ಏಷ್ಯಾಕಪ್ (Asia Cup 2022) ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಪಾಕಿಸ್ತಾನವನ್ನು (IND vs PAK) ಸೋಲಿಸುವಲ್ಲಿ ಯಶಸ್ವಿಯಾಯಿತು. ಈ ಪಂದ್ಯದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಟೀಂ ಇಂಡಿಯಾ (Team India) ಗೆಲುವಿನ ಹೀರೋ ಆಗಿದ್ದರು . ಮೂರು ವಿಕೆಟ್ ಕಬಳಿಸುವುದರೊಂದಿಗೆ, 17 ಎಸೆತಗಳಲ್ಲಿ 33 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಕೂಡ ಆಡಿದ್ದರು. ಈ ಅದ್ಭುತ ಪ್ರದರ್ಶನದ ನಂತರ, ಪ್ರಸ್ತುತ ನಂಬರ್ ಒನ್ ವೇಗದ ಆಲ್‌ರೌಂಡರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗಳು ಹುಟ್ಟಿಕೊಂಡಿವೆ. ಕೆಲವರು ಭಾರತದ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್‌ನ ಬೆನ್ ಸ್ಟೋಕ್ಸ್ (Ben Stokes) ಮತ್ತು ವೆಸ್ಟ್ ಇಂಡೀಸ್‌ನ ಆಂಡ್ರೆ ರಸೆಲ್ (Andre Russell) ಅವರನ್ನು ನಂಬರ್ ಒನ್ ಆಲ್‌ರೌಂಡರ್ ಆಟಗಾರ ಎಂದು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ. ಅದರಲ್ಲಿ ಪಾಕಿಸ್ತಾನದ ಮಾಜಿ ವೇಗದ ಬೌಲರ್ ವಾಸಿಂ ಅಕ್ರಮ್ ಕೂಡ ಈ ವಿಚಾರದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಹಾರ್ದಿಕ್ ಪಾಂಡ್ಯ ವಿಶ್ವದ ಶ್ರೇಷ್ಠ ಆಲ್ ರೌಂಡರ್ ಎಂದು ಬಣ್ಣಿಸಿದ್ದಾರೆ.
ಆಲ್ ರೌಂಡರ್
ಭಾರತ ಮತ್ತು ಪಾಕಿಸ್ತಾನ ಏಷ್ಯಾಕಪ್ ಪಂದ್ಯದ ನಂತರ ವಾಹಿನಿಯೊಂದಕ್ಕೆ ಮಾತನಾಡಿದ ಅಕ್ರಮ್, ‘ನನಗೆ ಹಾರ್ದಿಕ್ ಪ್ರಸ್ತುತ ವಿಶ್ವದ ಅತ್ಯುತ್ತಮ ಆಲ್‌ರೌಂಡರ್ ಎನಿಸುತ್ತದೆ. ಅವರು ಆಂಡ್ರೆ ರಸೆಲ್ ಮತ್ತು ಎಲ್ಲರಿಗಿಂತ ಉತ್ತಮರು. ಹಾರ್ದಿಕ್ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಅದ್ಭುತಗಳನ್ನು ಮಾಡಬಲ್ಲ ಸಾಮಥ್ಯ್ರ ಹೊಂದಿದ್ದಾರೆ.’
ತನ್ನ ಆಟದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ
‘ಹಾರ್ದಿಕ್ ಇದೀಗ ವಿಶ್ವದ ಶ್ರೇಷ್ಠ ಆಲ್ ರೌಂಡರ್ ಆಗಿದ್ದು, ಅವರ ಬೌಲಿಂಗ್ ಗರಿಷ್ಠ ವೇಗ ಗಂಟೆಗೆ 140 ಕಿಮೀಗಿಂತ ಹೆಚ್ಚು. ಬ್ಯಾಟಿಂಗ್‌ಗೆ ಸಂಬಂಧಿಸಿದಂತೆ, ಅವರು ಪಂದ್ಯದ ಪರಿಸ್ಥಿತಿಗಳು ಮತ್ತು ಅವಕಾಶಗಳಿಗೆ ಅನುಗುಣವಾಗಿ ತಮ್ಮ ಇನ್ನಿಂಗ್ಸ್ ಬದಲಿಸುತ್ತಾರೆ. ಈ ಸಾಮರ್ಥ್ಯವು ಅವರನ್ನು ಭಾರತದ ಪ್ರಮುಖ ಆಟಗಾರನನ್ನಾಗಿ ಮಾಡುತ್ತದೆ ಎಂದು ಅಕ್ರಂ ಹೇಳಿದ್ದಾರೆ. ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಕೂಡ ವಾಸಿಂ ಅಕ್ರಮ್ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ್ದು, ಹಾರ್ದಿಕ್ ನಿಜವಾಗಿಯೂ ಭಾರತಕ್ಕೆ ಎಕ್ಸ್ ಫ್ಯಾಕ್ಟರ್ ಎಂದು ಪಠಾಣ್ ಹೇಳಿದ್ದಾರೆ. ಹಾರ್ದಿಕ್, ಆರಂಭದಲ್ಲಿ ಪಿಚ್ಗೆ ಸೆಟ್ ಆಗಲು ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಾರೆ. ನಂತರ ತಮ್ಮ ಇನ್ನಿಂಗ್ಸ್‌ನಿಂದ ಎಲ್ಲರನ್ನು ಬೆರಗುಗೊಳಿಸುತ್ತಾರೆ ಎಂದಿದ್ದಾರೆ.
