
2025 ರ ಏಷ್ಯಾಕಪ್ (Asia Cup) ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಸೂರ್ಯಕುಮಾರ್ ನೇತೃತ್ವದ ಭಾರತ ತಂಡ (India vs Pakistan) ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಈ ಟೂರ್ನಿ ನಡೆದು ತಿಂಗಳಾಗುತ್ತ ಬಂದರೂ ಚಾಂಪಿಯನ್ ಟೀಂ ಇಂಡಿಯಾಕ್ಕೆ ಮಾತ್ರ ಟ್ರೋಫಿಯನ್ನು ಎತ್ತಿಹಿಡಿಯುವ ಅವಕಾಶ ಸಿಕ್ಕಿಲ್ಲ. ಪಿಸಿಬಿ ಹಾಗೂ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ (Mohsin Naqvi) ಭಾರತ ತಂಡ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ಇದರಿಂದ ಮುಜುಗರಕ್ಕೊಳಗಾಗಿರುವ ನಖ್ವಿ, ಏಷ್ಯಾಕಪ್ ಟ್ರೋಫಿಯನ್ನು ಭಾರತಕ್ಕೆ ನೀಡಲು ನಿರಾಕರಿಸಿದ್ದರು. ಹೀಗಾಗಿ ಟ್ರೋಫಿಯನ್ನು ಪ್ರಸ್ತುತ ಎಸಿಸಿ ಕಚೇರಿಯಲ್ಲಿ ಇರಿಸಲಾಗಿದೆ. ಇದೀಗ ಕೇಳಿಬಂದಿರುವ ಮಾಹಿತಿ ಪ್ರಕಾರ, ಬಿಸಿಸಿಐ (BCCI) ಮೊಹ್ಸಿನ್ ನಖ್ವಿಗೆ ಇಮೇಲ್ ಕಳುಹಿಸಿದ್ದು, ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಒತ್ತಾಯಿಸಿದೆ. ಆದರೆ ನಖ್ವಿ ಮಾತ್ರ ಟ್ರೋಫಿ ಹಸ್ತಾಂತರಕ್ಕೆ ನಾನಾ ಷರತ್ತುಗಳನ್ನು ಹಾಕುತ್ತಿದ್ದಾರೆ. ನಖ್ವಿ ಷರತ್ತುಗಳಿಗೆ ಒಪ್ಪದ ಬಿಸಿಸಿಐ ಈಗ ಈ ವಿಷಯವನ್ನು ಐಸಿಸಿಗೆ ಕೊಂಡೊಯ್ಯಲು ಯೋಜಿಸುತ್ತಿದೆ ಎಂದು ವರದಿಯಾಗಿದೆ.
ಬಿಸಿಸಿಐ ಕಳುಹಿಸಿರುವ ಇಮೇಲ್ಗೆ ಉತ್ತರಿಸಿರುವ ಮೊಹ್ಸಿನ್ ನಖ್ವಿ, ದುಬೈನಲ್ಲಿರುವ ಎಸಿಸಿ ಪ್ರಧಾನ ಕಚೇರಿಯಿಂದ ಬಿಸಿಸಿಐ ಅಧಿಕಾರಿಗಳು ಹಾಗೂ ಲಭ್ಯವಿರುವ ಆಟಗಾರರು ಟ್ರೋಫಿಯನ್ನು ತನ್ನ ಕೈನಿಂದ ಪಡೆಯಬೇಕು ಎಂದಿದ್ದಾರೆ ಎಂದು ವರದಿಯಾಗಿದೆ. ಪಾಕಿಸ್ತಾನದ ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿರುವ ನಖ್ವಿ, ‘ಬಿಸಿಸಿಐ ಜೊತೆ ಹಲವಾರು ಪತ್ರಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ನವೆಂಬರ್ 10 ರಂದು ದುಬೈನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಟ್ರೋಫಿಯನ್ನು ಸ್ವೀಕರಿಸಲು ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಅವರ ಆಟಗಾರರನ್ನು ಬಿಸಿಸಿಐ ಅಧಿಕಾರಿ ರಾಜೀವ್ ಶುಕ್ಲಾ ಅವರೊಂದಿಗೆ ಆಹ್ವಾನಿಸಲು ನಾವು ಸಿದ್ಧರಿದ್ದೇವೆ ಎಂದಿದ್ದಾರೆ.
ಆದರೆ ನಖ್ವಿ ಅವರ ಈ ಆಹ್ವಾನವನ್ನು ಬಿಸಿಸಿಐ ನಿರಾಕರಿಸಿದ್ದು, ಈ ವಿಷಯವನ್ನು ಈಗ ಐಸಿಸಿ ಸಭೆಯಲ್ಲಿ ಪ್ರಸ್ತಾಪಿಸುವ ಸಾಧ್ಯತೆಯಿದೆ. ‘ಬಿಸಿಸಿಐ ಕಾರ್ಯದರ್ಶಿ, ಬಿಸಿಸಿಐನ ಎಸಿಸಿ ಪ್ರತಿನಿಧಿ ರಾಜೀವ್ ಶುಕ್ಲಾ ಮತ್ತು ಶ್ರೀಲಂಕಾ ಕ್ರಿಕೆಟ್ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಇತರ ಸದಸ್ಯ ಮಂಡಳಿಗಳ ಪ್ರತಿನಿಧಿಗಳು ಕಳೆದ ವಾರ ಎಸಿಸಿ ಅಧ್ಯಕ್ಷರಿಗೆ ಭಾರತಕ್ಕೆ ಟ್ರೋಫಿಯನ್ನು ಹಸ್ತಾಂತರಿಸುವ ಬಗ್ಗೆ ಇಮೇಲ್ ಮಾಡಿದ್ದಾರೆ’ ಎಂದು ಎಸಿಸಿ ಮೂಲವೊಂದು ಪಿಟಿಐಗೆ ತಿಳಿಸಿದೆ.
ಏಷ್ಯಾಕಪ್ ಟ್ರೋಫಿ ವಿಚಾರದಲ್ಲಿ ಮೊಂಡುತನ ಮುಂದುವರೆಸಿದ ಮೊಹ್ಸಿನ್ ನಖ್ವಿ
ಈಗ ಏಷ್ಯಾಕಪ್ ಟ್ರೋಫಿ ವಿವಾದವನ್ನು ಐಸಿಸಿ ಮುಂದೆ ಎತ್ತಿದರೆ, ಪಿಸಿಬಿ ಮತ್ತು ಎಸಿಸಿ ಮುಖ್ಯಸ್ಥ ನಖ್ವಿ ತೀವ್ರ ಮುಜುಗರವನ್ನು ಎದುರಿಸಬೇಕಾಗುತ್ತದೆ. ಏಕೆಂದರೆ ಐಸಿಸಿ ಮುಖ್ಯಸ್ಥರಾಗಿರುವ ಜಯ್ ಶಾ, ಈ ಹಿಂದೆ ಬಿಸಿಸಿಐ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಹೀಗಾಗಿ ನಖ್ವಿ ಎದುರು, ಬಿಸಿಸಿಐ ಮೇಲುಗೈ ಸಾಧಿಸುವ ಸಾಧ್ಯತೆಗಳಿವೆ ಎನ್ನಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:37 pm, Wed, 22 October 25