AUS vs WI: ಡಬ್ಲ್ಯುಟಿಸಿ ಫೈನಲ್ ಸೋತ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ
AUS vs WI: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸೋತಿರುವ ಆಸ್ಟ್ರೇಲಿಯಾ ತಂಡ ತನ್ನ ಮುಂದಿನ ಸರಣಿಗೆ ತಂಡದಲ್ಲಿ ಬದಲಾವಣೆಗಳನ್ನು ಮಾಡಿದೆ. ಉಪನಾಯಕ ಸ್ಟೀವ್ ಸ್ಮಿತ್ ಅವರ ಗಾಯದಿಂದಾಗಿ ಅವರ ಸ್ಥಾನ ತುಂಬುವ ಅಗತ್ಯವಿದೆ. ಬ್ರೆಂಡನ್ ಡಾಗೆಟ್ ಅವರ ಗಾಯದಿಂದಾಗಿ ಸೀನ್ ಅಬಾಟ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಸರಣಿಗೆ ಇದು ದೊಡ್ಡ ಪರಿಣಾಮ ಬೀರಲಿದೆ.

ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (World Test Championship) ಗೆಲ್ಲುವ ಗುರಿಯೊಂದಿಗೆ ಲಾರ್ಡ್ಸ್ ಮೈದಾನಕ್ಕಿಳಿದಿದ್ದ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ಮುಕ್ತಾಯದ ವೇಳೆಗೆ ಪಂದ್ಯವನ್ನು ಭಾಗಶಃ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಇದಕ್ಕೆ ಪೂರಕವಾಗಿ ಮೊದಲ ಇನ್ನಿಂಗ್ಸ್ನಲ್ಲಿ 74 ರನ್ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ಲಾರ್ಡ್ಸ್ ಇತಿಹಾಸವನ್ನು ನೋಡಿದವರಿಗೆ ಈ ಬಾರಿಯೂ ಆಸ್ಟ್ರೇಲಿಯಾವೇ ಚಾಂಪಿಯನ್ ಆಗುತ್ತದೆ ಎಂದೆನಿಸಿತ್ತು. ಇದಕ್ಕೆ ತಕ್ಕಂತೆ ಆಸ್ಟ್ರೇಲಿಯಾ ಕೂಡ ಎರಡನೇ ಇನ್ನಿಂಗ್ಸ್ನಲ್ಲಿ 282 ರನ್ಗಳ ಬೃಹತ್ ಟಾರ್ಗೆಟ್ ಸೆಟ್ ಮಾಡಿತ್ತು. ಆದರೆ ದಕ್ಷಿಣ ಆಫ್ರಿಕಾ ತಂಡ ಎಲ್ಲಾ ಅಂಕಿ ಅಂಶಗಳನ್ನು ಸುಳ್ಳು ಮಾಡಿ ನಾಲ್ಕನೇ ದಿನದಾಟದಲ್ಲೇ ಐದು ವಿಕೆಟ್ಗಳಿಂದ ಪಂದ್ಯವನ್ನು ಗೆದ್ದುಕೊಂಡು ಚೊಚ್ಚಲ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿತ್ತು. ಹೀಗಾಗಿ ತನ್ನ ಹಾಲಿ ಚಾಂಪಿಯನ್ ಪಟ್ಟವನ್ನು ಉಳಿಸಿಕೊಳ್ಳುವಲ್ಲಿ ಆಸ್ಟ್ರೇಲಿಯಾ ಎಡವಿತ್ತು. ಇದೀಗ ಫೈನಲ್ ಸೋತು ಮನೆಗೆ ಮರಳಿರುವ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ.
ಮೂರನೇ ಟೆಸ್ಟ್ ಚಾಂಪಿಯನ್‌ಶಿಪ್ ಅನ್ನು ರನ್ನರ್ಅಪ್ ಆಗಿ ಮುಗಿಸಿರುವ ಆಸ್ಟ್ರೇಲಿಯಾ ತಂಡ ನಾಲ್ಕನೇ ಆವೃತ್ತಿಯ ಟೆಸ್ಟ್ ಚಾಂಪಿಯನ್ಶಿಪ್ಗೆ ಈಗಿನಿಂದಲೇ ತಯಾರಿ ಆರಂಭಿಸಿದ್ದು, ಮುಂಬರುವ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಆದರೆ ಈ ಸರಣಿ ಪ್ರಾರಂಭವಾಗುವ ಮೊದಲೇ, ತಂಡದ ಆಟಗಾರ ಗಾಯಗೊಂಡು ತಂಡದಿಂದ ಹೊರಗುಳಿದಿರುವುದರಿಂದ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆಯಾಗಿದೆ.
