ಆಸ್ಟ್ರೇಲಿಯಾದಲ್ಲಿ ನಡೆದ ಬಿಗ್ ಬ್ಯಾಷ್ ಲೀಗ್ನ ಫೈನಲ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಸಿಡ್ನಿ ಥಂಡರ್ ಮತ್ತು ಹೋಬರ್ಟ್ ಹರಿಕೇನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಹೋಬರ್ಟ್ ಹರಿಕೇನ್ಸ್ ತಂಡ ಏಕಪಕ್ಷೀಯವಾಗಿ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದರೊಂದಿಗೆ 7 ವರ್ಷಗಳ ನಂತರ ಬಿಗ್ ಬ್ಯಾಷ್ ಲೀಗ್ನ ಫೈನಲ್ ತಲುಪಿದ್ದ ಹೋಬರ್ಟ್ ಹರಿಕೇನ್ಸ್ ತಂಡ ಚೊಚ್ಚಲ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಈ ಸೀಸನ್ ಹೋಬಾರ್ಟ್ ಹರಿಕೇನ್ಸ್ ತಂಡಕ್ಕೆ ಬಹಳ ಸ್ಮರಣೀಯವಾಗಿತ್ತು. ಲೀಗ್ ಹಂತದಿಂದ ನಾಕೌಟ್ ಪಂದ್ಯಗಳವರೆಗೆ ತಂಡ ಪ್ರಾಬಲ್ಯ ಮೆರೆದಿತ್ತು. ಲೀಗ್ ಹಂತದಲ್ಲಿ ಆಡಿದ 10 ಪಂದ್ಯಗಳಲ್ಲಿ 7ರಲ್ಲಿ ಗೆದ್ದು 2 ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿತ್ತು. ಇದರಿಂದಾಗಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಕಾಯ್ದುಕೊಂಡಿತ್ತು. ಆ ನಂತರ ನಡೆದಿದ್ದ ಕ್ವಾಲಿಫೈಯರ್ ಪಂದ್ಯದಲ್ಲಿ 12 ರನ್ಗಳಿಂದ ಸಿಡ್ನಿ ಸಿಕ್ಸರ್ ತಂಡವನ್ನು ಸೋಲಿಸಿ ಫೈನಲ್ಗೆ ಪ್ರವೇಶಿಸಿದ್ದ ಹೋಬರ್ಟ್ ಹರಿಕೇನ್ಸ್ ತಂಡ ಫೈನಲ್ ಪಂದ್ಯದಲ್ಲೂ ತನ್ನ ಫಾರ್ಮ್ ಅನ್ನು ಮುಂದುವರಿಸಿ ಚಾಂಪಿಯನ್ ಆಗಿ ಹೊರಹೊಮ್ಮಿತು.
UNBELIEVABLE! TASMANIA, WE DID IT!
WE ARE BBL|14 CHAMPIONS! pic.twitter.com/sYXblMwpsO
— Hobart Hurricanes (@HurricanesBBL) January 27, 2025
ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಹೊಬರ್ಟ್ ಹರಿಕೇನ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಸಿಡ್ನಿ ಥಂಡರ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ತಂಡದ ಪರ ಆರಂಭಿಕ ಆಟಗಾರ ಜೇಸನ್ ಸಂಘ 42 ಎಸೆತಗಳಲ್ಲಿ ಗರಿಷ್ಠ 67 ರನ್ ಗಳಿಸಿದರೆ, ನಾಯಕ ಡೇವಿಡ್ ವಾರ್ನರ್ ಕೂಡ 32 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ನೀಡುವಲ್ಲಿ ಯಶಸ್ವಿಯಾದರು. ಆದರೆ ಉಳಿದ ಬ್ಯಾಟ್ಸ್ಮನ್ಗಳು ವಿಶೇಷ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ, ಇದರಿಂದಾಗಿ ಒಂದು ಹಂತದಲ್ಲಿ 200 ಕ್ಕೂ ಹೆಚ್ಚು ರನ್ ಗಳಿಸುವ ಸೂಚನೆ ನೀಡಿದ್ದ ಸಿಡ್ನಿ ಥಂಡರ್ ಅಂತಿಮವಾಗಿ 182 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಈ ಇಬ್ಬರು ಆಟಗಾರರನ್ನು ಬಿಟ್ಟರೆ 30 ರನ್ಗಳ ಗಡಿ ಮುಟ್ಟಲು ಯಾರಿಂದಲೂ ಸಾಧ್ಯವಾಗಲಿಲ್ಲ.
Special pic.twitter.com/No59LLYQaJ
— Hobart Hurricanes (@HurricanesBBL) January 27, 2025
183 ರನ್ಗಳ ಗುರಿ ಬೆನ್ನತ್ತಿದ ಹೊಬರ್ಟ್ ಹರಿಕೇನ್ಸ್ ಸ್ಫೋಟಕ ಆರಂಭ ಪಡೆಯಿತು. ಓಪನರ್ ಮಿಚೆಲ್ ಓವನ್ ಸ್ಫೋಟಕ ಶತಕ ಸಿಡಿಸಿ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಹೋಬರ್ಟ್ ಹರಿಕೇನ್ಸ್ ಮೊದಲ 6 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ 98 ರನ್ ಗಳಿಸಿ ಪಂದ್ಯವನ್ನು ಏಕಪಕ್ಷೀಯವಾಗಿಸಿತು. ಆರಂಭದಿಂದಲೂ ಅಬ್ಬರದ ಬ್ಯಾಟಿಂಗ್ ಮಾಡಿದ ಮಿಚೆಲ್ ಓವನ್ 48 ಎಸೆತಗಳಲ್ಲಿ 257.14 ಸ್ಟ್ರೈಕ್ ರೇಟ್ನಲ್ಲಿ 108 ರನ್ ಕಲೆಹಾಕಿದರು. ಅವರ ಈ ಇನ್ನಿಂಗ್ಸ್ನಲ್ಲಿ 6 ಬೌಂಡರಿ ಮತ್ತು 11 ಸಿಕ್ಸರ್ಗಳು ಸೇರಿದ್ದವು. ಮಿಚೆಲ್ ಅವರ ಸ್ಫೋಟಕ ಬ್ಯಾಟಿಂಗ್ನ ನೆರವಿನಿಂದ ಹೋಬರ್ಟ್ ಹರಿಕೇನ್ಸ್ ತಂಡ 14.1 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