Suryakumar Yadav: ಓಮನ್ ಪ್ಲೇಯರ್ಸ್ ಜೊತೆ ಸೂರ್ಯ ದೀರ್ಘ ಮಾತುಕತೆ: ನಮಗೆ NCA ನಲ್ಲಿ ಅವಕಾಶ ಕೊಡಿ ಎಂದ ಆಟಗಾರರು
India vs Oman, Asia Cup 2025: ಏಷ್ಯಾಕಪ್‌ನಲ್ಲಿ ಭಾರತ ತಂಡ ಓಮನ್ ತಂಡವನ್ನು ಸೋಲಿಸಿದ ನಂತರ, ಓಮನ್ ಆಟಗಾರರು ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರಿಂದ ಸಲಹೆಗಳನ್ನು ಪಡೆದರು ಮತ್ತು ಫೋಟೋಗೆ ಪೋಸ್ ನೀಡಿದರು. ಏತನ್ಮಧ್ಯೆ, ಓಮನ್ ನಾಯಕ ಜತಿಂದರ್ ಸಿಂಗ್ ತಮ್ಮ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಬಾಗಿಲು ತೆರೆಯುವಂತೆ ಬಿಸಿಸಿಐ ಅನ್ನು ಒತ್ತಾಯಿಸಿದ್ದಾರೆ.

ಬೆಂಗಳೂರು (ಸೆ. 20): ಏಷ್ಯಾಕಪ್ 2025 ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ ಆರಂಭವಾಗುವ ಮೊದಲು ಸಲ್ಮಾನ್ ಅಘಾ ಅವರೊಂದಿಗೆ ಕೈಕುಲುಕಲು ಭಾರತದ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ನಿರಾಕರಿಸಿದರು. ಪಂದ್ಯದ ನಂತರ ಕೂಡ, ಭಾರತೀಯ ತಂಡದ ಆಟಗಾರರು ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲಿಲ್ಲ. ಆದರೆ ಶುಕ್ರವಾರ ರಾತ್ರಿ ಭಾರತ ಮತ್ತು ಒಮಾನ್ ನಡುವಿನ ಪಂದ್ಯ ಕೊನೆಗೊಂಡಾಗ, ದೃಶ್ಯ ಬದಲಾಯಿತು. ಅಬುಧಾಬಿಯ ಶೇಖ್ ಜಾಯೆದ್ ಕ್ರೀಡಾಂಗಣದಲ್ಲಿ ಎರಡೂ ತಂಡಗಳು ಮುಖಾಮುಖಿಯಾದವು. ಸೂರ್ಯ ಇವರೊಂದಿಗೆ ನಯವಾಗಿ ಮಾತನಾಡುತ್ತ ಸಮಯ ಕಳೆದರು. ವಿಶೇಷ ಎಂದರೆ ಒಮಾನ್ ತಂಡದಲ್ಲಿ ಹಲವಾರು ಪಾಕಿಸ್ತಾನಿ ಆಟಗಾರರು ಕೂಡ ಇದ್ದಾರೆ.
ಸೂರ್ಯ ಅವರಿಂದ ಒಮಾನಿ ಆಟಗಾರರಿಗೆ ಸಲಹೆ
ಭಾರತ-ಓಮನ್ ಪಂದ್ಯದ ನಂತರ, ಒಂದು ಸುಂದರ ದೃಶ್ಯ ಕಂಡುಬಂತು. ಓಮನ್ ಕ್ರಿಕೆಟ್ ಆಟಗಾರರು ಭಾರತೀಯ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಸುತ್ತುವರೆದು, ಸಲಹೆಗಳನ್ನು ಪಡೆದುಕೊಂಡರು. ಅವರು ಮಾತನಾಡಿದ ನಂತರ ಎಲ್ಲರೂ ಭಾರತೀಯ ಟಿ20 ನಾಯಕನನ್ನು ಶ್ಲಾಘಿಸಿದರು. ನಂತರ ಅವರು ಅವರೊಂದಿಗೆ ಫೋಟೋ ತೆಗೆದುಕೊಳ್ಳಲು ಸಾಲುಗಟ್ಟಿ ನಿಂತರು. ಓಮನ್ ನಾಯಕ ಜತಿಂದರ್ ಸಿಂಗ್, “ನನಗೆ ನನ್ನ ತಂಡದ ಬಗ್ಗೆ ತುಂಬಾ ಹೆಮ್ಮೆಯಿದೆ. ನಾನು ಮೊದಲ ದಿನದಿಂದಲೂ ಇದನ್ನೇ ಹೇಳುತ್ತಿದ್ದೇನೆ” ಎಂದು ಹೇಳಿದರು.
