ಭಾರತದ ವಿರುದ್ಧ ಜಿದ್ದಿಗೆ ಬಿದ್ದು ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ್ದ ಪಾಕಿಸ್ತಾನಕ್ಕೆ 2383 ಕೋಟಿ ನಷ್ಟ..!
Pakistan Cricket's Massive Champions Trophy Loss: 2025ರ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿದ ಪಾಕಿಸ್ತಾನಕ್ಕೆ ಭಾರಿ ಆರ್ಥಿಕ ಹೊಡೆತ ಬಿದ್ದಿದೆ. ದಿ ಟೆಲಿಗ್ರಾಫ್ ವರದಿಯ ಪ್ರಕಾರ, ಪಿಸಿಬಿ ಸುಮಾರು 85 ಮಿಲಿಯನ್ ಡಾಲರ್ ನಷ್ಟ ಅನುಭವಿಸಿದೆ. ಮೂಲಸೌಕರ್ಯ ಅಭಿವೃದ್ಧಿ ಮತ್ತು ಸಿದ್ಧತೆಗಳಿಗೆ ಭಾರಿ ಹಣ ಖರ್ಚಾಗಿದೆ. ಆದರೆ ಈ ಟೂರ್ನಿ ಆಯೋಜನೆಯಿಂದ ಪಾಕ್ ತಂಡಕ್ಕೆ ಸಿಕ್ಕ ಆದಾಯದಲ್ಲಿ ಭಾರಿ ಕುಸಿತ ಕಂಡುಬಂದಿದೆ.

ಹಲವು ವರ್ಷಗಳ ನಂತರ ಐಸಿಸಿ ಟೂರ್ನಿಯೊಂದನ್ನು ಆಯೋಜಿಸುವ ಹಕ್ಕು ಪಡೆದು, 2025 ರ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯವಹಿಸಿದ್ದ ಪಾಕಿಸ್ತಾನಕ್ಕೆ ಸಾವಿರಾರು ಕೋಟಿಗಳಷ್ಟು ನಷ್ಟವುಂಟಾಗಿದೆ ಎಂದು ವರದಿಯಾಗಿದೆ. ಚಾಂಪಿಯನ್ಸ್ ಟ್ರೋಫಿಯ ಆಯೋಜಕತ್ವದಿಂದ ಭರ್ಜರಿ ಆದಾಯ ಬರುವ ನಿರೀಕ್ಷೆಯಲ್ಲಿದ್ದ ಪಿಸಿಬಿಗೆ ಬರ ಸಿಡಿಲು ಬಡಿದಂತ್ತಾಗಿದೆ. ಭಾರತದೊಂದಿಗೆ ಜಿದ್ದಿಗೆ ಬಿದ್ದು ನಾನಾ ಷರತ್ತುಗಳೊಂದಿಗೆ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸಿದ್ದ ಪಾಕಿಸ್ತಾನ ಮೊದಲ ಸುತ್ತಿನಲ್ಲಿಯೇ ಪಂದ್ಯಾವಳಿಯಿಂದ ಹೊರಬಿತ್ತು. ಇದೀಗ ಈ ಪಂದ್ಯಾವಳಿಯಿಂದಾಗಿ ಪಾಕಿಸ್ತಾನದ ದೇಶೀಯ ಆಟಗಾರರ ಸಂಬಳವೂ ಕಡಿಮೆಯಾಗಿದೆ. ವರದಿಯ ಪ್ರಕಾರ, ಪಂದ್ಯಾವಳಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು 2383 ಕೋಟಿ ರೂ. ನಷ್ಟವನ್ನು ಅನುಭವಿಸಿದೆ ಎಂದು ಹೇಳಲಾಗುತ್ತಿದೆ.
ಪಿಸಿಬಿಗೆ ತುಂಬಲಾರದ ನಷ್ಟ
ದಿ ಟೆಲಿಗ್ರಾಫ್ ವರದಿಯ ಪ್ರಕಾರ, ರಾವಲ್ಪಿಂಡಿ, ಲಾಹೋರ್ ಮತ್ತು ಕರಾಚಿಯಲ್ಲಿರುವ ಮೂರು ಕ್ರೀಡಾಂಗಣಗಳನ್ನು ನವೀಕರಿಸಲು ಪಿಸಿಬಿ 18 ಬಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು (ಸುಮಾರು 58 ಮಿಲಿಯನ್ ಡಾಲರ್) ಖರ್ಚು ಮಾಡಿದೆ. ಇದು ಅದರ ಬಜೆಟ್‌ಗಿಂತ 50 ಪ್ರತಿಶತ ಹೆಚ್ಚಾಗಿದೆ. ಇದಲ್ಲದೆ, ಚಾಂಪಿಯನ್ಸ್ ಟ್ರೋಫಿಯ ಸಿದ್ಧತೆಗಳಿಗಾಗಿ 40 ಮಿಲಿಯನ್ ಡಾಲರ್‌ಗಳನ್ನು ಖರ್ಚು ಮಾಡಿದೆ. ಆದಾಗ್ಯೂ, ಹೋಸ್ಟಿಂಗ್ ಶುಲ್ಕಗಳು, ಟಿಕೆಟ್ ಮಾರಾಟ ಮತ್ತು ಪ್ರಾಯೋಜಕತ್ವಗಳಿಂದ ಪಿಸಿಬಿಗೆ ಕೇವಲ 6 ಮಿಲಿಯನ್ ಡಾಲರ್ ಆದಾಯ ಹರಿದುಬಂದಿದೆ. ಇದರರ್ಥ ಪಿಸಿಬಿ ಸುಮಾರು 85 ಮಿಲಿಯನ್ ಡಾಲರ್ನಷ್ಟು ನಷ್ಟವನ್ನು ಅನುಭವಿಸಿದೆ. ಇದು ಪಾಕಿಸ್ತಾನಿ ಕರೆನ್ಸಿಯಲ್ಲಿ 2383 ಕೋಟಿ ರೂ.ಗಳಿಗೆ ಸಮಾನವಾಗಿದೆ.