ಈ ವರ್ಷ ಯಾವುದೇ ಟಿ20 ಆಡಿಲ್ಲ
ಸ್ಟೋಕ್ಸ್ ಈ ವರ್ಷ ಇಂಗ್ಲೆಂಡ್ ಪರ ಒಂದೇ ಒಂದು ಟಿ20 ಆಡಿಲ್ಲ. ಅದೇ ಸಮಯದಲ್ಲಿ, 2020 ಮತ್ತು 2021 ರಲ್ಲಿ ಅವರ ಪ್ರದರ್ಶನವು ಹೆಚ್ಚು ವಿಶೇಷವಾಗಿರಲಿಲ್ಲ. 2020 ರಲ್ಲಿ, ಸ್ಟೋಕ್ಸ್ ಆರು ಪಂದ್ಯಗಳಲ್ಲಿ 126 ರನ್ ಗಳಿಸಿ, ಆರು ವಿಕೆಟ್ ಉರುಳಿಸಿದ್ದಾರೆ. ಅದೇ ಸಮಯದಲ್ಲಿ 2021 ರಲ್ಲಿ ಸ್ಟೋಕ್ಸ್, ಐದು ಪಂದ್ಯಗಳಲ್ಲಿ 84 ರನ್ ಗಳಿಸಿ, ಮೂರು ವಿಕೆಟ್ಗಳನ್ನು ಪಡೆದಿದ್ದರು. ಏತನ್ಮಧ್ಯೆ, ಹಾರ್ದಿಕ್ ಈ ವರ್ಷ ಭಾರತದ ಪರ 14 T20I ಪಂದ್ಯಗಳನ್ನು ಆಡಿದ್ದು, 144 ಸ್ಟ್ರೈಕ್ ರೇಟ್‌ನಲ್ಲಿ 314 ರನ್ ಗಳಿಸಿದ್ದಾರೆ. ಇದರ ಹೊರತಾಗಿ, ಅವರು 11 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ.
ರಸೆಲ್ ಪ್ರದರ್ಶನ ಹೀಗಿದೆ
ಹಾರ್ದಿಕ್ 2020 ರಲ್ಲಿ ಮೂರು T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, 156 ಸ್ಟ್ರೈಕ್ ರೇಟ್‌ನಲ್ಲಿ 78 ರನ್ ಗಳಿಸಿದ್ದರು. ಆದರೆ ಹಾರ್ದಿಕ್ 2020 ರಲ್ಲಿ ಒಮ್ಮೆಯೂ ಬೌಲಿಂಗ್ ಮಾಡಲಿಲ್ಲ. 2021 ರಲ್ಲಿ, ಹಾರ್ದಿಕ್ 11 T20 ಗಳಲ್ಲಿ 139.83 ಸ್ಟ್ರೈಕ್ ರೇಟ್‌ನಲ್ಲಿ 165 ರನ್ ಗಳಿಸಿದರು ಆದರೆ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಆದರೆ ಈಗ ಹಾರ್ದಿಕ್ ಅವರ ಪ್ರದರ್ಶನ 2022 ರಲ್ಲಿ ಸಾಕಷ್ಟು ಸುಧಾರಿಸಿದೆ. ಏತನ್ಮಧ್ಯೆ, ವೆಸ್ಟ್ ಇಂಡೀಸ್ ಪರ ಆಡುತ್ತಿರುವ ರಸೆಲ್ ಕೂಡ ಕಳೆದ ವರ್ಷ ಮಿಂಚಿನ ಪ್ರದರ್ಶನ ನೀಡಿದ್ದರು.