15 ಪದಕಗಳು ಸಿಕ್ಕರೂ, ಭಾರತದ ಖಾತೆಗೆ ಸೇರಿದ್ದು 1 ಚಿನ್ನದ ಪದಕ ಮಾತ್ರ!

ಕ್ರಿಕೆಟ್ ಎನ್ನುವುದು ಹನ್ನೊಂದು ಅಥವಾ ಹದಿನೈದು ಜನರ ಸಾಮೂಹಿಕ ಶ್ರಮ. ಆದರೆ ಅಂತರರಾಷ್ಟ್ರೀಯ ಕ್ರೀಡಾಕೂಟಗಳ ನಿಯಮದ ಪುಟಗಳಲ್ಲಿ ಅದಕ್ಕೊಂದು ವಿಭಿನ್ನ ಲೆಕ್ಕಾಚಾರವಿದೆ. ಏಷ್ಯನ್ ಗೇಮ್ಸ್ 2026ರಲ್ಲಿ ಭಾರತವನ್ನು ಪ್ರತಿನಿಧಿಸಿದ ಎಲ್ಲಾ 15 ಆಟಗಾರ್ತಿಯರಿಗೂ ಚಿನ್ನದ ಪದಕ ಸಿಕ್ಕರೂ, ಭಾರತದ ಅಧಿಕೃತ ಪದಕಗಳ ಪಟ್ಟಿಗೆ ಸೇರಿದ ಬಂಗಾರ ಮಾತ್ರ ಕೇವಲ ಒಂದು!

15 ಪದಕಗಳು ಸಿಕ್ಕರೂ, ಭಾರತದ ಖಾತೆಗೆ ಸೇರಿದ್ದು 1 ಚಿನ್ನದ ಪದಕ ಮಾತ್ರ!
ಟೀಮ್ ಇಂಡಿಯಾ
Image Credit source: BCCI

Updated on: Sep 23, 2026 | 8:12 AM

2026ರ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಚಿನ್ನದ ಪದಕದ ಖಾತೆ ತೆರೆದಿದೆ. ಅದು ಸಹ ಟೀಮ್ ಇಂಡಿಯಾದ ಅಭೂತಪೂರ್ವ ಗೆಲುವಿನೊಂದಿಗೆ. ಏಷ್ಯನ್ ಗೇಮ್ಸ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 147 ರನ್‌ಗಳ ಬೃಹತ್ ಅಂತರದಿಂದ ಧೂಳೀಪಟ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡವು ದೇಶಕ್ಕೆ ಮೊದಲ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದ 15 ಆಟಗಾರ್ತಿಯರು ಬಂಗಾರದ ಪದಕಕ್ಕೆ ಕೊರೊಳೊಡ್ಡಿದ್ದಾರೆ. ಇಲ್ಲಿ ಭಾರತವನ್ನು ಪ್ರತಿನಿಧಿಸಿದ 15 ಆಟಗಾರ್ತಿಯರಿಗೂ ಚಿನ್ನದ ಪದಕ ಸಿಕ್ಕರೂ ಭಾರತದ ಖಾತೆಗೆ ಸೇರಿದ್ದು ಒಂದು ಬಂಗಾರದ ಪದಕ ಮಾತ್ರ.

ದೇಶಕ್ಕೆ ಒಂದು ಪದಕ!

ಏಷ್ಯನ್ ಗೇಮ್ಸ್ ಅಥವಾ ಒಲಿಂಪಿಕ್ಸ್‌ನ ಅಧಿಕೃತ ಪದಕಗಳ ಪಟ್ಟಿ ಸಿದ್ಧವಾಗುವುದು ದೇಶಗಳ ಆಧಾರದ ಮೇಲೆ. ಒಂದು ಕ್ರೀಡಾಕೂಟದಲ್ಲಿ ಒಂದು ನಿರ್ದಿಷ್ಟ ಸ್ಪರ್ಧೆಗೆ ಒಂದೇ ಒಂದು ವಿಜೇತ ಸ್ಥಾನ ಇರುತ್ತದೆ. ಕ್ರಿಕೆಟ್‌ನಲ್ಲಿ ಭಾರತ ತಂಡ ಪ್ರಥಮ ಸ್ಥಾನ ಪಡೆದಿದ್ದರಿಂದ, ದೇಶದ ಖಾತೆಗೆ “1 ಚಿನ್ನದ ಪದಕ” ಮಾತ್ರ ಸೇರುತ್ತದೆ.

