ಬೆಳಗಾವಿ ಹುಡುಗನ ಫೀಲ್ಡಿಂಗ್ಗೆ ಫಿದಾ ಆದ ಕ್ರಿಕೆಟ್ ದೇವರು; ಟ್ವೀಟ್ನಲ್ಲಿ ಹೇಳಿದ್ದೇನು ಗೊತ್ತಾ? ವಿಡಿಯೋ ನೋಡಿ
ಕರ್ನಾಟಕದ ಬೆಳಗಾವಿ ನಗರದ ನಿವಾಸಿ ಕಿರಣ್ ತರಳೇಕರ್ ಎಂಬ ಯುವಕ ಹಿಡಿದ ಅತ್ಯದ್ಭುತ ಕ್ಯಾಚ್ಗೆ ಕ್ರಿಕೆಟ್ ಗಣ್ಯರು ಫಿದಾ ಆಗಿದ್ದು, ಟ್ವೀಟ್ ಮಾಡುವ ಮೂಲಕ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಕ್ರಿಕೆಟ್ನಲ್ಲಿ ಒಬ್ಬ ಅಟಗಾರ ಪ್ರಸಿದ್ಧಿ ಗಳಿಸಲು ಹೆಚ್ಚು ಸಮಯ ಕಾಯುವ ಅವಶ್ಯಕತೆಯಿಲ್ಲ. ಆತ ಆಡುವ ಒಂದು ಇನ್ನಿಂಗ್ಸ್, ಅಥವಾ ಬೌಲಿಂಗ್ನಲ್ಲಿ ಮಾಡುವ ಮ್ಯಾಜಿಕ್, ಹಾಗೆಯೇ ಫೀಲ್ಡಿಂಗ್ ವೇಳೆ ತೊರುವ ಕರಾಮತ್ತಿನಿಂದ ಒಂದೇ ಒಂದು ರಾತ್ರಿಯಲ್ಲಿ ಇಡೀ ಕ್ರಿಕೆಟ್ ದುನಿಯಾದಲ್ಲೇ ಸದ್ದು ಮಾಡುತ್ತಾನೆ. ಅದು ಗಲ್ಲಿ ಕ್ರಿಕೆಟ್ ಆಗಿರಲಿ ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಆಗಿರಲಿ, ತನ್ನ ವಿಶೇಷ ಪ್ರದರ್ಶನದ ಮೂಲಕ ಒಬ್ಬ ಆಟಗಾರ ಎಷ್ಟು ಜನಕ್ಕೆ ತಲುಪಬಹುದು ಎಂಬುದಕ್ಕೆ ಕರ್ನಾಟಕದ ಬೆಳಗಾವಿ ನಗರದ ನಿವಾಸಿ ಕಿರಣ್ ತರಳೇಕರ್ ತಾಜಾ ಉದಾಹರಣೆಯಾಗಿದ್ದಾರೆ. ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯದ ವೇಳೆ ಕಿರಣ್ ಹಿಡಿದ ಅದೊಂದು ಅತ್ಯಧ್ಬುತ ಕ್ಯಾಚ್ ಇದೀಗ ಕ್ರಿಕೆಟ್ ದಿಗ್ಗಜರ ಮನಸೂರೆಗೊಂಡಿದ್ದು, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ (Sachin Tendulkar) ಸೇರಿದಂತೆ ಹಲವು ಕ್ರಿಕೆಟ್ ಆಟಗಾರರು ಕಿರಣ್ ಅವರ ಫೀಲ್ಡಿಂಗ್ಗೆ ಶಹಬಾಸ್ಗಿರಿ ನೀಡಿದ್ದಾರೆ.
