
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ರೋಚಕ ಹಾಗೂ ಜಿದ್ದಾಜಿದ್ದಿನ ಪೈಪೋಟಿಗೆ ಸಾಕ್ಷಿಯಾಗುವ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ತಂಡಗಳು ಮತ್ತೊಂದು ದ್ವಿಪಕ್ಷೀಯ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗಲು ಸಜ್ಜಾಗಿವೆ. ವಿಶ್ವ ಕ್ರಿಕೆಟ್‌ನ ಇಬ್ಬರು ದೈತ್ಯರ ನಡುವಿನ ಈ ಸಮರವು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಅದರಲ್ಲೂ ಈ ಸರಣಿ ಆಸ್ಟ್ರೇಲಿಯಾ ಪಾಲಿಗೆ ಕೇವಲ ಸರಣಿಯಷ್ಟೇ ಅಲ್ಲದೆ, ದಶಕಗಳ ಹಳೆಯ ಕಹಿ ಇತಿಹಾಸವನ್ನು ಬದಲಿಸುವ ದೊಡ್ಡ ಸವಾಲಾಗಿದೆ.
ಕ್ರಿಕೆಟ್ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡವು ಯಾವುದೇ ದೇಶಕ್ಕೆ ಪ್ರವಾಸ ಹೋದರೂ ಅಲ್ಲಿ ಪ್ರಾಬಲ್ಯ ಸಾಧಿಸುವುದು ಸಾಮಾನ್ಯ. ಆದರೆ ಸೌತ್ ಆಫ್ರಿಕಾದ ಮಣ್ಣಿನಲ್ಲಿ ಮಾತ್ರ ಕಾಂಗರೂ ಪಡೆಯ ಆಟ ಕಳೆದ 15 ವರ್ಷಗಳಿಂದ ನಡೆಯುತ್ತಿಲ್ಲ.
ಆಸ್ಟ್ರೇಲಿಯಾ ತಂಡವು ಕೊನೆಯ ಬಾರಿಗೆ ಸೌತ್ ಆಫ್ರಿಕಾ ನೆಲದಲ್ಲಿ ದ್ವಿಪಕ್ಷೀಯ ಏಕದಿನ ಸರಣಿ ಗೆದ್ದಿದ್ದು ಅಕ್ಟೋಬರ್/ನವೆಂಬರ್ 2011 ರಲ್ಲಿ. ಅಂದು ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಆಸೀಸ್ 2-1 ರಿಂದ ಸರಣಿ ಕೈವಶ ಮಾಡಿಕೊಂಡಿತ್ತು.
ಅದಾದ ನಂತರ ಆಫ್ರಿಕಾ ಪ್ರವಾಸ ಕೈಗೊಂಡಾಗಲೆಲ್ಲಾ (2016 ರಲ್ಲಿ 0-5, 2020 ರಲ್ಲಿ 0-3, 2023 ರಲ್ಲಿ 2-3) ಆಸ್ಟ್ರೇಲಿಯಾ ಮುಖಭಂಗ ಅನುಭವಿಸುತ್ತಲೇ ಬಂದಿದೆ.
ಕೇವಲ ಸೌತ್ ಆಫ್ರಿಕಾದಲ್ಲಿ ಮಾತ್ರವಲ್ಲ, ತನ್ನದೇ ತಾಯ್ನಾಡಿನಲ್ಲೂ (ಆಸ್ಟ್ರೇಲಿಯಾದಲ್ಲಿ) ಪ್ರವಾಸಿ ಸೌತ್ ಆಫ್ರಿಕಾ ವಿರುದ್ಧ ಗೆಲುವಿನ ನಗೆ ಬೀರಲು ಆಸ್ಟ್ರೇಲಿಯಾ ತಡಕಾಡುತ್ತಿದೆ. ಆಸ್ಟ್ರೇಲಿಯಾ ತಂಡವು ತನ್ನ ನೆಲದಲ್ಲಿ ಸೌತ್ ವಿರುದ್ಧ ಕೊನೆಯ ಬಾರಿ ಏಕದಿನ ಸರಣಿ ಗೆದ್ದಿದ್ದು ನವೆಂಬರ್ 2014 ರಲ್ಲಿ. ಅಂದರೆ ಆಸ್ಟ್ರೇಲಿಯಾ ಪಡೆ ಸೌತ್ ಆಫ್ರಿಕಾ ವಿರುದ್ಧ ತವರಿನಲ್ಲಿ ಏಕದಿನ ಸರಣಿ ಗೆದ್ದು ಬರೋಬ್ಬರಿ 12 ವರ್ಷಗಳು ಕಳೆದಿವೆ.
