ಭಾರತಕ್ಕೆ ಒಂದು ರೂಲ್ಸ್, ಪಾಕಿಸ್ತಾನಕ್ಕೆ ಇನ್ನೊಂದು ರೂಲ್ಸ್​!

T20 World Cup 2026: ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ತಂಡದ ಆಟಗಾರ ಬಾಬರ್ ಆಝಂ ಅತ್ಯುತ್ತಮ ಕ್ಯಾಚ್ ಹಿಡಿದಿದ್ದಾರೆ. ಈ ಕ್ಯಾಚ್​ನ ಬೆನ್ನಲ್ಲೇ ಐಸಿಸಿ ನಿಯಮದ ಬಗ್ಗೆ ಚರ್ಚೆಗಳು ಶುರುವಾಗಿದೆ. ಏಕೆಂದರೆ ಟೀಮ್ ಇಂಡಿಯಾ ಆಟಗಾರ ಇದೇ ಮಾದರಿಯ ಕ್ಯಾಚ್ ಹಿಡಿದಾಗ ನಾಟೌಟ್ ನೀಡಲಾಗಿತ್ತು. ಆದರೆ ಇದೀಗ ಔಟ್ ಎಂದು ತೀರ್ಪು ನೀಡಿದ್ದಾರೆ.

ಭಾರತಕ್ಕೆ ಒಂದು ರೂಲ್ಸ್, ಪಾಕಿಸ್ತಾನಕ್ಕೆ ಇನ್ನೊಂದು ರೂಲ್ಸ್​!
Nehal - Babar

Updated on: Feb 07, 2026 | 2:16 PM

ಟಿ20 ವಿಶ್ವಕಪ್​ನ ಮೊದಲ ಪಂದ್ಯವೇ ವಿವಾದಕ್ಕೀಡಾಗಿದೆ. ವಿವಾದಕ್ಕೀಡಾಲು ಮುಖ್ಯ ಕಾರಣ ಐಸಿಸಿಯ ನಿಯಮ.ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಇತ್ತೀಚೆಗೆ ರಿಲೇ ಕ್ಯಾಚ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಿತ್ತು. ಈ ನಿಯಮದ ಬದಲಾವಣೆ ಪಾಕಿಸ್ತಾನ್ ತಂಡಕ್ಕೆ ಅನ್ವಯಿಸುವುದಿಲ್ಲವೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

ಏಕೆಂದರೆ ಟಿ20 ವಿಶ್ವಕಪ್​ನ ಮೊದಲ ಪಂದ್ಯದಲ್ಲಿ ನೆದರ್​ಲೆಂಡ್ಸ್ ವಿರುದ್ಧ ಬಾಬರ್ ಆಝಂ ಹಾಗೂ ಶಾಹೀನ್ ಶಾ ಅಫ್ರಿದಿ ಜೊತೆಗೂಡಿ ರಿಲೇ ಕ್ಯಾಚ್ ಹಿಡಿದಿದ್ದರು. ಬೌಂಡರಿ ಲೈನ್​ನಲ್ಲಿ ಅತ್ಯುತ್ತಮ ಕ್ಯಾಚ್ ಹಿಡಿದ ಬಾಬರ್ ನಿಯಂತ್ರಣ ತಪ್ಪಿ ಬೌಂಡರಿ ಗೆರೆ ದಾಟಿದ್ದರು. ಆದರೆ ಕ್ಷಣಾರ್ಧದಲ್ಲೇ ಬಾಬರ್ ಚೆಂಡನ್ನು ಶಾಹೀನ್ ಅಫ್ರಿದಿಯತ್ತ ಎಸೆದಿದ್ದರು.

ಬಾಬರ್ ಎಸೆದ ಚೆಂಡನ್ನು ಹಿಡಿಯುವಲ್ಲಿ ಶಾಹೀನ್ ಅಫ್ರಿದಿ ಯಶಸ್ವಿಯಾಗಿದ್ದರು. ಆದರೆ ಶಾಹೀನ್ ಚೆಂಡು ಹಿಡಿದಾಗ ಬಾಬರ್ ಆಝಂ ಮೈದಾನದ ಹೊರಗಿದ್ದರು ಎಂಬುದು ಇಲ್ಲಿ ಉಲ್ಲೇಖಾರ್ಹ.

