:
ಪಾಕಿಸ್ತಾನ್ ತಂಡ ಹೀಗಿದೆ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ, ಉಸ್ಮಾನ್ ಖಾದಿರ್, ಮೊಹಮ್ಮದ್ ಹಸ್ನೈನ್
ಟೀಮ್ ಇಂಡಿಯಾ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.
Published On - 11:24 am, Tue, 23 August 22




