AUS vs PAK: ಪಾಕ್ ವೈಟ್ ವಾಶ್: ವಾರ್ನರ್​ಗೆ ಗೆಲುವಿನ ವಿದಾಯ

Australia vs Pakistan: ಪಾಕಿಸ್ತಾನ್ ವಿರುದ್ಧದ 3 ಪಂದ್ಯಗಳ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ 360 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಮೆಲ್ಬೋರ್ನ್​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ 79 ರನ್​ಗಳ ಸೋಲನುಭವಿಸಿತ್ತು.

AUS vs PAK: ಪಾಕ್ ವೈಟ್ ವಾಶ್: ವಾರ್ನರ್​ಗೆ ಗೆಲುವಿನ ವಿದಾಯ
Australia vs Pakistan
Follow us
TV9 Web
| Updated By: ಝಾಹಿರ್ ಯೂಸುಫ್

Updated on: Jan 06, 2024 | 8:30 AM

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲೂ ಆಸ್ಟ್ರೇಲಿಯಾ ತಂಡ ಭರ್ಜರಿ ಜಯ ಸಾಧಿಸಿದೆ. ಈ ಜಯದೊಂದಿಗೆ ಡೇವಿಡ್ ವಾರ್ನರ್ (David Warner) ಟೆಸ್ಟ್ ಕ್ರಿಕೆಟ್​ಗೆ ಗೆಲುವಿನ ವಿದಾಯ ಹೇಳಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡವು ಕಮಿನ್ಸ್ ಅವರ ಮಾರಕ ದಾಳಿಗೆ ತತ್ತರಿಸಿತು. ಪರಿಣಾಮ 227 ರನ್​ಗಳಿಗೆ 9 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ಕಣಕ್ಕಿಳಿದ ಅಮೀರ್ ಜಮಾಲ್ 97 ಎಸೆತಗಳಲ್ಲಿ 82 ರನ್ ಬಾರಿಸಿ ತಂಡದ ಮೊತ್ತವನ್ನು 300ರ ಗಡಿದಾಟಿಸಿದರು. ಅಂತಿಮವಾಗಿ ಪಾಕಿಸ್ತಾನ್ ತಂಡವು 313 ರನ್​ಗಳಿಸಿ ಮೊದಲ ಇನಿಂಗ್ಸ್ ಅಂತ್ಯಗೊಳಿಸಿತು. ಆಸ್ಟ್ರೇಲಿಯಾ ಪರ ಪ್ಯಾಟ್ ಕಮಿನ್ಸ್ 61 ರನ್​ಗಳಿಗೆ 5 ವಿಕೆಟ್ ಪಡೆದರು.

ಇದರ ಬೆನ್ನಲ್ಲೇ ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಪರ ಮಾರ್ನಸ್ ಲಾಬುಶೇನ್ (60) ಹಾಗೂ ಮಿಚೆಲ್ ಮಾರ್ಷ್ (54) ಅರ್ಧಶತಕ ಬಾರಿಸಿ ಮಿಂಚಿದರು. ಇದಾಗ್ಯೂ ಅಮೀರ್ ಜಮಾಲ್ ದಾಳಿಗೆ ಸಿಲುಕಿದ ಆಸ್ಟ್ರೇಲಿಯಾ ತಂಡ 299 ರನ್​ ಕಲೆಹಾಕಿ ಆಲೌಟ್ ಆಯಿತು.

14 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಪಾಕಿಸ್ತಾನ್ ತಂಡದ ಈ ಬಾರಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದರು. ಜೋಶ್ ಹ್ಯಾಝಲ್​ವುಡ್ ಹಾಗೂ ನಾಥನ್ ಲಿಯಾನ್ ದಾಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಪಾಕ್ ಬ್ಯಾಟರ್​ಗಳು 115 ರನ್​ಗಳಿಗೆ ಆಲೌಟ್ ಆದರು. ಆಸೀಸ್ ಪರ ಹ್ಯಾಝಲ್​ವುಡ್ 4 ವಿಕೆಟ್ ಪಡೆದರೆ, ಲಿಯಾನ್ 3 ವಿಕೆಟ್ ಕಬಳಿಸಿ ಮಿಂಚಿದರು.

