
ಭಾರತ ಮತ್ತು ಪಾಕಿಸ್ತಾನ (India- Pakistan) ನಡುವಿನ ಎಲ್ಲಾ ರೀತಿಯ ಸಂಬಂಧಕ್ಕೆ ಎಳ್ಳು ನೀರು ಬಿಟ್ಟು ವರ್ಷಗಳೇ ಕಳೆದಿವೆ. ಇದರ ಪರಿಣಾಮವಾಗಿ ಕ್ರಿಕೆಟ್ ಪಂದ್ಯದಲ್ಲೂ ಉಭಯ ತಂಡಗಳ ಆಟಗಾರರು ದೃಷ್ಟಿಯಿಟ್ಟು ನೋಡುವುದಿರಲಿ, ಕೈಕೂಡ ಕುಲುಕುತ್ತಿಲ್ಲ. ಇದೆಲ್ಲದರ ನಡುವೆ ಪಾಕಿಸ್ತಾನದ ಆಟಗಾರನೊಬ್ಬ ಟೀಂ ಇಂಡಿಯಾ ಜೆರ್ಸಿಯ (India cricket jersey) ಮೇಲೆ ತನ್ನ ಆಟೋಗ್ರಾಫ್ ಹಾಕಿದರೆ ಪರಿಸ್ಥಿತಿ ಏನಾಗಬೇಡ?. ಪಾಕಿಸ್ತಾನ ತಂಡದ ಮಾಜಿ ನಾಯಕ ಬಾಬರ್ ಆಝಂ (Babar Azam) ಟೀಂ ಇಂಡಿಯಾ ಜೆರ್ಸಿಯ ಮೇಲೆ ತನ್ನ ಆಟೋಗ್ರಾಫ್ ನೀಡಿರುವುದು ಭಾರತೀಯರನ್ನು ಕೆರಳಿಸಿದೆ. ಇದರಲ್ಲಿ ಬಾಬರ್ದ್ದು ಯಾವುದೇ ತಪ್ಪಿಲ್ಲದಿದ್ದರೂ, ಅಭಿಮಾನಿಗಳು ಮಾತ್ರ ಬಾಬರ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಬಾಬರ್ ಆಝಂ ಟೀಂ ಇಂಡಿಯಾ ಜೆರ್ಸಿಗೆ ಅವಮಾನ ಮಾಡಿದ್ದಾರೆ ಎಂತಲೂ ಕೆಲವರು ಆರೋಪಿಸಿದ್ದಾರೆ.
ವಾಸ್ತವವಾಗಿ ಪಾಕಿಸ್ತಾನದ ಕೆಲವು ಸ್ಟಾರ್ ಆಟಗಾರರು ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್ನಲ್ಲಿ ಆಡುತ್ತಿದ್ದಾರೆ. ಅವರಲ್ಲಿ ಪಾಕ್ ತಂಡದ ಮಾಜಿ ನಾಯಕ ಬಾಬರ್ ಕೂಡ ಒಬ್ಬರು. ಈ ಲೀಗ್ನಲ್ಲಿ ಸಿಡ್ನಿ ಪರ ಆಡುತ್ತಿರುವ ಬಾಬರ್ ಬಳಿ ಟೀಂ ಇಂಡಿಯಾ ಅಭಿಮಾನಿಯೊಬ್ಬರು ಆಟೋಗ್ರಾಫ್ ಕೇಳಿದ್ದಾರೆ. ಆ ಅಭಿಮಾನಿ ಭಾರತ ತಂಡದ ಜೆರ್ಸಿಯನ್ನು ಧರಿಸಿದ್ದು ಬಾಬರ್ ಆ ಜೆರ್ಸಿಯ ಮೇಲೆ ತನ್ನ ಆಟೋಗ್ರಾಫ್ ನೀಡಿದ್ದಾರೆ. ಮೇಲೆ ಹೇಳಿದಂತೆ ಇದರಲ್ಲಿ ಬಾಬರ್ ಅವರ ತಪ್ಪಿಲ್ಲ. ಏಕೆಂದರೆ ಅಭಿಮಾನಿ ಕೇಳಿದ ಕಡೆ ಬಾಬರ್ ತಮ್ಮ ಆಟೋಗ್ರಾಫ್ ನೀಡಿದ್ದಾರೆ.
ಆದಾಗ್ಯೂ ಟೀಂ ಇಂಡಿಯಾ ಜೆರ್ಸಿಯ ಮೇಲೆ ಬಾಬರ್ ಆಝಂ ನೀಡಿದ ಆಟೋಗ್ರಾಫ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಭಾರತೀಯ ಅಭಿಮಾನಿಗಳು ಇದನ್ನು ಭಾರತೀಯ ತಂಡದ ಜೆರ್ಸಿಗೆ ಮಾಡಿದ ಅವಮಾನ ಎಂದು ಕರೆದಿದ್ದಾರೆ. ಇದಕ್ಕಾಗಿ ಬಾಬರ್ ಆಝಂ ತೀವ್ರ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧಗಳು ಈಗಾಗಲೇ ಹದಗೆಟ್ಟಿವೆ. ಇದೆಲ್ಲದರ ನಡುವೆ ಜೆರ್ಸಿ ಮೇಲೆ ಬಾಬರ್ ಆಟೋಗ್ರಾಫ್ ನೀಡಿರುವುದು ಹೊಸ ವಿವಾದವನ್ನು ಹುಟ್ಟುಹಾಕಬಹುದು. ಇತ್ತ ಪಿಸಿಬಿ ಕೂಡ ಬಾಬರ್ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದು.
ಆಟೋಗ್ರಾಫ್ ವಿವಾದ ಒಂದೆಡೆಯಾದರೆ, ಇನ್ನೊಂದೆಡೆ ಬಾಬರ್ ತಮ್ಮ ಕಳಪೆ ಫಾರ್ಮ್ನಿಂದಾಗಿ ತಂಡದಿಂದಲೇ ಹೊರಬಿದ್ದಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಪಾಕಿಸ್ತಾನ ತಂಡದಲ್ಲಿ ಬಾಬರ್ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇತ್ತ ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಆಡುತ್ತಿರುವ ಬಾಬರ್ ಅಲ್ಲಿಯೂ ಇಲ್ಲಿಯವರೆಗೆ ನಿರಾಶಾದಾಯಕ ಪ್ರದರ್ಶನ ನೀಡಿದ್ದಾರೆ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಕೇವಲ 71 ರನ್ಗಳನ್ನು ಗಳಿಸಿದ್ದಾರೆ, ಸರಾಸರಿ 17.7. ಅವರ ಸ್ಟ್ರೈಕ್ ರೇಟ್ ಕೂಡ 110 ಆಗಿದೆ. ಅವರು ತಮ್ಮ ನಾಲ್ಕು ಇನ್ನಿಂಗ್ಸ್ಗಳಲ್ಲಿ ಮೂರರಲ್ಲಿ ಎರಡಂಕಿಯನ್ನು ತಲುಪಲು ವಿಫಲರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