ಆಸೀಸ್ ಪಾಳಯದಲ್ಲಿ ಒಡಕು? ಶತಕ ವೀರರ ನಡುವೆ ಒಂದೇ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯ!

ICC World Cup 2023: ದಾಖಲೆಯ ಗೆಲುವಿನ ನಂತರ ಆಸ್ಟ್ರೇಲಿಯದ ಪಾಳಯದಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ. ಇಬ್ಬರು ಆಟಗಾರರು ಒಂದೇ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರೆಂದರೆ ನೆದರ್ಲೆಂಡ್ಸ್ ವಿರುದ್ಧ ಶತಕ ಬಾರಿಸಿದ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್.

ಆಸೀಸ್ ಪಾಳಯದಲ್ಲಿ ಒಡಕು? ಶತಕ ವೀರರ ನಡುವೆ ಒಂದೇ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯ!
ಆಸ್ಟ್ರೇಲಿಯಾ ತಂಡ
Follow us
ಪೃಥ್ವಿಶಂಕರ
|

Updated on:Oct 26, 2023 | 10:05 AM

ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾಗೆ (Australian Cricket Team) ಈ ಬಾರಿಯ ವಿಶ್ವಕಪ್ ಆರಂಭ ನಿರೀಕ್ಷಿತ ರೀತಿಯಲ್ಲಿ ಆಗಿಲ್ಲ. ಆರಂಭದಲ್ಲೇ ಸೋಲುಗಳಿಂದ ಕಂಗೆಟ್ಟಿದ ಪ್ಯಾಟ್ ಕಮ್ಮಿನ್ಸ್ ಪಡೆ, ಇದೀಗ ತಮ್ಮ ಹಳೆಯ ಲಯಕ್ಕೆ ಮರಳಿದೆ. ಆಸೀಸ್ ತಂಡ ಬುಧವಾರ ನಡೆದ ನೆದರ್ಲೆಂಡ್  (Australia vs Netherlands) ವಿರುದ್ಧದ ಪಂದ್ಯದಲ್ಲಿ ಅದ್ಭುತ ಜಯ ಸಾಧಿಸುವ ಮೂಲಕ ದಾಖಲೆ ನಿರ್ಮಿಸಿದೆ. ಈ ತಂಡ ನೆದರ್ಲೆಂಡ್ಸ್ ತಂಡವನ್ನು 309 ರನ್‌ಗಳಿಂದ ಸೋಲಿಸಿ ವಿಶ್ವಕಪ್‌ನಲ್ಲಿ ಅತಿ ದೊಡ್ಡ ಗೆಲುವು ದಾಖಲಿಸಿದ ದಾಖಲೆ ಬರೆದಿದೆ. ಆದರೆ ಈ ದಾಖಲೆಯ ಗೆಲುವಿನ ನಂತರ ಆಸ್ಟ್ರೇಲಿಯದ ಪಾಳಯದಲ್ಲಿನ ಭಿನ್ನಾಭಿಪ್ರಾಯಗಳು ಬಹಿರಂಗಗೊಂಡಿವೆ. ಇಬ್ಬರು ಆಟಗಾರರು ಒಂದೇ ವಿಷಯದ ಬಗ್ಗೆ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಇಬ್ಬರು ಆಟಗಾರರೆಂದರೆ ನೆದರ್ಲೆಂಡ್ಸ್ ವಿರುದ್ಧ ಶತಕ ಬಾರಿಸಿದ ಡೇವಿಡ್ ವಾರ್ನರ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ (David Warner and Glenn Maxwell).

ಮ್ಯಾಕ್ಸ್‌ವೆಲ್ ಅವರ ಬಿರುಸಿನ ಶತಕ ಮತ್ತು ವಾರ್ನರ್ ಅವರ ಅತ್ಯುತ್ತಮ ಇನ್ನಿಂಗ್ಸ್‌ನ ಆಧಾರದ ಮೇಲೆ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳನ್ನು ಕಳೆದುಕೊಂಡು 399 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ ತಂಡ ಕೇವಲ 21 ಓವರ್‌ಗಳಲ್ಲಿ 90 ರನ್‌ಗಳಿಗೆ ಆಲೌಟ್ ಆಯಿತು. ಈ ದಾಖಲೆಯ ಗೆಲುವಿನ ಬಳಿಕ ಆಸ್ಟ್ರೇಲಿಯ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ಈ ತಂಡ ಐದು ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಮೂರು ಗೆದ್ದು ಎರಡರಲ್ಲಿ ಸೋತಿದೆ.

