Updated on: Jul 14, 2022 | 11:08 AM
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ವಶಪಡಿಸಿಕೊಂಡ ಬಳಿಕ ಭಾರತ (India vs England) ಇದೀಗ ಏಕದಿನ ಸರಣಿ ಮೇಲೂ ಕಣ್ಣಿಟ್ಟಿದೆ. ಇಂದು ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ದ್ವಿತೀಯ ಪಂದ್ಯ ಆಯೋಜಿಸಲಾಗಿದ್ದು ಭಾರತ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇತ್ತ ಇಂಗ್ಲೆಂಡ್ಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ.
ಇಂದಿನ ಪಂದ್ಯದಲ್ಲೂ ವಿರಾಟ್ ಕೊಹ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಕೊಹ್ಲಿ ಹೊರಗುಳಿದರೆ ಮೂರನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಆಡುವುದು ಖಚಿತ.
ಬಹಳ ಸಮಯದ ನಂತರ ಶಿಖರ್ ಧವನ್ ಟೀಮ್ ಇಂಡಿಯಾಕ್ಕೆ ಕಮ್ ಬ್ಯಾಕ್ ಮಾಡಿದ್ದು ಮೊದಲ ಪಂದ್ಯದಲ್ಲಿ ರೋಹಿತ್ ಶರ್ಮಾ ಗೆ ಉತ್ತಮ ಸಾಥ್ ನೀಡಿ ಅಜೇಯ 31 ರನ್ ಗಳಿಸಿದ್ದರು. ಕಳೆದ ಕೆಲವು ಪಂದ್ಯಗಳಲ್ಲಿ ಲಯ ಕಳೆದುಕೊಂಡಿದ್ದ ರೋಹಿತ್, ಮೊದಲ ಹಣಾಹಣಿಯಲ್ಲಿ ಅಜೇಯ ಅರ್ಧಶತಕ ಗಳಿಸಿರುವುದು ಸಮಾಧಾನಕರ ಬೆಳವಣಿಗೆ.
ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಕೂಡ ಕಣಕ್ಕಿಳಿಯಲಿದ್ದಾರೆ. ಇತ್ತ ಬೂಮ್ರಾ, ಶಮಿ ಮತ್ತು ಪ್ರಸಿದ್ಧ ಕೃಷ್ಣ, ಚಹಲ್ ಅವರು ಸ್ಥಾನ ಉಳಿಸಿಕೊಳ್ಳುವುದು ಖಚಿತ.
ಲಾರ್ಡ್ಸ್ ಕ್ರೀಡಾಂಗಣದ ಪಿಚ್ ಮೊದಲಿನಿಂದಲೂ ಸ್ವಿಂಗ್ ಎಸೆತಗಳಿಗೆ ಹೆಚ್ಚು ನೆರವು ನೀಡುವ ಗುಣ ಹೊಂದಿದೆ. ಇಲ್ಲಿ 70 ಏಕದಿನ ಪಂದ್ಯಗಳು ನಡೆದಿವೆ. ಅದರಲ್ಲಿ ಇಲ್ಲಿ ದಾಖಲಾದ ಗರಿಷ್ಠ ಮೊತ್ತ 238 ರನ್. ಎರಡೂ ಇನಿಂಗ್ಸ್ಗಳಲ್ಲಿಯೂ ಬೌಲರ್ಗಳು ಹೆಚ್ಚು ಯಶಸ್ಸು ಕಂಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯವು ಭಾರತೀಯ ಕಾಲಮಾನದ ಪ್ರಕಾರ ಸಂಜೆ 5:30 ಕ್ಕೆ ಪ್ರಾರಂಭವಾಗಲಿದೆ. ಪಂದ್ಯದ ನೇರ ಪ್ರಸಾರವನ್ನು ಸೋನಿ ನೆಟ್ ವರ್ಕ್ ಚಾನೆಲ್ ನಲ್ಲಿ ನೋಡಬಹುದು. ಜೊತೆಗೆ ಹಿಂದಿಯಲ್ಲಿ ಸೋನಿ ಟೆನ್ 3 ನಲ್ಲಿ ವೀಕ್ಷಿಸಬಹುದು.