ಸೀನ್ ಅಬಾಟ್ಗೆ ತಂಡದಲ್ಲಿ ಸ್ಥಾನ
ವಾಸ್ತವವಾಗಿ ವೆಸ್ಟ್ ಇಂಡೀಸ್ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾದ ಆಸ್ಟ್ರೇಲಿಯಾ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. ಡಬ್ಲ್ಯುಟಿಸಿ ಫೈನಲ್ ಸಮಯದಲ್ಲಿ ಆಸ್ಟ್ರೇಲಿಯಾ ತಂಡದಲ್ಲಿ ಮೀಸಲು ಆಟಗಾರನಾಗಿದ್ದ ವೇಗದ ಬೌಲರ್ ಬ್ರೆಂಡನ್ ಡಾಗೆಟ್ ಅವರನ್ನು ಗಾಯದ ಕಾರಣ ಸರಣಿಯಿಂದ ಹೊರಗಿಡಲಾಗಿದೆ. ಡಾಗೆಟ್ ಸೊಂಟದ ಗಾಯದಿಂದ ಬಳಲುತ್ತಿದ್ದರಿಂದ ಅವರನ್ನು ಆಸ್ಟ್ರೇಲಿಯಾಕ್ಕೆ ವಾಪಸ್ ಕಳುಹಿಸಲಾಗಿತ್ತು. ಅವರ ಸ್ಥಾನವನ್ನು ತುಂಬಲು, ಆಸ್ಟ್ರೇಲಿಯಾದ ಆಯ್ಕೆದಾರರು ತಂಡದಲ್ಲಿ ವೇಗದ ಬೌಲರ್ ಸೀನ್ ಅಬಾಟ್ ಅವರನ್ನು ಆಯ್ಕೆ ಮಾಡಿದ್ದಾರೆ. ವರ್ಷದ ಆರಂಭದಲ್ಲಿ ಶ್ರೀಲಂಕಾ ಪ್ರವಾಸದಲ್ಲಿ ತಂಡದಲ್ಲಿದ್ದ ಸೀನ್ ಅಬಾಟ್ ಆಸ್ಟ್ರೇಲಿಯಾ ಪರ ಸುಮಾರು 50 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಿದರಾದರೂ ಇನ್ನೂ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿಲ್ಲ.
ಸ್ಮಿತ್ 8 ವಾರ ತಂಡದಿಂದ ಔಟ್
ಆದಾಗ್ಯೂ, ಆಸ್ಟ್ರೇಲಿಯಾ ಎದುರಿಸುತ್ತಿರುವ ಸಮಸ್ಯೆ ಇದೊಂದೇ ಅಲ್ಲ. ತಂಡದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಉಪನಾಯಕ ಸ್ಟೀವ್ ಸ್ಮಿತ್ ಅವರ ಗಾಯವು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಫೈನಲ್‌ನ ಮೂರನೇ ದಿನದಂದು ಸ್ಲಿಪ್‌ನಲ್ಲಿ ಚೆಂಡನ್ನು ಹಿಡಿಯಲು ಪ್ರಯತ್ನಿಸುವಾಗ ಸ್ಮಿತ್ ಅವರ ಬಲಗೈ ಬೆರಳಿಗೆ ಗಾಯವಾಯಿತು. ಅಂದಿನಿಂದ, ಅವರು ಮೈದಾನಕ್ಕೆ ಇಳಿಯಲು ಸಾಧ್ಯವಾಗಿರಲಿಲ್ಲ. ವೈದ್ಯಕೀಯ ಚಿಕಿತ್ಸೆಯ ಬಳಿಕ ಅವರ ಚೇತರಿಸಿಕೊಳ್ಳಲು ಸುಮಾರು 8 ವಾರಗಳು ಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಜೂನ್ 25 ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೆ ಅವರು ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ತೋರುತ್ತದೆ.
WTC 2025 final: ಹಿಂದೆಂದೂ ಸಂಭವಿಸದ ಅಪರೂಪದ ಘಟನೆಗೆ ಸಾಕ್ಷಿಯಾದ ಡಬ್ಲ್ಯುಟಿಸಿ ಫೈನಲ್
ಆಸ್ಟ್ರೇಲಿಯಾ ಟೆಸ್ಟ್ ತಂಡ: ಪ್ಯಾಟ್ ಕಮ್ಮಿನ್ಸ್ (ನಾಯಕ), ಸೀನ್ ಅಬಾಟ್, ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಜೋಶ್ ಹೇಜಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖವಾಜಾ, ಸ್ಯಾಮ್ ಕಾನ್‌ಸ್ಟಾಸ್, ಮ್ಯಾಟ್ ಕುಹ್ನೆಮನ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:10 pm, Sun, 15 June 25
