ವೈಭವ್ ಸೂರ್ಯವಂಶಿ ಮತ್ತೆ ಮೈದಾನದಲ್ಲಿ ಕಾಣಿಸಿಕೊಳ್ಳುವುದು ಯಾವಾಗ?
Vaibhav Sooryavanshi: ಐಪಿಎಲ್ 2026 ರಲ್ಲಿ ಅದ್ಭುತ ಪ್ರದರ್ಶನ ನೀಡಿ ಆರೆಂಜ್ ಕ್ಯಾಪ್ ಸ್ಪರ್ಧಿಯಾಗಿರುವ ವೈಭವ್ ಸೂರ್ಯವಂಶಿ ಈಗ ಭಾರತ ಎ ತಂಡಕ್ಕೆ ಆಯ್ಕೆಯಾಗಿದ್ದಾರೆ. ಶ್ರೀಲಂಕಾದಲ್ಲಿ ನಡೆಯುವ ತ್ರಿಕೋನ ಸರಣಿಯಲ್ಲಿ ಅವರು ಆಡಲಿದ್ದಾರೆ. ಜೂನ್ 9 ರಿಂದ ಪ್ರಾರಂಭವಾಗುವ ಈ ಸರಣಿಯಲ್ಲಿ ವೈಭವ್ ಅವರನ್ನು ಮತ್ತೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ.

2026 ರ ಐಪಿಎಲ್ (IPL 2026) ಮುಗಿಯುವ ಹಂತಕ್ಕೆ ಬಂದಿದೆ. ಆರ್ಸಿಬಿ ಹಾಗೂ ಗುಜರಾತ್ ನಡುವಿನ ಫೈನಲ್ ಪಂದ್ಯದೊಂದಿಗೆ ಈ ಸೀಸನ್ಗೆ ತೆರೆ ಬೀಳಲಿದೆ. ಆ ಬಳಿಕ ಟೀಂ ಇಂಡಿಯಾ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಕಡೆ ಮುಖ ಮಾಡಲಿದೆ. ಆದಾಗ್ಯೂ ಐಪಿಎಲ್‌ನಲ್ಲಿ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆ ಸುರಿಸುವುದರ ಜೊತೆಗೆ ರನ್ಗಳ ಶಿಖರ ಕಟ್ಟಿದ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಅಭಿಮಾನಿಗಳ ಬಳಗ ಗಣನೀಯವಾಗಿ ಹೆಚ್ಚಾಗಿದೆ. ಅವರ ಆಟವನ್ನು ನೋಡುವ ಸಲುವಾಗಿಯೇ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರುತ್ತಿದ್ದರು. ಇದೀಗ ರಾಜಸ್ಥಾನ್ ತಂಡ ಐಪಿಎಲ್ನಿಂದ ಹೊರಬಿದ್ದಿರುವ ಕಾರಣದಿಂದಾಗಿ ವೈಭವ್ ಸೂರ್ಯವಂಶಿ ಮತ್ತೆ ಯಾವಾಗ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಹಲವರ ಪ್ರಶ್ನೆಯಾಗಿದೆ. ಅದಕ್ಕೆ ಉತ್ತರ ಇಲ್ಲಿದೆ.
ವೈಭವ್ ಮತ್ತೆ ಕಣಕ್ಕಿಳಿಯುವುದು ಯಾವಾಗ?
ವೈಭವ್ ಆಟವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿರುವ ಅಭಿಮಾನಿಗಳು ಇನ್ನು 10 ದಿನ ಕಾಯಬೇಕಾಗಿದೆ. ವಾಸ್ತವವಾಗಿ ಭಾರತ, ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ಎ ತಂಡಗಳ ನಡುವೆ ತ್ರಿಕೋನ ಸರಣಿ ನಡೆಯಲಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ಈ ಸರಣಿಗೆ ಭಾರತ ಎ ತಂಡವನ್ನು ಬಿಸಿಸಿಐ ಆಯ್ಕೆ ಮಾಡಿದೆ. ಈ ತಂಡದಲ್ಲಿ ವೈಭವ್ ಸೂರ್ಯವಂಶಿ ಕೂಡ ಸ್ಥಾನ ಪಡೆದಿದ್ದಾರೆ. ಹೀಗಾಗಿ ಆ ಸರಣಿಯಲ್ಲಿ ವೈಭವ್ ಆಡುವುದನ್ನು ನಾವು ಕಾಣಬಹುದು.
