ಬಿಹಾರದಲ್ಲಿ ಕಿಶನ್ ದ್ವಿಶತಕದ ಸಂಭ್ರಮ; ‘ಮಗ ಪ್ರಬುದ್ಧನಾಗಿದ್ದಾನೆ’ ಎಂದ ಅಪ್ಪ, ಸಿಎಂ ನಿತೀಶ್ ಅಭಿನಂದನೆ

| Updated By: ಪೃಥ್ವಿಶಂಕರ

Updated on: Dec 11, 2022 | 11:36 AM

Ishaan Kishan: ಕಿಶನ್ ಆಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ತಂದೆ, ನನ್ನ ಮಗ ಚೆನ್ನಾಗಿ ಆಡುವುದನ್ನು ನೋಡಿದಾಗಲೆಲ್ಲ ನನಗೆ ಹೆಮ್ಮೆ ಅನಿಸುತ್ತದೆ. ಈಗ ಅವನು ತನ್ನ ಆಟದ ಬಗ್ಗೆ ಹೆಚ್ಚು ಗಂಭೀರವಾಗಿದ್ದಾನೆ. ಹಾಗೆಯೇ ತುಂಬ ಪ್ರಬುದ್ಧನಾಗಿದ್ದಾನೆ ಎಂದಿದ್ದಾರೆ.

ಬಿಹಾರದಲ್ಲಿ ಕಿಶನ್ ದ್ವಿಶತಕದ ಸಂಭ್ರಮ; ‘ಮಗ ಪ್ರಬುದ್ಧನಾಗಿದ್ದಾನೆ ಎಂದ ಅಪ್ಪ, ಸಿಎಂ ನಿತೀಶ್ ಅಭಿನಂದನೆ
Ishaan Kishan
Follow us on

ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಬಾಂಗ್ಲಾದೇಶವನ್ನು 227 ರನ್‌ಗಳಿಂದ ಸೋಲಿಸಿದ ಭಾರತ (India vs Bangladesh) ಮುಜುಗರದ ಸರಣಿ ಸೋಲಿನಿಂದ ಪಾರಾಗಿದೆ. ಈ ಪಂದ್ಯದ ಗೆಲುವಿನ ಹೀರೋ ಟೀಂ ಇಂಡಿಯಾದ ಯುವ ಬ್ಯಾಟರ್ ಇಶಾನ್ ಕಿಶನ್ (Ishan Kishan) ಅವರ ವೇಗದ ಬ್ಯಾಟಿಂಗ್‌. ಈ ಡ್ಯಾಶಿಂಗ್ ಬ್ಯಾಟ್ಸ್‌ಮನ್ ಬಾಂಗ್ಲಾದೇಶ ವಿರುದ್ಧ ಚಿತ್ತಗಾಂಗ್ ಮೈದಾನದಲ್ಲಿ ಕೇವಲ 131 ಎಸೆತಗಳಲ್ಲಿ ಬಿರುಸಿನ 210 ರನ್ ಬಾರಿಸುವ ಮೂಲಕ ವೇಗದ ದ್ವಿಶತಕ ಬಾರಿಸಿದ ವಿಶ್ವದಾಖಲೆ ನಿರ್ಮಿಸಿದರು. ಕೇವಲ ಒಂದೇ ಒಂದು ಪಂದ್ಯದಲ್ಲಿ ಹಲವು ವಿಶ್ವ ದಾಖಲೆಗಳನ್ನು ನಿರ್ಮಿಸಿದ ಕಿಶನ್​ಗೆ ಇಡೀ ಕ್ರಿಕೆಟ್​ ಜಗತ್ತೇ ತಲೆಬಾಗಿ ನಮಿಸಿದೆ. ಹಾಗೆಯೇ ಭಾರತದಲ್ಲೂ ಕಿಶನ್ ಆಟಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದ್ದು, ಅವರ ತವರು ನೆಲವಾದ ಪಾಟ್ನಾದಲ್ಲಿ ಸಂಭ್ರಮ ಮನೆ ಮಾಡಿದೆ. ಸ್ವತಃ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Chief Minister Nitish Kumar), ಕಿಶನ್ ಆಟಕ್ಕೆ ಮನಸೋತು ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.

ಇಶಾನ್ ಆಟಕ್ಕೆ ಫಿದಾ ಆಗಿರುವ ಸಿಎಂ ನಿತೀಶ್ ಕುಮಾರ್, ಕಿಶನ್ ಅವರ ಸಾಧನೆ ರಾಜ್ಯ ಸೇರಿದಂತೆ ಇಡೀ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಿದೆ. ಅವರ ಪ್ರದರ್ಶನದಿಂದ ಬಿಹಾರದ ಆಟಗಾರರಿಗೂ ಉತ್ತಮ ಆಟವಾಡಲು ಸ್ಫೂರ್ತಿ ಸಿಗಲಿದೆ ಎಂದಿದ್ದಾರೆ. ಅಲ್ಲದೆ ಕಿಶನ್​ಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿನಂದನಾ ಪತ್ರವನ್ನೂ ಸಹ ನೀಡಿದ್ದಾರೆ. ಇದೇ ವೇಳೆ ಇಶಾನ್ ಮನೆಯಲ್ಲಿಯೂ ಸಂತಸ ಮನೆ ಮಾಡಿದ್ದು, ಅವರ ತಾಯಿ ಸುಚಿತಾ ಸಿಂಗ್ ಮತ್ತು ತಂದೆ ಪ್ರಣವ್ ಕುಮಾರ್ ಪಾಂಡೆ ತಮ್ಮ ಮಗನ ಆಟಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ನನಗೆ ಹೆಮ್ಮೆ ಅನಿಸುತ್ತದೆ