ದ್ವಿತೀಯ ಇನಿಂಗ್ಸ್​ನಲ್ಲಿ 130 ರನ್​ಗಳ ಗುರಿ ಪಡೆದ ಆಸ್ಟ್ರೇಲಿಯಾ ತಂಡಕ್ಕೆ ಡೇವಿಡ್ ವಾರ್ನರ್ ಭರ್ಜರಿ ಆರಂಭ ಒದಗಿಸಿದರು. ತಮ್ಮ ಕೊನೆಯ ಇನಿಂಗ್ಸ್​ನಲ್ಲಿ 57 ರನ್ ಬಾರಿಸಿ ವಾರ್ನರ್ ಔಟ್ ಆದರು. ಮತ್ತೊಂದೆಡೆ ಮಾರ್ನಸ್ ಲಾಬುಶೇನ್ ಅಜೇಯ 62 ರನ್ ಬಾರಿಸುವ ಮೂಲಕ 2 ವಿಕೆಟ್ ನಷ್ಟಕ್ಕೆ 130 ರನ್​ಗಳ ಗುರಿ ಮುಟ್ಟಿಸಿದರು. ಈ ಮೂಲಕ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಪಾಕಿಸ್ತಾನ್ ವೈಟ್ ವಾಶ್:

ಪಾಕಿಸ್ತಾನ್ ವಿರುದ್ಧದ 3 ಪಂದ್ಯಗಳ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡ 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಪರ್ತ್​ನಲ್ಲಿ ನಡೆದ ಮೊದಲ ಟೆಸ್ಟ್​ ಪಂದ್ಯದಲ್ಲಿ ಆಸ್ಟ್ರೇಲಿಯಾ 360 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇನ್ನು ಮೆಲ್ಬೋರ್ನ್​ನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯದಲ್ಲಿ ಪಾಕ್ ತಂಡ 79 ರನ್​ಗಳ ಸೋಲನುಭವಿಸಿತ್ತು. ಇದೀಗ ಮೂರನೇ ಪಂದ್ಯದಲ್ಲೂ ಪಾಕ್ ತಂಡಕ್ಕೆ ಸೋಲುಣಿಸಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ಪಡೆ ಪಾಕ್ ತಂಡವನ್ನು ವೈಟ್ ವಾಶ್ ಮಾಡಿದೆ.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಡೇವಿಡ್ ವಾರ್ನರ್ , ಉಸ್ಮಾನ್ ಖ್ವಾಜಾ , ಮಾರ್ನಸ್ ಲಾಬುಶೇನ್, ಸ್ಟೀವ್ ಸ್ಮಿತ್ , ಟ್ರಾವಿಸ್ ಹೆಡ್ , ಮಿಚೆಲ್ ಮಾರ್ಷ್ , ಅಲೆಕ್ಸ್ ಕ್ಯಾರಿ ( ವಿಕೆಟ್ ಕೀಪರ್ ) , ಮಿಚೆಲ್ ಸ್ಟಾರ್ಕ್ , ಪ್ಯಾಟ್ ಕಮಿನ್ಸ್ (ನಾಯಕ) , ನಾಥನ್ ಲಿಯಾನ್ , ಜೋಶ್ ಹ್ಯಾಝಲ್​ವುಡ್.

ಇದನ್ನೂ ಓದಿ: IPL 2024: RCB ತಂಡದ ನಾಯಕತ್ವದಲ್ಲಿ ಮತ್ತೆ ಬದಲಾವಣೆ..?

ಪಾಕಿಸ್ತಾನ್ ಪ್ಲೇಯಿಂಗ್ 11: ಅಬ್ದುಲ್ಲಾ ಶಫೀಕ್ , ಸೈಮ್ ಅಯ್ಯೂಬ್ , ಶಾನ್ ಮಸೂದ್ (ನಾಯಕ) , ಬಾಬರ್ ಆಝಂ , ಸೌದ್ ಶಕೀಲ್ , ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್) , ಅಘಾ ಸಲ್ಮಾನ್ , ಅಮೀರ್ ಜಮಾಲ್ , ಸಾಜಿದ್ ಖಾನ್ , ಹಸನ್ ಅಲಿ , ಮೀರ್ ಹಂಝ.