ತ್ರಿಕೋನ ಸರಣಿ
ಬಿಸಿಸಿಐ, ತಿಲಕ್ ವರ್ಮಾ ನೇತೃತ್ವದಲ್ಲಿ ಭಾರತ ಎ ತಂಡವನ್ನು ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸುತ್ತಿದೆ. ಈ ಪ್ರವಾಸದಲ್ಲಿ, ಶ್ರೀಲಂಕಾ ಎ ಮತ್ತು ಅಫ್ಘಾನಿಸ್ತಾನ ಎ ಜೊತೆ ತ್ರಿಕೋನ ಏಕದಿನ ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತದ ಮೊದಲ ಪಂದ್ಯ ಜೂನ್ 9 ರಂದು ನಡೆಯಲಿದೆ. ಅದರ ನಂತರ, ಜೂನ್ 11 ರಂದು ಅಫ್ಘಾನಿಸ್ತಾನ ತಂಡವನ್ನು ಎದುರಿಸಲಿದೆ. ಆ ಬಳಿಕ ಜೂನ್ 15 ರಂದು ಶ್ರೀಲಂಕಾ ಎ ವಿರುದ್ಧ ಮತ್ತು ಜೂನ್ 17 ರಂದು ಅಫ್ಘಾನಿಸ್ತಾನ ಎ ವಿರುದ್ಧ ಪಂದ್ಯವನ್ನಾಡಲಿದೆ. ಅದರ ನಂತರ, ಜೂನ್ 21 ರಂದು ಫೈನಲ್ ಪಂದ್ಯ ನಡೆಯಲಿದೆ.
ವೈಭವ್ ಸೂರ್ಯವಂಶಿ ಮತ್ತು ಪ್ರಿಯಾಂಶ್ ಆರ್ಯ ಶ್ರೀಲಂಕಾ ಪ್ರವಾಸದಲ್ಲಿ ಭಾರತದ ಪರ ಇನ್ನಿಂಗ್ಸ್ ಆರಂಭಿಸುವುದು ಖಚಿತವಾಗಿದೆ. ಈ ಇಬ್ಬರೂ ಈ ಹಿಂದೆ ಏಷ್ಯಾಕಪ್ ರೈಸಿಂಗ್ ಸ್ಟಾರ್ ಟೂರ್ನಮೆಂಟ್‌ನಲ್ಲಿ ಭಾರತ ಎ ಪರ ಆರಂಭಿಕರಾಗಿ ಆಡಿದ್ದರು. ವೈಭವ್ ಸೂರ್ಯವಂಶಿ ತಮ್ಮ ಆಕ್ರಮಣಕಾರಿ ಆಟದ ಮೂಲಕವೂ ಗಮನ ಸೆಳೆದಿದ್ದಾರೆ. ಈ ಕಾರಣದಿಂದಾಗಿ, ಈ ಸ್ಫೋಟಕ ಜೋಡಿಯ ಆಟವನ್ನು ನೋಡುವ ಕುತೂಹಲ ಹೆಚ್ಚಾಗಿದೆ.
IPL 2026: ‘ನಿನ್ನ ವಯಸ್ಸಲ್ಲಿ ನಮಗೆ..’; ವೈಭವ್ ಆಟವನ್ನು ಕೊಂಡಾಡಿದ ಅಮಿತಾಬ್ ಬಚ್ಚನ್
ಐಪಿಎಲ್‌ನಲ್ಲಿ ವೈಭವ್ ಪ್ರದರ್ಶನ
ವೈಭವ್ ಸೂರ್ಯವಂಶಿ 2026 ರ ಐಪಿಎಲ್ ಪಂದ್ಯಾವಳಿಯಲ್ಲಿ 16 ಪಂದ್ಯಗಳನ್ನು ಆಡಿದ್ದು 48.50 ರ ಸರಾಸರಿಯಲ್ಲಿ 776 ರನ್ ಗಳಿಸಿದ್ದಾರೆ. ಈ ಮೂಲಕ ವೈಭವ್ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಅನ್‌ಕ್ಯಾಪ್ಡ್ ಆಟಗಾರ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ. ಇದರ ಫಲವಾಗಿ ಆರೆಂಜ್ ಕ್ಯಾಪ್ ಕೂಡ ವೈಭವ್ ಬಳಿ ಇದೆ. ಇದೀಗ ಶುಭಮನ್ ಗಿಲ್ ಮತ್ತು ಸಾಯಿ ಸುದರ್ಶನ್ ಫೈನಲ್ ಪಂದ್ಯದಲ್ಲಿ ರನ್ ಗಳಿಸಲು ವಿಫಲವಾದರೆ, ವೈಭವ್ ಸೂರ್ಯವಂಶಿ ಆರೆಂಜ್ ಕ್ಯಾಪ್ ವಿಜೇತರಾಗುತ್ತಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