ಕ್ರಿಕೆಟ್ 11 ಅಥವಾ 15 ಜನರ ತಂಡ ಆಡುವ ಆಟವಾದರೂ, ಜಯಗಳಿಸಿದ್ದು ಇಡೀ ದೇಶವನ್ನು ಪ್ರತಿನಿಧಿಸಿದ ಒಂದು ತಂಡ. ಹೀಗಾಗಿ ದೇಶದ ಖಾತೆಗೆ 1 ಪದಕ ಸೇರಿದರೂ, ಮೈದಾನದಲ್ಲಿ ಬೆವರು ಹರಿಸಿದ ಆ ಜಯದ ರೂವಾರಿಗಳಾದ 15 ಆಟಗಾರ್ತಿಯರ ಶ್ರಮವನ್ನು ಗೌರವಿಸಲು ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ಅಧಿಕೃತ ಚಿನ್ನದ ಪದಕವನ್ನು ನೀಡಲಾಗುತ್ತದೆ. ಆದರೆ ಪದಕ ಪಟ್ಟಿಯಲ್ಲಿ ಇದನ್ನು ಒಂದು ಪದಕ ಎಂದು ಪರಿಗಣಿಸಲಾಗುತ್ತದೆ.

ಉದಾಹರಣೆಗೆ: ಶೂಟಿಂಗ್ ಅಥವಾ ಅಥ್ಲೆಟಿಕ್ಸ್‌ನಂತಹ ವೈಯಕ್ತಿಕ ಆಟಗಳಲ್ಲಿ ಒಬ್ಬರೇ ಸ್ಪರ್ಧಿಸಿ ಚಿನ್ನ ಗೆದ್ದರೆ ದೇಶಕ್ಕೆ 1 ಚಿನ್ನ ಸಿಗುತ್ತದೆ. ಅದೇ ರೀತಿ 15 ಜನರ ಕ್ರಿಕೆಟ್, ಹಾಕಿ ತಂಡಗಳು ಇಡೀ ಟೂರ್ನಮೆಂಟ್ ಆಡಿ ಗೆದ್ದರೂ ಅದು ದೇಶಕ್ಕೆ 1 ಚಿನ್ನವೇ ಆಗಿರುತ್ತದೆ.

ಇದನ್ನೂ ಓದಿ: ಸಚಿನ್​ರ ಮತ್ತೊಂದು ವಿಶ್ವ ದಾಖಲೆ ಮುರಿದ ಜೋ ರೂಟ್!

ಭಾರತದ ಪದಕ ಬೇಟೆ:

ಟೀಮ್ ಇಂಡಿಯಾದ ಈ ಭರ್ಜರಿ ಜಯದೊಂದಿಗೆ ಭಾರತವು ಪ್ರಸ್ತುತ ಕ್ರೀಡಾಕೂಟದಲ್ಲಿ ಒಟ್ಟು 7 ಪದಕಗಳನ್ನು (1 ಚಿನ್ನ, 4 ಬೆಳ್ಳಿ ಮತ್ತು 2 ಕಂಚು) ಜಯಿಸಿದ್ದು, ಪದಕಗಳ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಕಾಯ್ದುಕೊಂಡಿದೆ. ಶೂಟಿಂಗ್‌ನಲ್ಲಿ ಎಲವೆನಿಲ್ ವಲರಿವನ್ ಹಾಗೂ ಹಿಮಾಂಶು ಧಿಲ್ಲೋನ್ ಬೆಳ್ಳಿ ಗೆದ್ದರೆ, ರುದ್ರಂಕ್ಷ್ ಪಾಟೀಲ್ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಇತ್ತ ಮಿಕ್ಸೆಡ್ ಮಾರ್ಷಲ್ ಆರ್ಟ್ಸ್ ನಲ್ಲಿ ಸುಚಿಕಾ ತರಿಯಾಲ್ ಕಂಚು ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

 

Published On - 8:08 am, Wed, 23 September 26

Loading...
Unable to load recommendations.
Follow Us