ಸದ್ಯ ಭಾರತೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಚರ್ಚೆಯಾಗುತ್ತಿರುವ ವಿಷಯ ಎಂದರೆ ವಿರಾಟ್ ಕೊಹ್ಲಿಯ (Virat Kohli) ಫಾರ್ಮ್. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೊಹ್ಲಿಯ ಮುಂದಿನ ಶತಕ ಯಾವಾಗ? ಈ ಪ್ರಶ್ನೆಗೆ ತೆರೆ ಬಿದ್ದಿದೆ. ಇದೀಗ ಟೀಮ್ ಇಂಡಿಯಾದಲ್ಲಿ ಅವರ ಸ್ಥಾನದ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಈಗಾಗಲೇ ಅನೇಕ ಮಾಜಿ ಆಟಗಾರರು ಕೊಹ್ಲಿ ಫಾರ್ಮ್ ಅನ್ನು ಟೀಕಿಸಿದ್ದಾರೆ. ಇನ್ನು ಕೆಲವರು ಕೊಹ್ಲಿಯನ್ನು ತಂಡದಿಂದ ಕೈಬಿಡುವಂತೆ ಸೂಚಿಸಿದ್ದಾರೆ. ಇತ್ತ ವಿರಾಟ್ ಕೊಹ್ಲಿ ಕೂಡ ರನ್ಗಳಿಸಲು ಪರದಾಡುತ್ತಿದ್ದಾರೆ. ಟೆಸ್ಟ್, ಏಕದಿನ ಮತ್ತು ಟಿ20 ಮೂರು ಮಾದರಿಗಳಲ್ಲಿ ಸ್ಥಿರವಾಗಿ ರನ್ ಗಳಿಸಲು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಶತಕ ಬಾರಿಸಿ ಎರಡು ವರ್ಷಗಳೇ ಕಳೆದಿವೆ. ಹೀಗಾಗಿಯೇ ಅವರನ್ನು ಟೀಮ್ ಇಂಡಿಯಾದಿಂದ ಕೈಬಿಡಲಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿದೆ. ಇವೆಲ್ಲದರ ನಡುವೆ ಇದೀಗ ಖುದ್ದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರಾಟ್ ಕೊಹ್ಲಿಯ ಬೆಂಬಲಕ್ಕೆ ನಿಂತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸೌರವ್ ಗಂಗೂಲಿ, ವಿರಾಟ್ ಕೊಹ್ಲಿ ಶೀಘ್ರದಲ್ಲೇ ತಮ್ಮ ಹಳೆಯ ಖದರ್ ತೋರಿಸಲಿದ್ದಾರೆ. ಹಿಂದಿನಂತೆ ಮತ್ತೆ ಅದೇ ರನ್ ಗಳಿಸುತ್ತಾರೆ ಎಂದು ಭರವಸೆ ಇದೆ. ನೀವು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ನೋಡುತ್ತೀರಿ. ಬ್ಯಾಟ್ಸ್‌ಮನ್ ಆಗಿ ಅವರು ಸಾಧಿಸಿದ ಸ್ಥಾನವನ್ನು ಗುಣಮಟ್ಟ ಮತ್ತು ಸಾಮರ್ಥ್ಯವಿಲ್ಲದೆ ಸಾಧಿಸಲಾಗುವುದಿಲ್ಲ. ಹೌದು, ಅವರು ಈಗ ಕಷ್ಟದ ಸಮಯವನ್ನು ಎದುರಿಸುತ್ತಿದ್ದಾರೆ ನಿಜ. ತಾನೂ ದೊಡ್ಡ ಆಟಗಾರನೆಂಬುದು ಅವರಿಗೂ ಗೊತ್ತು. ಹೀಗಾಗಿ ಕೊಹ್ಲಿ ಶೀಘ್ರದಲ್ಲೇ ಕಂಬ್ಯಾಕ್ ಮಾಡುತ್ತಾರೆ ಎಂಬ ಖಾತ್ರಿ ನನಗಿದೆ ಎಂದು ಸೌರವ್ ಗಂಗೂಲಿ ತಿಳಿಸಿದ್ದಾರೆ.
ಕೊಹ್ಲಿಗೆ ಅವರ ಲೆವೆಲ್ ಏನು ಎಂಬುದು ಗೊತ್ತಿದೆ. ಕೊಹ್ಲಿ ತಂಡದ ಪರ ಉತ್ತಮ ಪ್ರದರ್ಶನ ನೀಡಬೇಕೆಂದು ನಾನು ಬಯಸುತ್ತೇನೆ. ಆದರೆ ಅವರೇ ಕೆಟ್ಟ ಹಂತದಿಂದ ಹೊರಬರುವ ಮಾರ್ಗವನ್ನು ಕಂಡುಕೊಳ್ಳಬೇಕು ಮತ್ತು ಯಶಸ್ವಿಯಾಗಬೇಕು. ಅವರು 12 -13 ವರ್ಷಗಳಿಂದ ಟೀಮ್ ಇಂಡಿಯಾ ಪರ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಅದನ್ನು ಪುನರಾವರ್ತಿಸುವ ನಿರೀಕ್ಷೆಯಿದೆ ಎಂದು ಸೌರವ್ ಗಂಗೂಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಹ್ಲಿಯನ್ನು ಟೀಕಿಸುತ್ತಿರುವವರಿಗೆ ಬಗ್ಗೆ ಮಾತನಾಡಿದ ಗಂಗೂಲಿ, ಇದು ಕ್ರೀಡೆಯಲ್ಲಿ ಆಗಾಗ ಸಂಭವಿಸುತ್ತದೆ. ಇದು ಪ್ರತಿಯೊಬ್ಬ ಆಟಗಾರನಿಗೂ ಸಂಭವಿಸಬಹುದು. ವಿರಾಟ್ ಮಾತ್ರವಲ್ಲ, ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಮತ್ತು ನನ್ನ ವಿರುದ್ದ ಕೂಡ ಟೀಕೆಗಳು ಕೇಳಿ ಬಂದಿತ್ತು. ಆಟಗಾರನಾಗಿ ಯಾವಾಗಲೂ ಇದಕ್ಕೆಲ್ಲಾ ಸಿದ್ಧನಾಗಿರಬೇಕು. ಇದು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಕೊಹ್ಲಿ ತಮ್ಮ ಆಟದ ಮೇಲೆ ಮಾತ್ರ ಗಮನ ಹರಿಸಬೇಕು ಎಂದು ಗಂಗೂಲಿ ಸಲಹೆ ನೀಡಿದರು.
ಮಾಜಿ ಆಟಗಾರರ ಟೀಕೆಗಳ ನಡುವೆ ಇದೀಗ ಬಿಸಿಸಿಐ ಅಧ್ಯಕ್ಷ ಖುದ್ದು ಸೌರವ್ ಗಂಗೂಲಿ ಕೊಹ್ಲಿಗೆ ಬೆಂಬಲ ವ್ಯಕ್ತಪಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿಯ ಕಂಬ್ಯಾಕ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.