ಭಾರತ-ಪಾಕಿಸ್ತಾನ್ (India vs Pakistan) ನಡುವಣ ಮುಖಾಮುಖಿಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 28 ರಂದು ಯುಎಇನಲ್ಲಿ ನಡೆಯಲಿರುವ ಏಷ್ಯಾಕಪ್ ಟಿ20 ಪಂದ್ಯದಲ್ಲಿ ಮತ್ತೊಮ್ಮೆ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗಲಿದ್ದಾರೆ. ವಿಶೇಷ ಎಂದರೆ ಈ ಪಂದ್ಯದಲ್ಲಿ ಮೂಲಕ ವಿರಾಟ್ ಕೊಹ್ಲಿ (Virat Kohli) ಮತ್ತೆ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಿಂಗ್ ಕೊಹ್ಲಿ ಇಂಗ್ಲೆಂಡ್ ವಿರುದ್ದದ ಸರಣಿಯ ಬಳಿಕ ಭಾರತ ತಂಡದಿಂದ ಹೊರಗುಳಿದಿದ್ದರು. ಇದೀಗ ಏಷ್ಯಾಕಪ್ ಮೂಲಕ ತಂಡಕ್ಕೆ ಮರಳುತ್ತಿರುವುದು ವಿಶೇಷ. ಅದು ಕೂಡ ವಿಶೇಷ ಪಂದ್ಯದ ಮೂಲಕ ಎಂಬುದೇ ಇಲ್ಲಿ ಸ್ಪೆಷಲ್.
ಆಗಸ್ಟ್ 28 ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯದ ಮೂಲಕ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ನಲ್ಲಿ ಶತಕ ಪೂರೈಸಲಿದ್ದಾರೆ. ಅದು ಕೂಡ ಮೈದಾನಕ್ಕಿಳಿಯುವ ಮೂಲಕ. ಅಂದರೆ ಇದು ಅವರ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿದೆ. ಪಾಕಿಸ್ತಾನ್ ವಿರುದ್ದ ಕಣಕ್ಕಿಳಿದರೆ ಈ ಸಾಧನೆ ಮಾಡಿದ ಎರಡನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗಲಿದ್ದಾರೆ.
ಟೀಮ್ ಇಂಡಿಯಾ ಪರ ಇದುವರೆಗೆ ಏಕೈಕ ಆಟಗಾರ ಮಾತ್ರ 100 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ 132 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿಯುವ ಮೂಲಕ ಈ ವಿಶೇಷ ಸಾಧನೆ ಮಾಡಿದ್ದಾರೆ. ಇದೀಗ ಏಷ್ಯಾಕಪ್ನಲ್ಲಿ ಭಾರತ ಆಡಲಿರುವ ತನ್ನ ಮೊದಲ ಪಂದ್ಯದ ಮೂಲಕ ನೂರು ಟಿ20 ಪಂದ್ಯಗಳನ್ನು ಪೂರೈಸುವ ಅವಕಾಶ ಕಿಂಗ್ ಕೊಹ್ಲಿ ಮುಂದಿದೆ.
ಟಿ20ಯಲ್ಲಿ ಕೊಹ್ಲಿ ಕಿಂಗ್:
33 ವರ್ಷದ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 91 ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಈ ವೇಳೆ 50 ಸರಾಸರಿಯಲ್ಲಿ 3308 ರನ್ ಗಳಿಸಿದ್ದಾರೆ. ಈ ವೇಳೆ 30 ಅರ್ಧಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ ಟಿ20 ಕ್ರಿಕೆಟ್ನಲ್ಲಿ ಅತ್ಯಧಿಕ ರನ್ಗಳಿಸಿದ ವಿಶ್ವದ ಮೂರನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಇನ್ನು ಒಟ್ಟಾರೆ T20 ವೃತ್ತಿಜೀವನದ ಬಗ್ಗೆ ಹೇಳುವುದಾದರೆ, ಕಿಂಗ್ ಕೊಹ್ಲಿ ಇದುವರೆಗೆ 344 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 327 ಇನ್ನಿಂಗ್ಸ್‌ಗಳಲ್ಲಿ 40 ರ ಸರಾಸರಿಯಲ್ಲಿ ಒಟ್ಟು 10626 ರನ್ ಗಳಿಸಿದ್ದಾರೆ. ಈ ಭರ್ಜರಿ ಇನಿಂಗ್ಸ್ಗಳ ವೇಳೆ ಕೊಹ್ಲಿ ಬ್ಯಾಟ್ನಿಂದ 5 ಶತಕ ಮತ್ತು 78 ಅರ್ಧ ಶತಕಗಳು ಮೂಡಿಬಂದಿವೆ.
ಸದ್ಯ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ ಪಾಕಿಸ್ತಾನ್ ವಿರುದ್ದದ ಪಂದ್ಯದ ಮೂಲಕ ಹಳೆಯ ಖದರ್ ತೋರಿಸುವ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಶತಕದ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಬ್ಯಾಟ್ನಿಂದ ಶತಕ ಮೂಡಿಬರಲಿದೆಯಾ ಕಾದು ನೋಡಬೇಕಿದೆ.
ಏಷ್ಯಾಕಪ್ಗಾಗಿ ಟೀಮ್ ಇಂಡಿಯಾ ಹೀಗಿದೆ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್ ಹಾಗೂ ದೀಪಕ್ ಚಹರ್.