AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs WI: ವಿಂಡೀಸ್ ವಿರುದ್ಧ 10 ವಿಕೆಟ್​ಗಳ ಸುಲಭ ಜಯ ಸಾಧಿಸಿದ ಆಸ್ಟ್ರೇಲಿಯಾ

AUS vs WI: ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ವೆಸ್ಟ್ ಇಂಡೀಸ್ ತಂಡ ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದೆ. ಈ ಮೂಲಕ ಸರಣಿಯಲ್ಲಿ 0-1 ಅಂತರದ ಹಿನ್ನಡೆ ಅನುಭವಿಸಿದೆ.

AUS vs WI: ವಿಂಡೀಸ್ ವಿರುದ್ಧ 10 ವಿಕೆಟ್​ಗಳ ಸುಲಭ ಜಯ ಸಾಧಿಸಿದ ಆಸ್ಟ್ರೇಲಿಯಾ
ಆಸ್ಟ್ರೇಲಿಯಾ ತಂಡ
ಪೃಥ್ವಿಶಂಕರ
|

Updated on:Jan 19, 2024 | 4:00 PM

Share

ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸ ಮಾಡಿರುವ ವೆಸ್ಟ್ ಇಂಡೀಸ್ ತಂಡ (Australia vs West Indies) ಮೊದಲ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್​ಗಳ ಹೀನಾಯ ಸೋಲು ಅನುಭವಿಸಿದೆ. ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ 188 ರನ್​ಗಳಿಗೆ ಮೊದಲ ಇನ್ನಿಂಗ್ಸ್ ಮುಗಿಸಿದರೆ, ಆತಿಥೇಯ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 283 ರನ್ ಕಲೆಹಾಕಿತು. ಎರಡನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಪಡೆ ಕೇವಲ 120 ರನ್​ಗಳಿಗೆ ಆಲೌಟ್ ಆಗಿ ಆಸೀಸ್​ಗೆ 26 ರನ್​ಗಳ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ ಗೆಲುವಿನ ದಡ ಸೇರಿತು. ಮೊದಲ ಪಂದ್ಯ ಕೇವಲ ಮೂರು ದಿನಗಳಲ್ಲಿ ಮುಗಿದಿದ್ದು, ಎರಡನೇ ಪಂದ್ಯ ಜನವರಿ 25ರಿಂದ ಆರಂಭವಾಗಲಿದೆ.

ತತ್ತರಿಸಿದ ವಿಂಡೀಸ್ ಇನ್ನಿಂಗ್ಸ್

ಪಂದ್ಯದಲ್ಲಿ ಟಾಸ್ ಸೋತ ವಿಂಡೀಸ್‌ಗೆ ಬ್ಯಾಟಿಂಗ್‌ನಲ್ಲಿ ವಿಶೇಷವಾದುದನ್ನು ಮಾಡಲು ಸಾಧ್ಯವಾಗಲಿಲ್ಲ. ಕಿರ್ಕ್ ಮೆಕೆಂಜಿ ವಿಂಡೀಸ್ ಪರ ಗರಿಷ್ಠ 50 ರನ್ ಗಳಿಸಿದರು. ಇವರನ್ನು ಹೊರುಪಡಿಸಿ ಶಮರ್ ಜೋಸೆಫ್ 26 ರನ್, ಕೆಮರ್ ರೋಚ್ ಔಟಾಗದೆ 17 ರನ್ ಕಲೆಹಾಕಿದರು. ಉಳಿದಂತೆ ಅಲ್ಜಾರಿ ಜೋಸೆಫ್ 14 ರನ್, ನಾಯಕ ಕ್ರೇಗ್ ಬ್ರೈತ್‌ವೈಟ್ ಮತ್ತು ಎಲಿಕ್ ಅತಾನಾಜೆ ಇಬ್ಬರೂ ತಲಾ 13 ರನ್, ಕೇವಮ್ ಹಾಡ್ಜ್ 12 ರನ್ ತೇಜ್​ನಾರಾಯಣ್ ಚಂದ್ರಪಾಲ್ ಮತ್ತು ಜೋಶುವಾ ಡಾ ಸಿಲ್ವಾ ಇಬ್ಬರೂ ತಲಾ 6 ರನ್ ಗಳಿಸಿದರು. ಜಸ್ಟಿನ್ ಗ್ರೀವ್ 5 ಮತ್ತು ಗುಡಾಕೇಶ್ ಮೋತಿ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಆಸ್ಟ್ರೇಲಿಯಾ ಪರ ಜೋಶ್ ಹೇಜಲ್‌ವುಡ್ ಮತ್ತು ನಾಯಕ ಪ್ಯಾಟ್ ಕಮಿನ್ಸ್ ತಲಾ 4 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ಇಬ್ಬರೂ ತಲಾ 1 ವಿಕೆಟ್ ಕಳೆದುಕೊಂಡರು.

