ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಸಖತ್ ಸದ್ದು ಮಾಡುತ್ತಿದೆ. ಆದರೆ ಅದು ಆಟದಿಂದಲ್ಲ. ಬದಲಾಗಿ ಆಟಗಾರರ ಸಂಭಾವನೆ ಪಾವತಿ ವಿಚಾರದಿಂದ. ಕಳೆದ ಕೆಲ ದಿನಗಳಿಂದ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನಲ್ಲಿ ಆಟಗಾರರ ಬಂಡಾಯದ ಸುದ್ದಿಗಳು ಕೇಳಿ ಬರುತ್ತಿದ್ದವು. ಆದೀಗ ನಿಜವಾಗಿದೆ. ದರ್ಬಾರ್ ರಾಜ್ಶಾಹಿ ತಂಡದ ವಿದೇಶಿ ಆಟಗಾರರು ಭಾನುವಾರ ಮೈದಾನಕ್ಕಿಳಿದಿಲ್ಲ. ಇದಕ್ಕೆ ಮುಖ್ಯ ಕಾರಣ ಫಾರಿನ್ ಪ್ಲೇಯರ್ಸ್ಗೆ ದರ್ಬಾರ್ ರಾಜ್ಶಾಹಿ ಫ್ರಾಂಚೈಸಿ ಈವರೆಗೆ ನಿಗದಿತ ಸಂಭಾವನೆಯನ್ನು ನೀಡದಿರುವುದು.
ಬಿಪಿಎಲ್ ಮೊದಲಾರ್ಧದ ಮುಕ್ತಾಯದ ಬೆನ್ನಲ್ಲೇ ದರ್ಬಾರ್ ರಾಜ್ಶಾಹಿ ಫ್ರಾಂಚೈಸಿ ವಿರುದ್ಧ ಆಟಗಾರರ ಹಣ ಪಾವತಿ ಬಾಕಿ ಆರೋಪಗಳು ಕೇಳಿ ಬಂದಿದ್ದವು. ಅಲ್ಲದೆ ಕೆಲ ಆಟಗಾರರು ಅಭ್ಯಾಸಕ್ಕೆ ಹಾಜರಾಗದೇ ತಮ್ಮ ಆಕ್ರೋಶವನ್ನು ಸಹ ಹೊರಹಾಕಿದ್ದರು. ಇದೀಗ ತಿಂಗಳುಗಳು ಕಳೆದರೂ ಆಟಗಾರರಿಗೆ ಸಂಭಾವನೆ ನೀಡಲು ಮೀನಾವೇಷ ಎನಿಸುತ್ತಿರುವ ದರ್ಬಾರ್ ರಾಜ್ಶಾಹಿ ಫ್ರಾಂಚೈಸಿ ವಿರುದ್ಧ ವಿದೇಶಿ ಆಟಗಾರರು ತಿರುಗಿ ನಿಂತಿದ್ದಾರೆ.
ಅಲ್ಲದೆ ಭಾನುವಾರ ನಡೆದ ರಂಗ್ಪುರ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ದರ್ಬಾರ್ ರಾಜ್ಶಾಹಿ ಪರ ಯಾವುದೇ ವಿದೇಶಿ ಆಟಗಾರರು ಕಣಕ್ಕಿಳಿದಿಲ್ಲ. ಇದರೊಂದಿಗೆ ದರ್ಬಾರ್ ರಾಜ್ಶಾಹಿ ಫ್ರಾಂಚೈಸಿ ಇನ್ನೂ ಸಹ ಆಟಗಾರರಿಗೆ ಸಂಭಾವನೆಯನ್ನು ಪಾವತಿಸಿಲ್ಲ ಎಂಬುದು ಬಹಿರಂಗವಾಗಿದೆ.
