ಭಾರತದಲ್ಲಿ ಅಕ್ಟೋಬರ್-ನವೆಂಬರ್ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗಾಗಿ (World Cup 2023) ಬಿಸಿಸಿಐ (BCCI) ಭರ್ಜರಿ ತಯಾರಿಗಳನ್ನು ಆರಂಭಿಸಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಟೀಮ್ ಇಂಡಿಯಾ (Team India) ಏಕದಿನ ವಿಶ್ವಕಪ್ಗಾಗಿ 20 ಆಟಗಾರರನ್ನು ಶಾರ್ಟ್ ಲೀಸ್ಟ್ ಮಾಡಿರುವುದಾಗಿ ಬಿಸಿಸಿಐ ಸ್ಪಷ್ಟಪಡಿಸಿದೆ. ಇದಾಗ್ಯೂ ಪ್ರಸ್ತುತ ಆಯ್ಕೆಯಾಗಿರುವ ಎಲ್ಲಾ ಆಟಗಾರರು ಏಕದಿನ ವಿಶ್ವಕಪ್ನಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ ಈ ಪಟ್ಟಿಯಿಂದ 16 ಆಟಗಾರರನ್ನು ಆಯ್ಕೆ ಮಾಡಲಾಗುತ್ತದೆ.
ಈ ವರ್ಷ ಭಾರತ ತಂಡವು ಒಟ್ಟು 35 ಏಕದಿನ ಪಂದ್ಯಗಳನ್ನು ಆಡಲಿದ್ದು, ಈ ವೇಳೆ 20 ಆಟಗಾರರನ್ನು ಕಣಕ್ಕಿಳಿಸಿ ಪ್ರಯೋಗ ನಡೆಸಲಾಗುತ್ತದೆ. ಇದರಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಏಕದಿನ ವಿಶ್ವಕಪ್ ಟೀಮ್ ಇಂಡಿಯಾದಲ್ಲಿ ಅವಕಾಶ ದೊರೆಯಲಿದೆ. ಆ ಮೂಲಕ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಲು ಯೋಜನೆಗಳನ್ನು ರೂಪಿಸಲಾಗಿದೆ.
ಇನ್ನು ಈ 20 ಆಟಗಾರರ ಫಿಟ್ನೆಸ್ ಮೇಲೆ ಬಿಸಿಸಿಐ ವಿಶೇಷ ನಿಗಾವಹಿಸಲಿದೆ. ಭಾರತೀಯ ಆಟಗಾರರ ಫಿಟ್ನೆಸ್ ಅನ್ನು ಮೇಲ್ವಿಚಾರಣೆ ಮಾಡಲು ಐಪಿಎಲ್ ಫ್ರಾಂಚೈಸಿಗಳೊಂದಿಗೆ ಕೆಲಸ ಮಾಡಲು ಬಿಸಿಸಿಐ ಈಗಾಗಲೇ ಎನ್ಸಿಎಗೆ ಸೂಚಿಸಿದೆ. ಈ ಮೂಲಕ ಆಟಗಾರರ ಗಾಯದ ಸಮಸ್ಯೆಯನ್ನೂ ದೂರ ಮಾಡಲು ಸಹ ಪ್ಲ್ಯಾನ್ ರೂಪಿಸಲಾಗಿದೆ.
ಒಟ್ಟಿನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಗೆಲ್ಲಲು ಬಿಸಿಸಿಐ ಈಗಾಗಲೇ ತಯಾರಿಗಳನ್ನು ಆರಂಭಿಸಿದ್ದು, ಈ ಮೂಲಕ 9 ವರ್ಷಗಳ ಕಾಯುವಿಕೆಗೆ ಅಂತ್ಯವಾಡಲು ಯೋಜನೆಗಳನ್ನು ರೂಪಿಸುತ್ತಿದೆ. ಅಂದರೆ ಭಾರತ ತಂಡವು ಕೊನೆಯ ಬಾರಿ ಐಸಿಸಿ ಟ್ರೋಫಿ ಗೆದ್ದಿರುವುದು 2013ರಲ್ಲಿ. ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಟೀಮ್ ಇಂಡಿಯಾ ಯಾವುದೇ ಐಸಿಸಿ ಟೂರ್ನಿ ಗೆದ್ದಿಲ್ಲ. ಹೀಗಾಗಿಯೇ ಈ ಬಾರಿಯ ಏಕದಿನ ವಿಶ್ವಕಪ್ ಮೇಲೆ ಬಿಸಿಸಿಐ ಕಣ್ಣಿಟ್ಟಿದೆ.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ವಿಶೇಷ ಎಂದರೆ 2011 ರಲ್ಲಿ ಕೊನೆಯ ಬಾರಿ ಏಕದಿನ ವಿಶ್ವಕಪ್ಗೆ ಭಾರತ ಆತಿಥ್ಯವಹಿಸಿದ್ದ ವೇಳೆ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಇದೀಗ ಮತ್ತೊಮ್ಮೆ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಟೀಮ್ ಇಂಡಿಯಾ ಕೂಡ ಗುರುತಿಸಿಕೊಂಡಿದೆ. ಅದರಂತೆ 11 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೊಂದು ವಿಶ್ವಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.
Published On - 3:59 pm, Mon, 2 January 23