ವಾಸ್ತವವಾಗಿ ಮೂರು ದಿನಗಳ ಹಿಂದೆ ಬೆಳಗಾವಿ ನಗರದ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ನಡೆದಿತ್ತು. ಈ ವೇಳೆ ಸಾಯಿರಾಜ್ ಹಾಗೂ ಎಸ್‌ಆರ್ ಎಸ್ ಹಿಂದೂಸ್ತಾನ್ ನಿಪ್ಪಾಣಿ ತಂಡದ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಎದುರಾಳಿ ತಂಡದ ಆಟಗಾರ ಬಾರಿಸಿದ ಚೆಂಡನ್ನು ಬೌಂಡರಿ ಗೆರೆ ಬಳಿ ಫೀಲ್ಡಿಂಗ್ ಮಾಡುತ್ತಿದ ಕಿರಣ್ ತರಳೇಕರ್ ಗಾಳಿಯಲ್ಲಿ ನೆಗೆದು ಹಿಡಿದರು. ಬಳಿಕ ಬೌಂಡರಿ ಲೈನ್ ದಾಟುವ ಮುನ್ನ ಕೈಯಲ್ಲಿದ್ದ ಚೆಂಡನ್ನು ಮೇಲಕ್ಕೆಸೆದರು. ಅದು ಬೌಂಡರಿ ಆಚೆಗೆ ಬೀಳುತ್ತಿರುವುದನ್ನು ಗಮನಿಸಿದ ಕಿರಣ್ ಮತ್ತೆ ಕ್ಷಣಾರ್ಧದಲ್ಲೇ ಗಾಳಿಯಲ್ಲಿ ಹಾರಿ ಚೆಂಡನ್ನು ಫುಟ್ಬಾಲ್ ರೀತಿ ಕಾಲಿನಿಂದ ಒದ್ದು ಗ್ರೌಂಡ್ ಒಳಕ್ಕೆ ಅಟ್ಟಿದರು. ಅಷ್ಟರಲ್ಲಿ ಬೌಂಡರಿ ಆಚೆಗೆ ಹೋಗಿ ಮತ್ತೆ ಒಳಗೆ ಬಂದ ಚೆಂಡನ್ನು ಇನ್ನೊಬ್ಬ ಆಟಗಾರ ಹಿಡಿಯುವಲ್ಲಿ ಯಶಸ್ವಿಯಾದರು.
ಇದೀಗ ಕಿರಣ್ ಮಾಡಿದ ಅದ್ಭುತ ಫೀಲ್ಡಿಂಗ್ನ ಈ ದೃಶ್ಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ಈ ವಿಡಿಯೋ ತುಣುಕನ್ನು ಟ್ವೀಟ್ ಮಾಡಿರುವ ಸಚಿನ್ ತೆಂಡೂಲ್ಕರ್, ‘ಫುಟ್ಬಾಲ್ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್‌ಗೆ ಕರೆತಂದಾಗ ಹೀಗೇ ಆಗುತ್ತದೆ’ ಎಂದು ಟ್ವೀಟ್ ಮಾಡಿದ್ದಾರೆ.
This is what happens when you bring a guy who also knows how to play football!! ⚽️ ? ? https://t.co/IaDb5EBUOg
— Sachin Tendulkar (@sachin_rt) February 12, 2023
ಹಾಗೆಯೇ ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಕೂಡ ಕನ್ನಡಿಗನ ಫೀಲ್ಡಿಂಗ್ಗೆ ಫಿದಾ ಆಗಿದ್ದು, ‘ಇದು ಸರ್ವಕಾಲಿಕ ಶ್ರೇಷ್ಠ ಕ್ಯಾಚ್’ ಎಂದು ಟ್ವೀಟ್ ಮಾಡಿದ್ದಾರೆ.
Surely the greatest catch of all time … ?? pic.twitter.com/ZJFp1rbZ3B
— Michael Vaughan (@MichaelVaughan) February 12, 2023
Absolutely outstanding ??? https://t.co/Im77ogdGQB
— Jimmy Neesham (@JimmyNeesh) February 12, 2023
ನ್ಯೂಜಿಲೆಂಡ್ ಆಟಗಾರ ಜಿಮ್ಮಿ ನಿಶಮ್ ಕೂಡ ಈ ವಿಡಿಯೋ ಹಾಕಿ ಟ್ವೀಟ್ ಮಾಡಿದ್ದು, ಈ ಕ್ಯಾಚ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Mon, 13 February 23