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನ ನಿಯಮಗಳ ಪ್ರಕಾರ, ಪ್ರತಿ ಫ್ರಾಂಚೈಸಿಯು ತನ್ನ ಆಡುವ ಬಳಗದಲ್ಲಿ ಕನಿಷ್ಠ 2 ವಿದೇಶಿ ಆಟಗಾರರನ್ನು ಸೇರಿಸಿಕೊಳ್ಳಬೇಕು. ಆದರೆ, ಜನವರಿ 26 ರಂದು ರಂಗ್ಪುರ ರೈಡರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ದರ್ಬಾರ್ ರಾಜ್ಶಾಹಿ ಪರ ಯಾವುದೇ ವಿದೇಶಿ ಆಟಗಾರರು ಕಾಣಿಸಿಕೊಂಡಿಲ್ಲ.
ಪಂದ್ಯದ ಆರಂಭಕ್ಕೂ ಮುನ್ನ ವಿದೇಶಿ ಆಟಗಾರರು ಹಿಂದೆ ಸರಿದಿದ್ದರಿಂದ ಪ್ಲೇಯಿಂಗ್ ಇಲೆವೆನ್ನಲ್ಲಿ ನಾಲ್ಕು ಬದಲಾವಣೆ ಮಾಡಲಾಗಿದೆ ಎಂದು ದರ್ಬಾರ್ ರಾಜ್ಶಾಹಿ ತಂಡದ ನಾಯಕ ತಸ್ಕಿನ್ ಅಹ್ಮದ್ ತಿಳಿಸಿದ್ದರು. ಇದರೊಂದಿಗೆ ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ನ ಆಟಗಾರರ ವೇತನದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ.
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ವಿದೇಶಿ ಆಟಗಾರರಿಲ್ಲದೆ, ತಂಡವೊಂದು ಪಂದ್ಯವನ್ನಾಡಿದೆ. ಇದು ಬಿಪಿಎಲ್ ನಿಯಮದ ಉಲ್ಲಂಘನೆಯಾಗಿದ್ದರೂ, ದರ್ಬಾರ್ ರಾಜ್ಶಾಹಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ವಿಶೇಷ ಮನವಿ ಮಾಡಿ, ಸ್ಥಳೀಯ ಆಟಗಾರರನ್ನು ಒಳಗೊಂಡ ಆಡುವ ಬಳಗವನ್ನು ಕಣಕ್ಕಿಳಿಸಿದೆ.
ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್ ಮುಕ್ತಾಯದ ಹಂತಕ್ಕೆ ಬಂದರೂ ದರ್ಬಾರ್ ರಾಜ್ಶಾಹಿ ಫ್ರಾಂಚೈಸಿ ವಿದೇಶಿ ಆಟಗಾರರಿಗೆ ಅರ್ಧದಷ್ಟು ಕೂಡ ವೇತನ ಪಾವತಿ ಮಾಡಿಲ್ಲ. ಪ್ರಸ್ತುತ ಮಾಹಿತಿ ಪ್ರಕಾರ, ನಾಲ್ಕನೇ ಒಂದು ಭಾಗವನ್ನು ಮಾತ್ರ ಪಾವತಿ ಮಾಡಲಾಗಿದೆ. ಆದರೆ ಬಿಸಿಬಿ ನಿಯಮಗಳ ಪ್ರಕಾರ, ಪಂದ್ಯಾವಳಿಯ ಸಮಯದಲ್ಲಿ ಆಟಗಾರರಿಗೆ ಶೇ. 75 ರಷ್ಟು ವೇತನವನ್ನು ಪಾವತಿಸಬೇಕು.
ಇದನ್ನೂ ಓದಿ: ಸಿಕ್ಸ್ಗಳ ಸುರಿಮಳೆ… ಟಿ20 ಕ್ರಿಕೆಟ್ನಲ್ಲಿ ಕೀರನ್ ಪೊಲಾರ್ಡ್ ವಿಶ್ವ ದಾಖಲೆ
ಆದರೆ ದರ್ಬಾರ್ ರಾಜ್ಶಾಹಿ ಫ್ರಾಂಚೈಸಿ ಬಳಿ ದುಡ್ಡಿಲ್ಲ. ಇದನ್ನರಿತಿರುವ ವಿದೇಶಿ ಆಟಗಾರರು ಇದೀಗ ಟೂರ್ನಿ ನಡುವೆಯೇ ಪಂದ್ಯಾವಳಿಯನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ ರಂಗ್ಪುರ್ ರೈಡರ್ಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು.