IND vs PAK, Super 4: ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೂ ಮುನ್ನ ಭಾರತಕ್ಕೆ ಬಿಗ್ ಶಾಕ್: ಅಕ್ಷರ್ ಪಟೇಲ್ ಇಂಜುರಿ
Axar Patel Injury, India vs Oman: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ ಓಮನ್ ವಿರುದ್ಧದ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದಾರೆ. ಗಾಯದ ನಂತರ ಅವರು ಮೈದಾನಕ್ಕೆ ಹಿಂದಿರುಗಲಿಲ್. ಇದರಿಂದಾಗಿ ಅವರು ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ಆಡುವ ಬಗ್ಗೆ ಅನುಮಾನವಿದೆ.

ಬೆಂಗಳೂರು (ಸೆ. 20): ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಶುಕ್ರವಾರ ಭಾರತ ತಂಡ 2025 ರ ಏಷ್ಯಾ ಕಪ್‌ನ ಗುಂಪು ಹಂತದ ಕೊನೆಯ ಪಂದ್ಯವನ್ನು ಆಡಿತು. ಈ ಪಂದ್ಯವನ್ನು ಭಾರತ ತಂಡ 21 ರನ್‌ಗಳಿಂದ ಗೆದ್ದಿದೆ. ಟೀಮ್ ಇಂಡಿಯಾ (Team India) ಈಗಾಗಲೇ ಸೂಪರ್ ಫೋರ್‌ನಲ್ಲಿ ಸ್ಥಾನ ಪಡೆದಿರುವ ಕಾರಣ ಈ ಪಂದ್ಯ ಕೇವಲ ಔಪಚಾರಿಕವಾಗಿತ್ತು. ಹೀಗಾಗಿ ತಂಡದಲ್ಲಿ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಿದರೆ ನಾಯಕ ಸೂರ್ಯಕುಮಾರ್ ಯಾದವ್ 8 ವಿಕೆಟ್‌ಗಳ ಪತನದ ನಂತರವೂ ಬ್ಯಾಟಿಂಗ್ ಮಾಡಲು ಬರಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 188 ರನ್ ಗಳಿಸಿತು. ಓಮನ್ 167 ರನ್ ಗಳಿಸಿತು. ಇದೀಗ ಟೀಮ್ ಇಂಡಿಯಾ ಸೂಪರ್- 4ನ ಮೊದಲ ಪಂದ್ಯಕ್ಕೆ ಸಜ್ಜಾಗುತ್ತಿದ್ದು, ಪಾಕಿಸ್ತಾನ ವಿರುದ್ಧ ಆಡಲಿದೆ. ಆದರೆ, ಈ ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತಕ್ಕೆ ದೊಡ್ಡ ಹಿನ್ನಡೆ ಆಗಿದೆ.
ಅಕ್ಷರ್ ಪಟೇಲ್ ತಲೆಗೆ ಗಾಯ
ಈ ಪಂದ್ಯದಲ್ಲಿ, ಟೀಮ್ ಇಂಡಿಯಾ ಆಟಗಾರ ಅಕ್ಷರ್ ಪಟೇಲ್ ಗಾಯಗೊಂಡ ಘಟನೆ ನಡೆದಿದೆ. ಅಕ್ಷರ್ ಕ್ಯಾಚ್ ಹಿಡಿಯಲು ಪ್ರಯತ್ನಿಸುವಾಗ ಸಮತೋಲನ ಕಳೆದುಕೊಂಡು, ಕ್ಯಾಚ್ ಕೈಬಿಟ್ಟು ಗಾಯಗೊಂಡರು. ಗಾಯದಿಂದಾಗಿ ಅವರು ಮೈದಾನದಿಂದ ಹೊರಹೋಗಬೇಕಾಯಿತು. ಓಮನ್ ಇನ್ನಿಂಗ್ಸ್‌ನ 15 ನೇ ಓವರ್‌ನಲ್ಲಿ ಈ ಘಟನೆ ಸಂಭವಿಸಿದೆ. ಶಿವಂ ದುಬೆ ಎಸೆದ ಎಸೆತವನ್ನು ಹಮ್ಮದ್ ಮಿರ್ಜಾ ಕಟ್ ಮಾಡಲು ಪ್ರಯತ್ನಿಸಿದರು, ಆದರೆ ಚೆಂಡು ಅವರ ಬ್ಯಾಟ್‌ನ ಅಂಚಿಗೆ ತಾಗಿ ಮಿಡ್-ಆಫ್ ಕಡೆಗೆ ಸಾಗಿತು. ಈ ಸಂದರ್ಭ ಅಕ್ಷರ್ ಪಟೇಲ್ ಓಡಿ ಚೆಂಡಿನ ಬಳಿ ತಲುಪುವಲ್ಲಿ ಯಶಸ್ವಿಯಾದರು. ಆದಾಗ್ಯೂ, ಚೆಂಡು ಅವರ ಕೈಯಿಂದ ಎರಡು ಬಾರಿ ಜಾರಿ ಕೊನೆಗೆ ಕೈಬಿಟ್ಟರು.
ಈ ಸಮಯದಲ್ಲಿ, ಅಕ್ಷರ್ ಅವರ ತಲೆ ನೆಲಕ್ಕೆ ಬಡಿದಿದೆ. ಅಕ್ಷರ್ ನೋವಿನಿಂದ ಬಳಲುತ್ತಿರುವುದನ್ನು ನೋಡಿದ ಫಿಸಿಯೋ ತಕ್ಷಣ ಮೈದಾನಕ್ಕೆ ಆಗಮಿಸಿ ನಂತರ ಅವರನ್ನು ಡಗೌಟ್‌ಗೆ ಕರೆದೊಯ್ದರು. ಅಕ್ಷರ್ ಮತ್ತೆ ಫೀಲ್ಡಿಂಗ್ ಮಾಡಲು ಮೈದಾನಕ್ಕೆ ಹಿಂತಿರುಗಲಿಲ್ಲ. ಇದು ಈಗ ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಅವರು ಸಂಪೂರ್ಣವಾಗಿ ಫಿಟ್ ಆಗುತ್ತಾರೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.
ಭಾರತ-ಪಾಕಿಸ್ತಾನ ಸೂಪರ್ 4 ಪಂದ್ಯ ಯಾವಾಗ?
ಭಾರತ ಹಾಗೂ ಪಾಕಿಸ್ತಾನ ನಡುವಣ ಸೂಪರ್ 4 ಪಂದ್ಯ ಸೆಪ್ಟೆಂಬರ್ 21 ರಂದು ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯಲಿದೆ. ಅಕ್ಷರ್ ತಂಡದ ಪ್ರಮುಖ ಆಟಗಾರ. ಇಲ್ಲಿಯವರೆಗೆ, ಅವರು ಮೂರು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದಿದ್ದಾರೆ. ಪಾಕಿಸ್ತಾನ ವಿರುದ್ಧ ಕೇವಲ 18 ರನ್ ಗಳಿಗೆ ಎರಡು ವಿಕೆಟ್ ಕಬಳಿಸಿದ್ದರು. ಓಮನ್ ವಿರುದ್ಧ ಬ್ಯಾಟಿಂಗ್ ನಲ್ಲಿ 26 ರನ್ ಗಳ ಕೊಡುಗೆ ಸಹ ನೀಡಿದ್ದಾರೆ. ಇದೀಗ ಪಾಕ್ ವಿರುದ್ಧದ ಮಹತ್ವದ ಪಂದ್ಯಕ್ಕೆ ಅಕ್ಷರ್ ಲಭ್ಯ ಇರುತ್ತಾರ ನೋಡಬೇಕಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