ಐಸಿಸಿ ರಿಲೇ ಕ್ಯಾಚ್ ನಿಯಮ 19.5.2 ಪ್ರಕಾರ, ರಿಲೇ ಕ್ಯಾಚ್​ ಹಿಡಿದಾಗ ಬೌಂಡರಿ ಲೈನ್ ದಾಟಿದ ಫೀಲ್ಡರ್ ತನ್ನ ಸಹ ಆಟಗಾರನಿಗೆ ಚೆಂಡು ನೀಡಿದ ಬೆನ್ನಲ್ಲೇ ಮೈದಾನದ ಒಳಕ್ಕೆ ಬರಬೇಕು. ಅಂದರೆ ಬೌಂಡರಿ ಲೈನ್ ದಾಟುತ್ತಿದ್ದಂತೆ ಚೆಂಡನ್ನು ಮತ್ತೋರ್ವ ಫೀಲ್ಡರ್​ಗೆ ನೀಡಿದ್ದರೆ ಆತನು ಕ್ಯಾಚ್ ಹಿಡಿಯುವಷ್ಟರಲ್ಲಿ ಬೌಂಡರಿ ಲೈನ್ ದಾಟಿದ ಆಟಗಾರ ಮತ್ತೆ ಮೈದಾನದ ಒಳಗಿರಬೇಕು. ಅಂದರೆ ಮಾತ್ರ ಅದನ್ನು ಕ್ಯಾಚ್ ಔಟ್ ಎಂದು ಪರಿಗಣಿಸಲಾಗುತ್ತದೆ.

ಈ ನಿಯಮವು ಜೂನ್ ತಿಂಗಳಿಂದಲೇ ಜಾರಿಯಲ್ಲಿದೆ. ಹೀಗಾಗಿಯೇ ರೈಸಿಂಗ್ ಸ್ಟಾರ್ ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನ್ ಎ ವಿರುದ್ಧ ಭಾರತ ಎ ತಂಡದ ಆಟಗಾರ ನೆಹಾಲ್ ವಧೇರಾ ಹಿಡಿದ ಕ್ಯಾಚ್ ಅನ್ನು ಅಮಾನ್ಯ ಎಂದು ಪರಿಗಣಿಸಲಾಗಿತ್ತು.

ಈ ಪಂದ್ಯದಲ್ಲಿ ಸುಯಶ್ ಶರ್ಮಾ ಎಸೆದ 10ನೇ ಓವರ್​ನ ಮೊದಲ ಎಸೆತವನ್ನು ಮಾಝ್ ಸದಾಖತ್ ಲಾಂಗ್ ಆಫ್​​ನತ್ತ ಬಾರಿಸಿದ್ದರು. ಆದರೆ ಬೌಂಡರಿ ಲೈನ್​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ನೆಹಾಲ್ ವಧೇರಾ ಅದ್ಭುತವಾಗಿ ಚೆಂಡನ್ನು ಹಿಡಿದಿದ್ದರು.

ಕ್ಯಾಚ್ ಹಿಡಿದ ಬಳಿಕ ನಿಯಂತ್ರಣ ಕಳೆದುಕೊಂಡ ವಧೇರಾ ಬೌಂಡರಿ ಲೈನ್ ದಾಟಿದರು. ಅಷ್ಟರಲ್ಲಾಗಲೇ ಸಹ ಆಟಗಾರ ನಮನ್​ ಧೀರ್​ಗೆ ವಧೇರಾ ಚೆಂಡನ್ನು ನೀಡಿದ್ದರು. ಇತ್ತ ಬೌಂಡರಿ ಲೈನ್​ ಕ್ಯಾಚ್​ನೊಂದಿಗೆ ಮಾಝ್ ಸದಾಖತ್ ಪೆವಿಲಿಯನ್​ ಕಡೆ ಹೆಜ್ಜೆ ಹಾಕಿದ್ದರು.

