ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22 ರಿಂದ ನಡೆಯಲಿದೆ. ಅದಕ್ಕೂ ಮುನ್ನ ಭಾರತ ಎ ತಂಡವು ಪ್ರಸ್ತುತ ಆಸ್ಟ್ರೇಲಿಯಾ ಎ ವಿರುದ್ಧ ನಾಲ್ಕು ದಿನಗಳ ಎರಡು ಅಭ್ಯಾಸ ಪಂದ್ಯಗಳನ್ನು ಆಡುತ್ತಿದೆ. ನವೆಂಬರ್ 7 ರಿಂದ ಮೆಲ್ಬೋರ್ನ್‌ನಲ್ಲಿ ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಎರಡನೇ ನಾಲ್ಕು ದಿನಗಳ ಪಂದ್ಯ ನಡೆಯಲಿದೆ.
ಈ ಪಂದ್ಯಕ್ಕಾಗಿ ಭಾರತ ತಂಡದ ಆಡುವ ಹನ್ನೊಂದರ ಬಳಗದಲ್ಲಿ ದೊಡ್ಡ ಬದಲಾವಣೆಯಾಗುವ ಸಾಧ್ಯತೆಗಳಿವೆ. ಬಾರ್ಡರ್ ಗವಾಸ್ಕರ್ ಟ್ರೋಫಿಗೆ ಟೆಸ್ಟ್ ತಂಡದಲ್ಲಿ ಆಯ್ಕೆಯಾಗಿರುವ ಕೆಎಲ್ ರಾಹುಲ್ ಮತ್ತು ಧ್ರುವ್ ಜುರೆಲ್ ಅವರನ್ನು ಭಾರತ ಎ ತಂಡದಲ್ಲಿ ಆಯ್ಕೆ ಮಾಡಲಾಗಿದೆ. ಹೀಗಾಗಿ ಈ ಇಬ್ಬರೂ ಆಟಗಾರರು ಆಸ್ಟ್ರೇಲಿಯಾ ಎ ವಿರುದ್ಧ ಆಡುವುದು ಖಚಿತವಾಗಿದೆ.
ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಭಾರತದ ನಾಯಕ ರೋಹಿತ್ ಶರ್ಮಾ ಹೊರಗುಳಿಯಬಹುದು ಎಂದು ಹೇಳಲಾಗುತ್ತಿದೆ. ರೋಹಿತ್ ತನ್ನ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ಕಾರಣದಿಂದಾಗಿ ಅವರು ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯಬಹುದು ಎಂದು ವರದಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಟೀಂ ಇಂಡಿಯಾ ಹೊಸ ಆರಂಭಿಕ ಜೋಡಿಯೊಂದಿಗೆ ಪರ್ತ್ ಟೆಸ್ಟ್ ಪ್ರವೇಶಿಸಲಿದೆ.
ಆದರೆ ಈ ಟೆಸ್ಟ್‌ನಲ್ಲಿ ಯಶಸ್ವಿ ಜೈಸ್ವಾಲ್ ಜೊತೆಗೆ ಯಾರು ಭಾರತದ ಇನ್ನಿಂಗ್ಸ್ ಆರಂಭಿಸುತ್ತಾರೆ ಎಂಬುದು ಭಾರತ ಎ ಮತ್ತು ಆಸ್ಟ್ರೇಲಿಯಾ ಎ ನಡುವಿನ ಪಂದ್ಯದಿಂದ ನಿರ್ಧಾರವಾಗಲಿದೆ. ಕೆಎಲ್ ರಾಹುಲ್ ಮತ್ತು ಅಭಿಮನ್ಯು ಈಶ್ವರನ್ ಈ ಆರಂಭಿಕ ಸ್ಥಾನಕ್ಕೆ ದೊಡ್ಡ ಸ್ಪರ್ಧಿಯಾಗಿದ್ದು, ರಾಹುಲ್ಗೆ ಅವಕಾಶ ಸಿಗಬಹುದು ಎಂದು ಹೇಳಲಾಗುತ್ತಿದೆ.
