IPL 2022: ಐಪಿಎಲ್ ಸೀಸನ್ 15 ಆರಂಭ ಯಾವಾಗ? ಸುಳಿವು ನೀಡಿದ ಬಿಸಿಸಿಐ

| Updated By: ಝಾಹಿರ್ ಯೂಸುಫ್

Updated on: Jan 22, 2022 | 10:32 PM

IPL 2022 Starting Date: ಪ್ರಸ್ತುತ ಮಾಹಿತಿ ಪ್ರಕಾರ ಮುಂಬೈನ ವಾಂಖೆಡೆ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆಯಿದೆ.

IPL 2022: ಐಪಿಎಲ್ ಸೀಸನ್ 15 ಆರಂಭ ಯಾವಾಗ? ಸುಳಿವು ನೀಡಿದ ಬಿಸಿಸಿಐ
IPL 2022
Follow us on

ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2022) ಆರಂಭಕ್ಕೆ ದಿನಾಂಕ ಫಿಕ್ಸ್​ ಮಾಡಲು ಮುಂದಾಗಿದೆ. ಆದರೆ ದಿನಾಂಕವನ್ನು ಫೈನಲ್ ಮಾಡುವಲ್ಲಿ ಗೊಂದಲ ಏರ್ಪಟ್ಟಿದೆ. ಏಕೆಂದರೆ ಕೆಲವು ಫ್ರಾಂಚೈಸಿ ಮಾಲೀಕರು ಮಾರ್ಚ್ 27 ರಿಂದ ಲೀಗ್ ಪ್ರಾರಂಭವಾಗಬೇಕೆಂದು ಬಯಸಿದ್ದಾರೆ. ಇನ್ನೂ ಕೆಲವು ತಂಡಗಳ ಮಾಲೀಕರು ಏಪ್ರಿಲ್ 2 ರಿಂದ ಪ್ರಾರಂಭಿಸಿದರೆ ಉತ್ತಮ ಎಂಬ ಅಭಿಪ್ರಾಯದಲ್ಲಿದ್ದಾರೆ. ಹೀಗಾಗಿ ಇದೀಗ ಬಿಸಿಸಿಐ ಮುಂದೆ ಮಾರ್ಚ್ 27 ಹಾಗೂ ಏಪ್ರಿಲ್ 2 ದಿನಾಂಕಗಳಿದ್ದು, ಅದರಂತೆ ಈ ಎರಡು ದಿನಾಂಕಗಳಲ್ಲಿ ಒಂದನ್ನು ಫೈನಲ್ ಮಾಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳಿಂದ ತಿಳಿದು ಬಂದಿದೆ.

“ಕೆಲವು ತಂಡದ ಮಾಲೀಕರು ಮಾರ್ಚ್ 27 ರಂದು ಪ್ರಾರಂಭಿಸಲು ಒಲವು ತೋರಿದ್ದಾರೆ. ಆದರೆ ಭಾರತವು ಮಾರ್ಚ್ 18 ರಂದು ಶ್ರೀಲಂಕಾ ವಿರುದ್ಧ ಲಕ್ನೋದಲ್ಲಿ ಕೊನೆಯ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಬೇಕಾಗಿದೆ. ಇದಾದ ಬಳಿಕ ಟೀಮ್ ಇಂಡಿಯಾ ಆಟಗಾರರಿಗೆ ವಿಶ್ರಾಂತಿ ನೀಡಬೇಕಾದ ಕಾರಣ ಏಪ್ರಿಲ್ 2ರಿಂದ ಲೀಗ್ ಆರಂಭವಾಗಬಹುದು ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇನ್ನು ಲಕ್ನೋ ಮತ್ತು ಅಹಮದಾಬಾದ್‌ನ ಎರಡು ಹೊಸ ತಂಡಗಳು ಸೇರಿದಂತೆ ಎಲ್ಲಾ 10 ಐಪಿಎಲ್ ಫ್ರಾಂಚೈಸಿ ಮಾಲೀಕರು ಈ ಬಾರಿಯ ಐಪಿಎಲ್​ ಅನ್ನು ಭಾರತದಲ್ಲೇ ನಡೆಸಬೇಕೆಂದು ಬಿಸಿಸಿಐಗೆ ತಿಳಿಸಿದೆ. ಹೀಗಾಗಿ ಕೊರೋನಾಂತಕದ ನಡುವೆ ಮುಂಬೈ ಮತ್ತು ಪುಣೆಯಲ್ಲಿ ಇಡೀ ಟೂರ್ನಿ ನಡೆಯುವ ಸಾಧ್ಯತೆಯಿದೆ. ಇನ್ನು ಎರಡನೇ ಆಯ್ಕೆಯಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಹಾಗೂ ದಕ್ಷಿಣ ಆಫ್ರಿಕಾವನ್ನು ಮುಂದಿಡಲಾಗಿದೆ. ಭಾರತದಲ್ಲಿ ಟೂರ್ನಿ ನಡೆಯದಿದ್ದರೆ ಯುಎಇ ಅಥವಾ ದಕ್ಷಿಣ ಆಫ್ರಿಕಾದಲ್ಲಿ ಆಯೋಜಿಸಬಹುದು.

ಪ್ರಸ್ತುತ ಮಾಹಿತಿ ಪ್ರಕಾರ ಮುಂಬೈನ ವಾಂಖೆಡೆ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆಯಿದೆ. ಅಗತ್ಯವಿದ್ದರೆ, ಮುಂಬೈನ ನೆರೆಹೊರೆಯಲ್ಲಿರುವ ಪುಣೆಯಲ್ಲಿ ಐಪಿಎಲ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಹೀಗಾಗಿ ಭಾರತದಲ್ಲಿ ಟೂರ್ನಿ ನಡೆದರೆ ಸಂಪೂರ್ಣ ಟೂರ್ನಿ ಮುಂಬೈನಲ್ಲೇ ಆಯೋಜನೆಗೊಳ್ಳಲಿದೆ.

ಇನ್ನು ಈ ಬಾರಿ ಮೆಗಾ ಹರಾಜಿಗಾಗಿ 1,200ಕ್ಕೂ ಹೆಚ್ಚು ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 896 ಭಾರತೀಯ ಮತ್ತು 318 ವಿದೇಶಿ ಆಟಗಾರರು ಸೇರಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಪರಿಶೀಲಿಸಿ ಬಿಸಿಸಿಐ ಅಂತಿಮ ಪಟ್ಟಿಯನ್ನು ಸಿದ್ಧಪಡಿಸುವ ಸಾಧ್ಯತೆಯಿದೆ. ಅದರಂತೆ ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಐಪಿಎಲ್ ಮೆಗಾ ಹರಾಜು ನಡೆಯಲಿದೆ.

ಇದನ್ನೂ ಓದಿ: ICC Mens ODI Team: ಐಸಿಸಿ ಏಕದಿನ ತಂಡ ಪ್ರಕಟ: ಟೀಮ್ ಇಂಡಿಯಾದ ಆಟಗಾರರಿಗಿಲ್ಲ ಸ್ಥಾನ

ಇದನ್ನೂ ಓದಿ: IPL 2022: ಹೊಸ ಎರಡು ತಂಡಗಳು ಆಯ್ಕೆ ಮಾಡಿದ 6 ಆಟಗಾರರು ಇವರೇ..!

 

 

 

 

Published On - 10:29 pm, Sat, 22 January 22