ಇದಲ್ಲದೆ, ಮೊಹಮ್ಮದ್ ರಿಜ್ವಾನ್ ನೇತೃತ್ವದ ಪಾಕ್ ತಂಡವು ತವರಿನಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿತ್ತು. ಇದರ ಹೊರತಾಗಿ ರಾವಲ್ಪಿಂಡಿಯಲ್ಲಿ ಬಾಂಗ್ಲಾದೇಶ ವಿರುದ್ಧ ನಡೆಯಬೇಕಿದ್ದ ಮತ್ತೊಂದು ಪಂದ್ಯ ಮಳೆಯಿಂದಾಗಿ ಟಾಸ್ ನಡೆಯದೆ ರದ್ದಾಗಿತ್ತು. ಹಾಗೆಯೇ ಪಾಕಿಸ್ತಾನದಲ್ಲಿ ನಡೆಯಬೇಕಿದ್ದ ಉಳಿದ ಎಂಟು ಪಂದ್ಯಗಳಲ್ಲಿ ಎರಡು ಪಂದ್ಯಗಳು ಮಳೆಯಿಂದಾಗಿ ರದ್ದಾಗಿದ್ದವು.
ಆಟಗಾರರ ಸಂಬಳಕ್ಕೆ ಕತ್ತರಿ
ಚಾಂಪಿಯನ್ಸ್ ಟ್ರೋಫಿಯಿಂದ ನಷ್ಟದ ಸುಳಿಗೆ ಸಿಲುಕಿರುವ ಪಿಸಿಬಿ, ಆಟಗಾರರ ಸಂಬಳಕ್ಕೆ ಕತ್ತರಿ ಹಾಕಿದೆ ಎಂದು ಟೆಲಿಗ್ರಾಫ್ ವರದಿ ಹೇಳಿದೆ. ರಾಷ್ಟ್ರೀಯ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಪಂದ್ಯ ಶುಲ್ಕವನ್ನು ಶೇಕಡಾ 90 ರಷ್ಟು ಕಡಿಮೆ ಮಾಡಲಾಗಿದ್ದು, ಮೀಸಲು ಆಟಗಾರರ ವೇತನವನ್ನು ಶೇಕಡಾ 87.5 ರಷ್ಟು ಕಡಿತಗೊಳಿಸಲಾಗಿದೆ. ಒಂದು ಕಾಲದಲ್ಲಿ ಪಂಚತಾರಾ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದ ಈ ಆಟಗಾರರನ್ನು ಈಗ ಬಜೆಟ್ ವಸತಿಗಳಲ್ಲಿ ಉಳಿಯುವಂತೆ ಸೂಚಿಸಲಾಗಿದೆ.
IND vs NZ: ಕಿವೀಸ್ ವಿರುದ್ಧ ಸೇಡು ತೀರಿಸಿಕೊಂಡ ರೋಹಿತ್ ಪಡೆ; ಭಾರತದ ಮಡಿಲಿಗೆ ಚಾಂಪಿಯನ್ಸ್ ಟ್ರೋಫಿ
ಪಿಸಿಬಿ ಇತ್ತೀಚೆಗೆ ಯಾವುದೇ ಅಧಿಕೃತ ಘೋಷಣೆಯಿಲ್ಲದೆ ಆಟಗಾರರ ಪಂದ್ಯ ಶುಲ್ಕವನ್ನು 40,000 ರೂ.ಗಳಿಂದ 10,000 ರೂ.ಗಳಿಗೆ ಇಳಿಸಿದೆ ಎಂದು ಪಾಕಿಸ್ತಾನಿ ಪತ್ರಿಕೆ ದಿ ಡಾನ್ ವರದಿ ಮಾಡಿತ್ತು. ಆದರೆ ಈ ವರದಿಯ ಬಳಿಕ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಈ ನಿರ್ಧಾರವನ್ನು ರದ್ದುಗೊಳಿಸಿ, ಈ ಬಗ್ಗೆ ಮರು ಪರಿಶೀಲನೆ ನಡೆಸುವಂತೆ ನಿರ್ದೇಶಿಸಿದ್ದರು. ಆಟಗಾರರಿಗೆ ನೀಡಲಾಗುವ ಮೊತ್ತವನ್ನು ಪಿಸಿಬಿ ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ, ಆದರೆ ಮೂಲಗಳ ಪ್ರಕಾರ, ಪ್ರತಿ ಪಂದ್ಯಕ್ಕೆ 30,000 ರೂಗಳನ್ನು ನಿಗದಿಪಡಿಸಲಾಗಿದೆ ಎಂದು ವರದಿಯಾಗಿದೆ. ಇದು ಕಳೆದ ವರ್ಷಕ್ಕಿಂತ 10,000 ರೂ. ಕಡಿಮೆಯಾಗಿದೆ. ಒಟ್ಟಾರೆಯಾಗಿ ಚಾಂಪಿಯನ್ಸ್ ಟ್ರೋಫಿ ಆಯೋಜನೆಯ ನಂತರ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸ್ಥಿತಿ ಹದಗೆಟ್ಟಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:17 pm, Mon, 17 March 25