ದೈನಿಕ್ ಭಾಸ್ಕರ್ ವರದಿ ಪ್ರಕಾರ, ಕಿಶನ್ ಆಟದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರ ತಂದೆ, ನನ್ನ ಮಗ ಚೆನ್ನಾಗಿ ಆಡುವುದನ್ನು ನೋಡಿದಾಗಲೆಲ್ಲ ನನಗೆ ಹೆಮ್ಮೆ ಅನಿಸುತ್ತದೆ. ಈಗ ಅವನು ತನ್ನ ಆಟದ ಬಗ್ಗೆ ಹೆಚ್ಚು ಗಂಭೀರವಾಗಿದ್ದಾನೆ. ಹಾಗೆಯೇ ತುಂಬ ಪ್ರಬುದ್ಧನಾಗಿದ್ದಾನೆ. ಇಡೀ ರಾಜ್ಯವೇ ಅವನಿಗೆ ಆಶೀರ್ವಾದ ಮಾಡುತ್ತಿದೆ ಎಂದಿದ್ದಾರೆ. ಹಾಗೆಯೇ ಕಿಶನ್ ತಾಯಿಯೂ ಕೂಡ ಮಗನ ಆಟದಿಂದ ಸಂತಸಗೊಂಡಿದ್ದು, ನನ್ನ ಮಗ ಇಂದು ಇತಿಹಾಸ ಸೃಷ್ಟಿಸಿದ್ದಾನೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಗಂಡು ಮಗುವಿಗೆ ತಂದೆಯಾದ ಮಯಾಂಕ್ ಅಗರ್ವಾಲ್; ಮಗನ ಮುದ್ದಾದ ಹೆಸರೇನು ಗೊತ್ತಾ?

ಅನೇಕ ದಾಖಲೆ ಸೃಷ್ಟಿಸಿದ ಕಿಶನ್

ಈ ದ್ವಿಶತಕದೊಂದಿಗೆ ಏಕದಿನ ಕ್ರಿಕೆಟ್​ನಲ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದ ಕಿಶನ್, ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿದ ಭಾರತದ 4ನೇ ಬ್ಯಾಟ್ಸ್​ಮನ್ ಎನಿಸಿಕೊಂಡರು. ಅಲ್ಲದೆ ವಿಶ್ವ ಕ್ರಿಕೆಟ್​ನಲ್ಲಿ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಒಬ್ಬ ದ್ವಿಶತಕ ಸಿಡಿಸಿದ್ದು ಇದೇ ಮೊದಲು. ತಮ್ಮ ಇನ್ನಿಂಗ್ಸ್‌ನಲ್ಲಿ 24 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಿತ 210 ರನ್‌ ಚಚ್ಚಿದ ಕಿಶನ್ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟರ್​ ಎನಿಸಿಕೊಂಡರು. ಅಲ್ಲದೆ ಕೇವಲ 126 ಎಸೆತಗಳಲ್ಲಿ ದ್ವಿಶತಕ ಸಿಡಿಸಿದ ಕಿಶನ್, ಈ ಹಿಂದೆ 138 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ಅತಿ ಕಡಿಮೆ ಎಸೆತಗಳಲ್ಲಿ ದ್ವಿಶತಕ ಪೂರ್ಣಗೊಳಿಸಿದ್ದ ಗೇಲ್ ದಾಖಲೆಯನ್ನು ಮುರಿದಿದ್ದಾರೆ.

ತಮ್ಮ ಏಕದಿನ ವೃತ್ತಿಜೀವನದ 9ನೇ ಇನ್ನಿಂಗ್ಸ್‌ನಲ್ಲಿ ಈ ದಾಖಲೆ ಮಾಡಿದ ಕಿಶನ್ ಅತ್ಯಂತ ಕಡಿಮೆ ಇನ್ನಿಂಗ್ಸ್​ಗಳಲ್ಲಿ ದ್ವಿಶತಕ ಸಿಡಿಸಿದ ಮೊದಲ ಆಟಗಾರ ಎನಿಸಿಕೊಂಡರು. ಇದಕ್ಕೂ ಮುನ್ನ ಪಾಕ್ ಕ್ರಿಕೆಟಿಗ ಫಖರ್ ಜಮಾನ್ ತಮ್ಮ 16ನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಸಿಡಿಸಿದ್ದರು. ಅದೇ ಸಮಯದಲ್ಲಿ, ಸಚಿನ್ ತೆಂಡೂಲ್ಕರ್ 431 ನೇ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಗಳಿಸಿದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:33 am, Sun, 11 December 22