Ind Vs Aus
ಪರ್ತ್ನಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಮೊದಲ ಏಕದಿನ ಪಂದ್ಯದಲ್ಲಿ 30 ಓವರ್ಗಳನ್ನು ಕಡಿತ ಮಾಡಲಾಗಿದೆ. ಅಂದರೆ ಪ್ರತಿ ಇನಿಂಗ್ಸ್ 50 ಓವರ್ಗಳ ಬದಲಾಗಿ 35 ಓವರ್ಗಳಿಗೆ ಸೀಮಿತವಾಗಿರಲಿದೆ. ಪಂದ್ಯದ ನಡುವೆ ಮಳೆ ಬಂದಿದ್ದರಿಂದ ಕೆಲ ಕಾಲ ಮ್ಯಾಚ್ ಸ್ಥಗಿತಗೊಂಡಿದ್ದು, ಹೀಗಾಗಿ ಓವರ್ಗಳ ಕಡಿತದೊಂದಿಗೆ ಪಂದ್ಯ ಮುಂದುವರೆಸಲು ನಿರ್ಧರಿಸಲಾಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡುತ್ತಿರುವ ಟೀಮ್ ಇಂಡಿಯಾ ಉತ್ತಮ ಆರಂಭ ಪಡೆದಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಅನುಭವಿ ದಾಂಡಿಗ ರೋಹಿತ್ ಶರ್ಮಾ ಕೇವಲ 8 ರನ್ಗಳಿಗೆ ಬಲಗೈ ವೇಗಿ ಜೋಶ್ ಹೇಝಲ್ವುಡ್ಗೆ ವಿಕೆಟ್ ಒಪ್ಪಿಸಿದರು.
ಆ ಬಳಿಕ ಕ್ರೀಸ್ಗೆ ಆಗಮಿಸಿದ ವಿರಾಟ್ ಕೊಹ್ಲಿ 8 ಎಸೆತಗಳನ್ನು ಎದುರಿಸಿದರೂ ಒಂದೇ ಒಂದು ರನ್ಗಳಿಸಲು ಸಾಧ್ಯವಾಗಿಲ್ಲ. ಅಲ್ಲದೆ ಮಿಚೆಲ್ ಸ್ಟಾರ್ಕ್ ಎಸೆತದಲ್ಲಿ ಕೂಪರ್ ಕೊನೊಲಿಗೆ ಕ್ಯಾಚ್ ನೀಡಿ ಶೂನ್ಯದೊಂದಿಗೆ ಹಿಂತಿರುಗಿದರು.
ವಿರಾಟ್ ಕೊಹ್ಲಿಯ ನಿರ್ಗಮನದ ಬೆನ್ನಲ್ಲೇ ನಾಯಕ ಶುಭ್ಮನ್ ಗಿಲ್ (10) ವೇಗಿ ನಾಥನ್ ಎಲ್ಲಿಸ್ ಎಸೆತದಲ್ಲಿ ವಿಕೆಟ್ ಕೀಪರ್ಗೆ ಕ್ಯಾಚ್ ನೀಡಿದರು. ಪರಿಣಾಮ ಟೀಮ್ ಇಂಡಿಯಾ 8.1 ಓವರ್ಗಳಲ್ಲಿ ಕೇವಲ 25 ರನ್ಗಳಿಸಿ 3 ವಿಕೆಟ್ ಕಳೆದುಕೊಂಡಿತು. ಅಲ್ಲದೆ ಮೊದಲ 10 ಓವರ್ಗಳಲ್ಲಿ ಗಳಿಸಿದ್ದು ಕೇವಲ 27 ರನ್ಗಳು ಮಾತ್ರ.
ಇನ್ನು 11.5 ಓವರ್ಗಳಲ್ಲಿ ಭಾರತ ತಂಡವು 37 ರನ್ ಕಲೆಹಾಕಿತ್ತು. ಈ ವೇಳೆ ಮಳೆ ಬಂದಿದ್ದರಿಂದ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ 15 ಓವರ್ಗಳ ಕಡಿತದೊಂದಿಗೆ ಪ್ರತಿ ನಿಂಗ್ಸ್ಗೆ 35 ಓವರ್ಗಳನ್ನು ನಿಗದಿಪಡಿಸಲಾಗಿದೆ.
ಸದ್ಯ ಕ್ರೀಸ್ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಅಕ್ಷರ್ ಪಟೇಲ್ ಬ್ಯಾಟಿಂಗ್ ಮಾಡುತ್ತಿದ್ದು, ಟೀಮ್ ಇಂಡಿಯಾ 35 ಓವರ್ಗಳಲ್ಲಿ ಎಷ್ಟು ಸ್ಕೋರ್ ಪೇರಿಸಲಿದೆ ಕಾದು ನೋಡಬೇಕಿದೆ.
ಭಾರತ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ, ಶುಭಮನ್ ಗಿಲ್ (ನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ (ಪಾದಾರ್ಪಣೆ), ಹರ್ಷಿತ್ ರಾಣಾ, ಮೊಹಮ್ಮದ್ ಸಿರಾಜ್, ಅರ್ಷ್‌ದೀಪ್ ಸಿಂಗ್.
ಇದನ್ನೂ ಓದಿ: 2 ವರ್ಷಗಳ ಬಳಿಕ ಮತ್ತೆ 10 ಓವರ್ಗಳಲ್ಲಿ ಮುಗ್ಗರಿಸಿದ ಟೀಮ್ ಇಂಡಿಯಾ
ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್: ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ (ನಾಯಕ), ಮ್ಯಾಥ್ಯೂ ಶಾರ್ಟ್, ಜೋಶ್ ಫಿಲಿಪ್ (ವಿಕೆಟ್ ಕೀಪರ್), ಮ್ಯಾಟ್ ರೆನ್ಶಾ, ಕೂಪರ್ ಕೊನೊಲಿ, ಮಿಚೆಲ್ ಓವನ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್, ಮ್ಯಾಥ್ಯೂ ಕುಹ್ನೆಮನ್, ಜೋಶ್ ಹೇಝಲ್ವುಡ್.