2025 ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ಗೆದ್ದಿರುವ ಭಾರತ ತಂಡಕ್ಕೆ ಬಿಸಿಸಿಐ (BCCI) ಭರ್ಜರಿ ಬಹುಮಾನ ಘೋಷಿಸಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ತನ್ನ ಚಾಂಪಿಯನ್ ತಂಡಕ್ಕೆ 58 ಕೋಟಿ ರೂಪಾಯಿ ಬಹುಮಾನ ನೀಡಿದೆ. ಈ ಬಹುಮಾನದ ಮೊತ್ತದಲ್ಲಿ ರೋಹಿತ್-ವಿರಾಟ್‌ರಂತಹ ಅನುಭವಿ ಆಟಗಾರರಿಗೆ ಎಷ್ಟು ಹಣ ಸಿಗುತ್ತದೆ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್‌ಗೆ ಎಷ್ಟು ಹಣ ಸಿಗುತ್ತದೆ? ಇವರಲ್ಲದೆ ತಂಡದ ಗೆಲುವಿಗೆ ಕಾರಣರಾದ ಇತರರಿಗೆ ಸಿಗುವ ಹಣವೆಷ್ಟು? ಬಿಸಿಸಿಐ ಬಹುಮಾನ ಮಾತ್ರವಲ್ಲದೆ, ಐಸಿಸಿಯಿಂದ ಬರುವವ 20 ಕೋಟಿ ರೂ.ಗಳ ಹಂಚಿಕೆ ಹೇಗೆ ಆಗುತ್ತದೆ ಎಂಬುದರ ಪೂರ್ಣ ವಿವರ ಇಲ್ಲಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ 58 ಕೋಟಿ ರೂಪಾಯಿಗಳಲ್ಲಿ, 15 ಸದಸ್ಯರ ತಂಡದ ಪ್ರತಿಯೊಬ್ಬ ಆಟಗಾರನಿಗೆ ತಲಾ 3 ಕೋಟಿ ರೂಪಾಯಿ ಸಿಗಲಿದೆ. ಇದಲ್ಲದೆ, ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಹುಮಾನದ ಹಣವನ್ನು (2.24 ಮಿಲಿಯನ್ ಯುಎಸ್ ಡಾಲರ್ ಅಂದರೆ 20 ಕೋಟಿ ರೂಪಾಯಿಗಳು) ಟೀಮ್ ಇಂಡಿಯಾ ಆಟಗಾರರಿಗೆ ಮಾತ್ರ ವಿತರಿಸಲು ಎಂದು ಬಿಸಿಸಿಐ ನಿರ್ಧರಿಸಿದೆ. ಇದರರ್ಥ ಮುಖ್ಯ ತರಬೇತುದಾರ ಮತ್ತು ಸಹಾಯಕ ಸಿಬ್ಬಂದಿಗೆ ಈ ಮೊತ್ತದಲ್ಲಿ ಯಾವುದೇ ಪಾಲು ಇರುವುದಿಲ್ಲ.
ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಕೂಡ ಆಟಗಾರರಿಗೆ ಸಮಾನಾದ ಮೊತ್ತ ಅಂದರೆ 3 ಕೋಟಿ ರೂ., ಸಿಗಲಿದೆ. ಸಹಾಯಕ ಸಿಬ್ಬಂದಿಗೆ ತಲಾ 50 ಲಕ್ಷ ರೂ. ಸಿಕ್ಕರೆ, ತಂಡದ ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಅವರಿಗೆ 30 ಲಕ್ಷ ರೂ. ಹಣ ಸಿಗಲಿದೆ. ಹಾಗೆಯೇ ಆಯ್ಕೆ ಸಮಿತಿಯ ಇತರ ನಾಲ್ವರು ಸದಸ್ಯರಿಗೆ ತಲಾ 25 ಲಕ್ಷ ರೂ. ನೀಡಲಾಗುವುದು. ದುಬೈನಲ್ಲಿ ಟೀಂ ಇಂಡಿಯಾ ಜೊತೆಗಿದ್ದ ಬಿಸಿಸಿಐ ಸಿಬ್ಬಂದಿಗೂ ತಲಾ 25 ಲಕ್ಷ ರೂ. ಸಿಗಲಿದೆ.
ಭಾರತದ ವಿರುದ್ಧ ಜಿದ್ದಿಗೆ ಬಿದ್ದು ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ್ದ ಪಾಕಿಸ್ತಾನಕ್ಕೆ 2383 ಕೋಟಿ ನಷ್ಟ..!
ಕಳೆದ ವರ್ಷ ಭಾರತ ತಂಡ 17 ವರ್ಷಗಳ ನಂತರ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ಆ ಸಮಯದಲ್ಲಿಯೂ ಸಹ, ಬಿಸಿಸಿಐ ಟೀಂ ಇಂಡಿಯಾ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭರ್ಜರಿ ಬಹುಮಾನ ನೀಡಿತ್ತು. ರೋಹಿತ್ ಶರ್ಮಾ ನಾಯಕತ್ವದ ತಂಡಕ್ಕೆ ಮಂಡಳಿಯು 125 ಕೋಟಿ ರೂಪಾಯಿ ಬಹುಮಾನವನ್ನು ಘೋಷಿಸಿತ್ತು. ಆ ಬಹುಮಾನವನ್ನು ಎಲ್ಲಾ ಆಟಗಾರರು, ಆಯ್ಕೆದಾರರು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ವಿತರಿಸಲಾಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