A ತಂಡದ ವಿರುದ್ಧ ಕೂಡ ಮುಗ್ಗರಿಸಿದ ಕೆಎಲ್ ರಾಹುಲ್

Australia A vs India A: ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವೆ ಅನಧಿಕೃತ ಟೆಸ್ಟ್ ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎ ತಂಡವು 7 ವಿಕೆಟ್​​ಗಳ ಜಯ ಸಾಧಿಸಿದೆ. ಇದೀಗ ದ್ವಿತೀಯ ಟೆಸ್ಟ್ ಪಂದ್ಯ ಮುಂದುವರೆದಿದ್ದು, ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಕಣಕ್ಕಿಳಿದಿದ್ದಾರೆ.

A ತಂಡದ ವಿರುದ್ಧ ಕೂಡ ಮುಗ್ಗರಿಸಿದ ಕೆಎಲ್ ರಾಹುಲ್
KL Rahul
Follow us
ಝಾಹಿರ್ ಯೂಸುಫ್
|

Updated on: Nov 07, 2024 | 7:31 AM

ಮೆಲ್ಬೋರ್ನ್​ನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳ ನಡುವಿನ ಪಂದ್ಯದಲ್ಲಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ಕೇವಲ 4 ರನ್​ಗಳಿಸಿ ವಿಕೆಟ್ ಒಪ್ಪಿಸಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಭಾರತ ಎ ಪರ ಇನಿಂಗ್ಸ್ ಆರಂಭಿಸಿದ ಕೆಎಲ್ ರಾಹುಲ್ ಹಾಗೂ ಅಭಿಮನ್ಯು ಈಶ್ವರನ್ ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು.

ಅಭಿಮನ್ಯು ಈಶ್ವರನ್ (0) ಶೂನ್ಯಕ್ಕೆ ಔಟಾದರೆ, ಕೆಎಲ್ ರಾಹುಲ್ 4 ಎಸೆತಗಳಲ್ಲಿ 1 ಫೋರ್​ ಬಾರಿಸಿ ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್ (0) ಕೂಡ ಸೊನ್ನೆ ಸುತ್ತಿದರು. ಹಾಗೆಯೇ ನಾಯಕ ರುತುರಾಜ್ ಗಾಯಕ್ವಾಡ್ ಕೇವಲ 4 ರನ್​ಗಳಿಸಿ ಔಟಾದರು.

ಈ ಹಂತದಲ್ಲಿ ಕಣಕ್ಕಿಳಿದ ದೇವದತ್ತ್ ಪಡಿಕ್ಕಲ್ 55 ಎಸೆತಗಳನ್ನು ಎದುರಿಸಿ 26 ರನ್ ಬಾರಿಸಿದರು. ಆದರೆ ಮೈಕಲ್ ನೆಸರ್ ಎಸೆತವನ್ನು ಗುರುತಿಸುವಲ್ಲಿ ಎಡವಿದ ಪಡಿಕ್ಕಲ್ ಕೂಡ ವಿಕೆಟ್ ಒಪ್ಪಿಸಿದರು. ಅದರಂತೆ 26 ಓವರ್​ಗಳ ಮುಕ್ತಾಯದ ವೇಳೆಗೆ ಭಾರತ ಎ ತಂಡವು 5 ವಿಕೆಟ್ ಕಳೆದುಕೊಂಡು ಕೇವಲ 65 ರನ್ ಮಾತ್ರ ಕಲೆಹಾಕಿದೆ.

ಆಸ್ಟ್ರೇಲಿಯಾ ಎ ಪ್ಲೇಯಿಂಗ್ 11: ಮಾರ್ಕಸ್ ಹ್ಯಾರಿಸ್ , ಸ್ಯಾಮ್ ಕಾನ್ಸ್ಟಾಸ್ , ಕ್ಯಾಮರೋನ್ ಬ್ಯಾಂಕ್ರಾಫ್ಟ್ , ನಾಥನ್ ಮೆಕ್‌ಸ್ವೀನಿ (ನಾಯಕ) , ಬ್ಯೂ ವೆಬ್‌ಸ್ಟರ್ , ಒಲಿವರ್ ಡೇವಿಸ್ , ಜಿಮ್ಮಿ ಪೀರ್ಸನ್ (ವಿಕೆಟ್ ಕೀಪರ್) , ಮೈಕೆಲ್ ನೆಸರ್ , ನಾಥನ್ ಮ್ಯಾಕ್‌ಆಂಡ್ರ್ಯೂ , ಸ್ಕಾಟ್ ಬೋಲ್ಯಾಂಡ್ , ಕೋರೆ ರೊಚಿಚಿಯೋಲಿ.

ಭಾರತ ಎ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ , ರುತುರಾಜ್ ಗಾಯಕ್ವಾಡ್ (ನಾಯಕ) , ಸಾಯಿ ಸುದರ್ಶನ್ , ಕೆಎಲ್ ರಾಹುಲ್ , ದೇವದತ್ತ್ ಪಡಿಕ್ಕಲ್ , ಧ್ರುವ ಜುರೇಲ್ (ವಿಕೆಟ್ ಕೀಪರ್) , ನಿತೀಶ್ ರೆಡ್ಡಿ , ತನುಷ್ ಕೋಟ್ಯಾನ್ , ಖಲೀಲ್ ಅಹ್ಮದ್ , ಪ್ರಸಿದ್ಧ್ ಕೃಷ್ಣ , ಮುಖೇಶ್ ಕುಮಾರ್.

ರಾಹುಲ್​ಗೆ ಅಗ್ನಿ ಪರೀಕ್ಷೆ:

ನ್ಯೂಝಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಫಲರಾಗಿದ್ದ ಕೆಎಲ್ ರಾಹುಲ್ ಅವರನ್ನು ಉಳಿದೆರಡು ಪಂದ್ಯಗಳ ಪ್ಲೇಯಿಂಗ್ ಇಲೆವೆನ್​ನಿಂದ ಕೈ ಬಿಡಲಾಗಿತ್ತು. ಇದಾಗ್ಯೂ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ರಾಹುಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ಆದರೆ ಈ ಸರಣಿ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಸರಣಿಯಲ್ಲಿ ಭಾರತ ಎ ತಂಡದ ಪರ ಕಣಕ್ಕಿಳಿಯುವಂತೆ ರಾಹುಲ್​ಗೆ ತಿಳಿಸಲಾಗಿತ್ತು.

ಇದನ್ನೂ ಓದಿ: IPL 2025: ಐಪಿಎಲ್ ಮೆಗಾ ಹರಾಜಿಗೆ ಇಟಲಿ ಆಟಗಾರ ಎಂಟ್ರಿ

ಅದರಂತೆ ಇದೀಗ ಆಸ್ಟ್ರೇಲಿಯಾ ಎ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿರುವ ಕೆಎಲ್ ರಾಹುಲ್ ಮೊದಲ ಇನಿಂಗ್ಸ್​ನಲ್ಲಿ ವಿಫಲರಾಗಿದ್ದಾರೆ. ಇದೇ ಕಳಪೆ ಫಾರ್ಮ್ ಮುಂದುವರೆಸಿದರೆ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲೂ ಬೆಂಚ್ ಕಾಯಬೇಕಾಗಿ ಬರಬಹುದು.