ವಾಸ್ತವವಾಗಿ, ಮೊದಲ ನಾಲ್ಕು ದಿನಗಳ ಪಂದ್ಯದಲ್ಲಿ ಅಭಿಮನ್ಯು ಈಶ್ವರನ್ ಮತ್ತು ನಾಯಕ ರುತುರಾಜ್ ಗಾಯಕ್ವಾಡ್ ಇನ್ನಿಂಗ್ಸ್ ಆರಂಭಿಸಿದ್ದರು. ಆದರೆ ಎರಡನೇ ಪಂದ್ಯದಲ್ಲಿ ಕೆಎಲ್ ರಾಹುಲ್ ಅವರು ಅಭಿಮನ್ಯು ಈಶ್ವರನ್ ಜೊತೆ ಓಪನಿಂಗ್ ಮಾಡಬಹುದು. ವರದಿಗಳ ಪ್ರಕಾರ, ರಾಹುಲ್ ಮತ್ತು ಈಶ್ವರನ್ ನಡುವೆ ನೇರ ಸ್ಪರ್ಧೆ ಖಚಿತವಾಗಿದ್ದು, ಈ ಇಬ್ಬರು ಆಟಗಾರರಲ್ಲಿ ಯಾರು ಉತ್ತಮ ಪ್ರದರ್ಶನ ನೀಡುತ್ತಾರೋ ಅವರು ಮೊದಲ ಟೆಸ್ಟ್‌ನಲ್ಲಿ ರೋಹಿತ್ ಸ್ಥಾನ ತುಂಬಬಹುದು.
2023-24ರ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಕೆಎಲ್ ರಾಹುಲ್ ಟೆಸ್ಟ್‌ನಲ್ಲಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದಾರೆ. ಈ ಅವಧಿಯಲ್ಲಿ ಅವರು 10 ಇನ್ನಿಂಗ್ಸ್‌ಗಳಲ್ಲಿ 37.66 ಸರಾಸರಿಯಲ್ಲಿ 339 ರನ್ ಗಳಿಸಿದ್ದಾರೆ. ಆದಾಗ್ಯೂ, ರಾಹುಲ್ ವಿದೇಶಿ ನೆಲದಲ್ಲಿ ಆರಂಭಿಕರಾಗಿ ಕಣಕ್ಕಿಳಿದು ಯಶಸ್ವಿ ಕೂಡ ಆಗಿದ್ದಾರೆ. ಈ ಹಿಂದಿನ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಪ್ರವಾಸದಲ್ಲಿ ರಾಹುಲ್ ಆರಂಭಿಕರಾಗಿ ಕಣಕ್ಕಿಳಿದು ಶತಕ ಬಾರಿಸಿದ್ದರು.
ಈ ಮೂಲಕ ರಾಹುಲ್, ಈ ಮೂರು ದೇಶಗಳಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಟೆಸ್ಟ್ ಶತಕ ಸಿಡಿಸಿದ ಇಬ್ಬರು ಏಷ್ಯಾದ ಆರಂಭಿಕರಲ್ಲಿ ಒಬ್ಬರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಹುಲ್ ಮತ್ತೊಮ್ಮೆ ಆರಂಭಿಕನಾಗಿ ಕಣಕ್ಕಿಳಿಯಬಹುದು. ಮತ್ತೊಂದೆಡೆ, ಅಭಿಮನ್ಯು ಈಶ್ವರನ್ ಅವರ ಇತ್ತೀಚಿನ ಪ್ರದರ್ಶನ ಅದ್ಭುತವಾಗಿದ್ದು, ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರ ಹೆಸರಿನಲ್ಲಿ 27 ಶತಕಗಳಿವೆ. ಇಂತಹ ಪರಿಸ್ಥಿತಿಯಲ್ಲಿ ಅಭಿಮನ್ಯು ಈಶ್ವರನ್ ಕೂಡ ಓಪನಿಂಗ್ಗೆ ದೊಡ್ಡ ಸ್ಪರ್ಧಿಯಾಗಿದ್ದಾರೆ.
Published On - 9:26 pm, Wed, 6 November 24