ಸೂರ್ಯಕುಮಾರ್ ಯಾದವ್ ಬಂದು ಅವರೊಂದಿಗೆ ಮಾತನಾಡಿದ್ದಕ್ಕೆ ನನಗೆ ತುಂಬಾ ಸಂತೋಷವಾಗಿದೆ ಎಂದು ಓಮನ್ ನಾಯಕ ಜತಿಂದರ್ ಸಿಂಗ್ ಹೇಳಿದರು. “ಅವರು ಬಂದು ನಮ್ಮ ಆಟಗಾರರೊಂದಿಗೆ ಮಾತನಾಡಿದ್ದಕ್ಕೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಅವರು ಟಿ20ಯಲ್ಲಿ ಹೇಗೆ ಆಡಬೇಕೆಂದು ಹೇಳುತ್ತಿದ್ದರು” ಎಂದು ಹೇಳಿದರು.
Asia Cup Super 4 Schedule: ಏಷ್ಯಾಕಪ್‌ನ ಸೂಪರ್-4 ನಲ್ಲಿ ಭಾರತದ ಮೊದಲು ಎದುರಾಳಿ ಯಾರು?, ಪಂದ್ಯ ಯಾವಾಗ?
ಬಿಸಿಸಿಐಗೆ ಜತಿಂದರ್ ಮನವಿ
ಏತನ್ಮಧ್ಯೆ, ಓಮನ್ ನಾಯಕ ಜತಿಂದರ್ ಸಿಂಗ್ ತಮ್ಮ ತಂಡಕ್ಕೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (NCA) ಬಾಗಿಲು ತೆರೆಯುವಂತೆ ಬಿಸಿಸಿಐ ಅನ್ನು ಒತ್ತಾಯಿಸಿದ್ದಾರೆ. “ಭಾರತ ಮುಂದೆ ಬಂದು NCA ನಲ್ಲಿ ತರಬೇತಿ ಪಡೆಯಲು ನಮಗೆ ಅವಕಾಶ ನೀಡಿದರೆ ಅದು ಉತ್ತಮವಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ನಾವು ನಮ್ಮ ಕೌಶಲ್ಯ, ಮಾನಸಿಕ ಸಿದ್ಧತೆ ಮತ್ತು ಫಿಟ್ನೆಸ್ ಮೇಲೆ ಕೆಲಸ ಮಾಡಬಹುದು. ಕ್ಲಬ್ ಮತ್ತು ರಣಜಿ ತಂಡಗಳೊಂದಿಗೆ ನಾವು ಸಾಕಷ್ಟು T20 ಪಂದ್ಯಗಳನ್ನು ಆಡಬಹುದು. ಇದು ಖಂಡಿತವಾಗಿಯೂ ನಮಗೆ ಸಹಾಯ ಮಾಡುತ್ತದೆ ಮತ್ತು ನಾವು ಸುಧಾರಿಸಲು ಸಹಾಯ ಮಾಡುತ್ತದೆ” ಎಂದು ಜತಿಂದರ್ ಸಿಂಗ್ ಹೇಳಿದ್ದಾರೆ.
ಓಮನ್ ಆಟಗಾರರ ಪ್ರದರ್ಶನದ ಬಗ್ಗೆ ಸೂರ್ಯಕುಮಾರ್ ಹೇಳಿದ್ದೇನು?
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್ನಲ್ಲಿ ಸೂರ್ಯಕುಮಾರ್ ಯಾದವ್ ಓಮನ್ ತಂಡದ ಪ್ರದರ್ಶನವನ್ನು ಶ್ಲಾಘಿಸುತ್ತಾ, “ಒಟ್ಟಾರೆಯಾಗಿ, ಓಮನ್ ಅದ್ಭುತ ಕ್ರಿಕೆಟ್ ಆಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಕೋಚ್ ಸುಲು ಸರ್ (ಸುಲಕ್ಷಣ ಕುಲಕರ್ಣಿ) ತುಂಬಾ ಕಠಿಣವಾಗಿದ್ದಾರೆಂದು ನನಗೆ ತಿಳಿದಿತ್ತು” ಎಂದು ಹೇಳಿದರು. ಓಮನ್ ತಂಡದ ಬ್ಯಾಟಿಂಗ್ ನೋಡುವುದು ಅದ್ಭುತವಾಗಿತ್ತು ಮತ್ತು ಅದನ್ನು ನಾನು ಸಂಪೂರ್ಣವಾಗಿ ಆನಂದಿಸಿದೆ ಎಂದು ಸೂರ್ಯ ಹೇಳಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




