WTC Final: ಕಾಂಗರೂಗಳಿಗೆ ಡಬ್ಲ್ಯುಟಿಸಿ ಫೈನಲ್ ಟಿಕೆಟ್ ಖಚಿತ; 2ನೇ ಫೈನಲಿಸ್ಟ್ ಸ್ಥಾನಕ್ಕೆ 3 ತಂಡಗಳ ನಡುವೆ ಫೈಪೋಟಿ
ICC World Test Championship: ಆಸ್ಟ್ರೇಲಿಯ ನಂತರ ಭಾರತ ತಂಡ ಎರಡನೇ ಸ್ಥಾನದಲ್ಲಿದ್ದು, ಸತತ 2ನೇ ಬಾರಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ.
ಮೆಲ್ಬೋರ್ನ್‌ನಲ್ಲಿ (Melbourne) ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಇನಿಂಗ್ಸ್ ಮತ್ತು 182 ರನ್‌ಗಳಿಂದ ಸೋಲಿಸಿರುವ ಆಸ್ಟ್ರೇಲಿಯಾ (Australia beat South Africa) ತಂಡ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದ ಅಜೇಯ ಮುನ್ನಡೆ ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಕೈವಶ ಮಾಡಿಕೊಂಡಿರುವ ಪ್ಯಾಟ್ ಕಮ್ಮಿನ್ಸ್ ತಂಡ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಸಾಧನೆ ಮಾಡಿದೆ. ಮೊದಲನೆಯದ್ದು, 16 ವರ್ಷಗಳ ಬಳಿಕ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಐತಿಹಾಸಿಕ ದಾಖಲೆ ಮಾಡಿದರೆ, ಎರಡನೇಯದಾಗಿ ಈ ಗೆಲುವಿನ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ (ICC World Test Championship) ಟಿಕೆಟ್ ಅನ್ನು ಬಹುತೇಕ ಖಚಿತಪಡಿಸಿಕೊಂಡಿದೆ.
ಈ ಗೆಲುವಿನಿಂದ ಆಸ್ಟ್ರೇಲಿಯಾ 12 ಅಂಕಗಳನ್ನು ಪಡೆದುಕೊಂಡಿದ್ದು, ಇದರೊಂದಿಗೆ 14 ಪಂದ್ಯಗಳಲ್ಲಿ ಒಟ್ಟು 132 ಅಂಕ ಗಳಿಸಿದೆ. ಆಸ್ಟ್ರೇಲಿಯಾದ ಗೆಲುವಿನ ಶೇಕಡಾವಾರು ಕೂಡ 78.57 ಕ್ಕೆ ಏರಿದೆ. ಇದರರ್ಥ ಆಸ್ಟ್ರೇಲಿಯಾ ಮುಂದಿನ ವರ್ಷ ಓವಲ್‌ನಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಪ್ರವೇಶಿಸುತ್ತಿದೆ.
AUS vs SA: 16 ವರ್ಷಗಳ ವನವಾಸ ಅಂತ್ಯ; ಸರಣಿಯೊಂದಿಗೆ ಬಾಕ್ಸಿಂಗ್ ಡೇ ಟೆಸ್ಟ್ ಗೆದ್ದ ಆಸ್ಟ್ರೇಲಿಯಾ..!
ಕ್ಷೀಣಿಸಿದ ದಕ್ಷಿಣ ಆಫ್ರಿಕಾದ ಭರವಸೆ
ಆಸ್ಟ್ರೇಲಿಯ ನಂತರ ಭಾರತ ತಂಡ ಎರಡನೇ ಸ್ಥಾನದಲ್ಲಿದ್ದು, ಸತತ 2ನೇ ಬಾರಿ ಫೈನಲ್ ಪ್ರವೇಶಿಸುವ ನಿರೀಕ್ಷೆಯಲ್ಲಿದೆ. ಅದೇ ಸಮಯದಲ್ಲಿ ದಕ್ಷಿಣ ಆಫ್ರಿಕಾ ಬಾಕ್ಸಿಂಗ್ ಟೆಸ್ಟ್‌ನಲ್ಲಿ ಸೋಲು ಅನುಭವಿಸಿರುವುದರಿಂದ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಹೀಗಾಗಿ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪುವ ಹರಿಣಗಳ ಭರವಸೆ ಕಡಿಮೆಯಾಗಿದ್ದರೂ ಇನ್ನೂ ಫೈನಲ್ ತಲುಪುವ ಅವಕಾಶ ಹೊಂದಿದ್ದಾರೆ.
ಆಸ್ಟ್ರೇಲಿಯ ಪ್ರವಾಸದಲ್ಲಿ ಸೋತ ದಕ್ಷಿಣ ಆಫ್ರಿಕಾ
ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯ ಪ್ರವಾಸಕ್ಕೆ ಬಂದಾಗ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿತ್ತು. ಆದರೆ ಸತತ ಎರಡು ಸೋಲುಗಳನ್ನು ಕಂಡಿರುವ ದಕ್ಷಿಣ ಆಫ್ರಿಕಾ ತಂಡ ಎರಡನೇ ಸ್ಥಾನದಿಂದ ಕುಸಿದಿದೆ. ಶೇಕಡಾ 58.93 ಗೆಲುವಿನೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾದ ಗೆಲುವಿನ ಶೇಕಡಾವಾರು 53.33 ಆಗಿದೆ. ಅದೇ ಸಮಯದಲ್ಲಿ, ಮೆಲ್ಬೋರ್ನ್ ಸೋಲಿನ ನಂತರ ದಕ್ಷಿಣ ಆಫ್ರಿಕಾದ ಗೆಲುವಿನ ಶೇಕಡಾವಾರು 50 ಆಗಿದೆ.
ಪಂದ್ಯದ ವಿವರ
ಇನ್ನೂ ಈ ಟೆಸ್ಟ್ ಪಂದ್ಯದ ಕುರಿತು ಮಾತನಾಡುವುದಾದರೆ, ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಡೀನ್ ಎಲ್ಗರ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 189 ರನ್‌ಗಳಿಗೆ ಕುಸಿಯಿತು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್ ನಷ್ಟಕ್ಕೆ 575 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ದೊಡ್ಡ ಅಂತರದಿಂದ ಹಿನ್ನಡೆ ಸಾಧಿಸಿದ ದಕ್ಷಿಣ ಆಫ್ರಿಕಾ ತಂಡ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿ, ಟೆಸ್ಟ್ನ ನಾಲ್ಕನೇ ದಿನ ಅಂದರೆ ಗುರುವಾರ 204 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಇನ್ನಿಂಗ್ಸ್ ಸೋಲು ಅನುಭವಿಸಿದಲ್ಲದೆ ಸರಣಿಯನ್ನು ಕಳೆದುಕೊಂಡಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:16 am, Thu, 29 December 22