ಆದರೆ ಕ್ಯಾಚ್ ಪರಿಶೀಲಿಸಿದ ಮೂರನೇ ಅಂಪೈರ್ ನಾಟೌಟ್ ಎಂದಿದ್ದಾರೆ. ಇತ್ತ ನೆಹಾಲ್ ವಧೇರಾ ತನ್ನ ಕಾಲು ಬೌಂಡರಿ ಲೈನ್​ಗೆ ತಾಗಿಲ್ಲ ಎಂಬ ವಾದವನ್ನು ಫೀಲ್ಡ್ ಅಂಪೈರ್ ಮುಂದಿಟ್ಟಿದ್ದರು. ಬೌಂಡರಿ ಲೈನ್ ಚೆಕ್ಕಿಂಗ್ ವೇಳೆಯೂ ವಧೇರಾ ಅವರ ಕಾಲು ಲೈನ್​ಗೆ ತಾಗಿಲ್ಲ ಎಂಬುದು ಸ್ಪಷ್ಟವಾಗಿತ್ತು.

ಇದಾಗ್ಯೂ ಮೂರನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಹೀಗಾಗಿ ಟೀಮ್ ಇಂಡಿಯಾ ಆಟಗಾರರು ಫೀಲ್ಡ್ ಅಂಪೈರ್ ಜೊತೆ ವಾಗ್ವಾದಕ್ಕಿಳಿದರು. ಈ ವೇಳೆ ಅಂಪೈರ್ ಭಾರತೀಯ ಆಟಗಾರರಿಗೆ ಹೊಸ ನಿಯಮದ ಬಗ್ಗೆ ಪಾಠ ಮಾಡಿದ್ದರು.

ಅಂದರೆ ರಿಲೇ ಕ್ಯಾಚ್​ ಹಿಡಿದಾಗ ಬೌಂಡರಿ ಲೈನ್ ದಾಟಿದ ಫೀಲ್ಡರ್ ತನ್ನ ಸಹ ಆಟಗಾರನಿಗೆ ಚೆಂಡು ನೀಡಿದ ಬೆನ್ನಲ್ಲೇ ಮೈದಾನದ ಒಳಕ್ಕೆ ಬರಬೇಕು. ಆದರೆ ನಮನ್​ಧೀರ್ ಕ್ಯಾಚ್ ಹಿಡಿಯುವಷ್ಟರಲ್ಲಿ ನೇಹಾಲ್ ವಧೇರಾ ಮೈದಾನಕ್ಕೆ ಹಿಂತಿರುಗಿರಲಿಲ್ಲ. ಹೀಗಾಗಿಯೇ ಥರ್ಡ್ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದ್ದರು.

ಇದೀಗ ಇಂತಹದ್ದೇ ಕ್ಯಾಚ್ ಬಾಬರ್ ಆಝಂ ಹಾಗೂ ಶಾಹೀನ್ ಶಾ ಅಫ್ರಿದಿ ಜೊತೆಗೂಡಿ ಹಿಡಿದಿದ್ದಾರೆ. ಇಲ್ಲಿ ಶಾಹೀನ್ ಅಫ್ರಿದಿ ಕ್ಯಾಚ್ ಪೂರ್ಣಗೊಳಿಸುವ ವೇಳೆ ಬಾಬರ್ ಮೈದಾನದಲ್ಲಿ ಇರಲಿಲ್ಲ. ಇದಾಗ್ಯೂ ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದಾರೆ.

ಈ ತೀರ್ಪಿನ ಬೆನ್ನಲ್ಲೇ ಭಾರತಕ್ಕೆ ಒಂದು ರೂಲ್ಸ್, ಪಾಕಿಸ್ತಾನಕ್ಕೆ ಇನ್ನೊಂದು ರೂಲ್ಸಾ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.

 

Published On - 2:09 pm, Sat, 7 February 26

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us