ಕಳೆದ ಹಲವು ವರ್ಷಗಳಿಂದ ಏಕದಿನ ಕ್ರಿಕೆಟ್‌ನಲ್ಲಿ ಸೌತ್ ಆಫ್ರಿಕಾ ವಿರುದ್ಧ ಸತತ ಸೋಲುಗಳಿಂದ ಕಂಗೆಟ್ಟಿರುವ ಆಸ್ಟ್ರೇಲಿಯಾ ತಂಡಕ್ಕೆ, ಇದೀಗ ಆರಂಭವಾಗುತ್ತಿರುವ ಹೊಚ್ಚ ಹೊಸ ದ್ವಿಪಕ್ಷೀಯ ಸರಣಿಯು ಸೇಡು ತೀರಿಸಿಕೊಳ್ಳಲು ಸಿಕ್ಕಿರುವ ಸುವರ್ಣ ಅವಕಾಶವಾಗಿದೆ. ಮತ್ತೊಂದೆಡೆ, ತನ್ನ ಅಧಿಪತ್ಯವನ್ನು ಕಾಯ್ದುಕೊಳ್ಳಲು ಹರಿಣಗಳ ಪಡೆ ತಂತ್ರ ರೂಪಿಸುತ್ತಿದೆ.
ವಿಶ್ವದ ಇಬ್ಬರು ಬಲಿಷ್ಠ ಎದುರಾಳಿಗಳ ನಡುವಿನ ಈ ಕಾದಾಟದಲ್ಲಿ ಆಸ್ಟ್ರೇಲಿಯಾ ತನ್ನ ದಶಕಗಳ ಸುದೀರ್ಘ ಗೆಲುವಿನ ಬರವನ್ನು ನೀಗಿಸಿಕೊಳ್ಳುತ್ತಾ? ಅಥವಾ ಸೌತ್ ಆಫ್ರಿಕಾ ತನ್ನ ವಿಜಯಯಾತ್ರೆಯನ್ನು ಮುಂದುವರಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಸೌತ್ ಆಫ್ರಿಕಾ ಏಕದಿನ ತಂಡ: ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಾಮ್, ಟ್ರಿಸ್ಟನ್ ಸ್ಟಬ್ಸ್, ರಯಾನ್ ರಿಕೆಲ್ಟನ್, ಟೋನಿ ಡಿ ಝೋರ್ಝಿ, ಮ್ಯಾಥ್ಯೂ ಬ್ರೀಟ್ಝ್ಕೆ, ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಜೆರಾಲ್ಡ್ ಕೋಟ್ಝಿ, ಲಿಝಾಡ್ ವಿಲಿಯಮ್ಸ್, ದುವಾನ್ ಯಾನ್ಸೆನ್, ನ್ಖೋಬಾನಿ ಮೊಕೊಯಾನಾ, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್ ಮತ್ತು ಬ್ಯಾರ್ನ್ ಫಾರ್ಟುಯಿನ್.
ಇದನ್ನೂ ಓದಿ: ಏಷ್ಯನ್ ಗೇಮ್ಸ್ 2026: 14 ಪದಕಗಳೊಂದಿಗೆ 13ನೇ ಸ್ಥಾನದಲ್ಲಿ ಭಾರತ!
ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಆ್ಯಡಂ ಝಂಪಾ, ಜೋಶ್ ಹೇಝಲ್‌ವುಡ್, ನಾಥನ್ ಎಲ್ಲಿಸ್, ಮ್ಯಾಥ್ಯೂ ರೆನ್‌ಶಾ, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಸ್ಪೆನ್ಸರ್ ಜಾನ್ಸನ್, ಒಲಿವರ್ ಪೀಕ್ ಮತ್ತು ಬಿಲ್ಲಿ ಸ್ಟಾನ್ಲೇಕ್.