ಶತಕ ಸಿಡಿಸಿದ ಹೆಡ್

ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 283 ರನ್ ಗಳಿಸಿತ್ತು. ಆಸ್ಟ್ರೇಲಿಯ ಪರ ಟ್ರಾವಿಸ್ ಹೆಡ್ 119 ರನ್​ಗಳ ಶತಕದ ಇನ್ನಿಂಗ್ಸ್ ಆಡಿದರು. ಟ್ರಾವಿಸ್ ತಮ್ಮ ಇನ್ನಿಂಗ್ಸ್​ನಲ್ಲಿ 134 ಎಸೆತಗಳನ್ನು ಎದುರಿಸಿ 12 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಇವರನ್ನು ಹೊರತುಪಡಿಸಿ ಉಸ್ಮಾನ್ ಖವಾಜಾ 45 ರನ್, ನಾಥನ್ ಲಿಯಾನ್ 24 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್​ನಲ್ಲಿ 95 ರನ್‌ಗಳ ಮುನ್ನಡೆ ಸಾಧಿಸಿತು. ವಿಂಡೀಸ್ ಪರ ಶಮರ್ ಜೋಸೆಫ್ ಚೊಚ್ಚಲ ಪಂದ್ಯದಲ್ಲೇ 5 ವಿಕೆಟ್ ಪಡೆದರೆ, ಕೆಮರ್ ರೋಚ್ ಮತ್ತು ಜಸ್ಟಿನ್ ಗ್ರೀವ್ಸ್ ತಲಾ 2 ವಿಕೆಟ್ ಪಡೆದರು. ಅಲ್ಜಾರಿ ಜೋಸೆಫ್ 1 ವಿಕೆಟ್ ಉರುಳಿಸಿದರು.

ಆಸ್ಟ್ರೇಲಿಯಾಕ್ಕೆ ಗೆಲುವಿನ ಆರಂಭ

ವಿಂಡೀಸ್ ಎರಡನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾಕ್ಕಿಂತ 25 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಆದ್ದರಿಂದ ಆಸ್ಟ್ರೇಲಿಯಾ ಗೆಲುವಿಗೆ 26 ರನ್‌ಗಳ ಸುಲಭದ ಸವಾಲು ಸಿಕ್ಕಿತು. ಈ ಸವಾಲನ್ನು ಆಸ್ಟ್ರೇಲಿಯಾ ಸುಲಭವಾಗಿ ಪೂರ್ಣಗೊಳಿಸಿತು. ಉಸ್ಮಾನ್ ಖವಾಜಾ 9 ರನ್ ಗಳಿಸಿ ರಿಟೈರ್ಡ್​ ಹರ್ಟ್ ಆದರೆ, ಸ್ಟೀವನ್ ಸ್ಮಿತ್ 11 ರನ್ ಮತ್ತು ಮಾರ್ನಸ್ ಲಬುಶೇನ್ 1 ರನ್ ಗಳಿಸಿ ಅಜೇಯರಾಗಿ ಉಳಿದರು.

ಉಭಯ ತಂಡಗಳು

ಆಸ್ಟ್ರೇಲಿಯಾ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಉಸ್ಮಾನ್ ಖವಾಜಾ, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್ ಮತ್ತು ಜೋಶ್ ಹ್ಯಾಜಲ್‌ವುಡ್.

ವಿಂಡೀಸ್ ತಂಡ: ಕ್ರೇಗ್ ಬ್ರಾಥ್‌ವೈಟ್ (ನಾಯಕ), ತೇಜ್​ನಾರಾಯಣ್ ಚಂದ್ರಪಾಲ್, ಕಿರ್ಕ್ ಮೆಕೆಂಜಿ, ಅಲಿಕ್ ಅಥಾನಾಜೆ, ಕವೆಮ್ ಹಾಡ್ಜ್, ಜಸ್ಟಿನ್ ಗ್ರೀವ್ಸ್, ಜೋಶುವಾ ಡ ಸಿಲ್ವಾ (ವಿಕೆಟ್ ಕೀಪರ್), ಅಲ್ಜಾರಿ ಜೋಸೆಫ್, ಗುಡಕೇಶ್ ಮೊಟ್ಟಿ, ಕೆಮರ್ ರೋಚ್ ಮತ್ತು ಶಮರ್ ಜೋಸೆಫ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:56 pm, Fri, 19 January 24