World Cup 2023 Points Table: 4ನೇ ಸ್ಥಾನದಲ್ಲಿ ಆಸೀಸ್; ಭಾರತ ನಂ.1

ಈ ವಿಷಯದ ಬಗ್ಗೆ ಭಿನ್ನಾಭಿಪ್ರಾಯ

ಆಸ್ಟ್ರೇಲಿಯಾದ ವಿಜಯದ ನಂತರ, ವಾರ್ನರ್ ಮತ್ತು ಮ್ಯಾಕ್ಸ್‌ವೆಲ್ ಒಂದೇ ವಿಷಯದ ಬಗ್ಗೆ ಎರಡು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ವಾಸ್ತವವಾಗಿ, ವಿಶ್ವಕಪ್-2023 ರ ಆಯೋಜಕರಾದ ಬಿಸಿಸಿಐ, ಪಂದ್ಯಗಳ ಸಮಯದಲ್ಲಿ ವಿರಾಮದ ವೇಳೆ ಬೆಳಕಿನ ಪ್ರದರ್ಶನವನ್ನು ಏರ್ಪಡಿಸಿದೆ. ವಿರಾಮದ ಸಮಯದಲ್ಲಿ ಪ್ರತಿ ಕ್ರೀಡಾಂಗಣದಲ್ಲಿ ಬೆಳಕಿನ ಪ್ರದರ್ಶನವಿರುತ್ತದೆ. ಈ ಬಗ್ಗೆ ವಾರ್ನರ್ ಮತ್ತು ಮ್ಯಾಕ್ಸ್‌ವೆಲ್ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಒಂದೆಡೆ ಮ್ಯಾಕ್ಸ್‌ವೆಲ್​ಗೆ ಈ ಬೆಳಕಿನ ಪ್ರದರ್ಶನ ಕಿರಿಕಿರಿ ಉಂಟು ಮಾಡಿದರೆ, ವಾರ್ನರ್​ಗೆ ಮಾತ್ರ ಬಹಳ ಇಷ್ಟವಾಗಿದೆ. ಪಂದ್ಯದ ನಂತರ ಈ ಬಗ್ಗೆ ಅಸಮಾಧಾನ ಹೊರಹಾಕಿದ ಮ್ಯಾಕ್ಸ್‌ವೆಲ್, ಬೆಳಕಿನ ಪ್ರದರ್ಶನವು ತುಂಬಾ ಕೆಟ್ಟ ಕಲ್ಪನೆಯಾಗಿದೆ. ಏಕೆಂದರೆ ಇದು ಆಟಗಾರರನ್ನು ವಿಚಲಿತಗೊಳಿಸುತ್ತದೆ ಮತ್ತು ಅವರು ಮತ್ತೆ ಪಂದ್ಯದ ಮೇಲೆ ಕೇಂದ್ರೀಕರಿಸಲು ಕಷ್ಟಪಡುತ್ತಾರೆ. ಇದು ಕ್ರಿಕೆಟಿಗರ ಪಾಲಿಗೆ ಅತ್ಯಂತ ಕೆಟ್ಟ ವಿಚಾರ ಎಂದಿದ್ದಾರೆ.

ಆದರೆ ವಾರ್ನರ್ ಮಾತ್ರ ಬಿಸಿಸಿಐನ ಈ ನಡೆಯನ್ನು ಶ್ಲಾಘಿಸಿದ್ದು, ಈ ಲೈಟ್ ಶೋ ನನಗೆ ತುಂಬಾ ಇಷ್ಟವಾಗಿದೆ. ಅಭಿಮಾನಿಗಳಿಗೆ ನಾನೇನೂ ಅಲ್ಲ, ಅಭಿಮಾನಿಗಳಿಲ್ಲದೆ ಕ್ರಿಕೆಟಿಗರೂ ಏನೂ ಅಲ್ಲ ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಇಬ್ಬರ ಪರ- ವಿರೋಧದ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಮ್ಯಾಕ್ಸ್​ವೆಲ್ ದಾಖಲೆಯ ಶತಕ

ಈ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ 44 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಎಂಟು ಸಿಕ್ಸರ್‌ಗಳ ನೆರವಿನಿಂದ 106 ರನ್ ಗಳಿಸಿದರು. ಈ ಪಂದ್ಯದಲ್ಲಿ ಅವರು 40 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು, ಇದು ವಿಶ್ವಕಪ್‌ನಲ್ಲಿ ವೇಗದ ಶತಕ ಎಂಬ ದಾಖಲೆ ಕೂಡ ಬರೆಯಿತು. ಇದೇ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾದ ಏಡೆನ್ ಮಾರ್ಕ್ರಾಮ್ 49 ಎಸೆತಗಳಲ್ಲಿ ಶತಕ ಬಾರಿಸಿ ಕೆವಿನ್ ಓಬ್ರಿಯಾನ್ ಅವರ ವೇಗದ ಶತಕದ ದಾಖಲೆಯನ್ನು ಮುರಿದಿದ್ದರು. ಕೆವಿನ್ 2011ರಲ್ಲಿ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು. ಈ ಪಂದ್ಯದಲ್ಲಿ ವಾರ್ನರ್ ಕೂಡ ಶತಕ ಬಾರಿಸಿದ್ದು, 93 ಎಸೆತಗಳಲ್ಲಿ 11 ಬೌಂಡರಿ ಹಾಗೂ ಮೂರು ಸಿಕ್ಸರ್‌ಗಳ ನೆರವಿನಿಂದ 104 ರನ್ ಸಿಡಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:04 am, Thu, 26 October 23