41 ಸಿಕ್ಸ್, 487 ರನ್ಸ್: 14.2 ಓವರ್ಗಳಲ್ಲಿ ವಿಶ್ವ ದಾಖಲೆಯ ಚೇಸಿಂಗ್..!
T20 World Records: ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ರನ್ ರೇಟ್ನಲ್ಲಿ ಚೇಸಿಂಗ್ ಮಾಡಿ ಗೆದ್ದ ವಿಶ್ವ ದಾಖಲೆ ಬಲ್ಗೇರಿಯಾ ತಂಡದ ಪಾಲಾಗಿದೆ. ಸರ್ಬಿಯಾ ದೇಶದ ಹೆಸರಿನಲ್ಲಿದ್ದ ಈ ದಾಖಲೆಯನ್ನು ಕೇವಲ 14.2 ಓವರ್ಗಳಲ್ಲಿ ಚೇಸ್ ಮಾಡುವ ಮೂಲಕ ಬಲ್ಗೇರಿಯಾ ಬ್ಯಾಟರ್ಗಳು ತಮ್ಮದಾಗಿಸಿಕೊಂಡಿದ್ದಾರೆ.

ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವಿಶ್ವ ದಾಖಲೆ ನಿರ್ಮಿಸಿರುವುದು ಬಲ್ಗೇರಿಯಾ ತಂಡ. ಬಲ್ಗೇರಿಯಾ ಟಿ20 ಸರಣಿಯ 4ನೇ ಪಂದ್ಯದಲ್ಲಿ ಜಿಬ್ರಾಲ್ಟರ್ ಮತ್ತು ಬಲ್ಗೇರಿಯಾ ತಂಡಗಳು ಮುಖಾಮುಖಿಯಾಗಿದ್ದವು. ಸೋಫಿಯಾದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಬಲ್ಗೇರಿಯಾ ತಂಡವು ಬೌಲಿಂಗ್ ಆಯ್ದುಕೊಂಡರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಜಿಬ್ರಾಲ್ಟರ್ ತಂಡದ ಪರ ಆರಂಭಿಕ ದಾಂಡಿಗ ಫಿಲಿಪ್ ರೈಕ್ಸ್ ಕೇವಲ 33 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 4 ಫೋರ್ಗಳೊಂದಿಗೆ 73 ರನ್ ಬಾರಿಸಿದರು. ಇನ್ನು ನಾಯಕ ಇಯಾನ್ ಲ್ಯಾಟಿನ್ 28 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 52 ರನ್ ಸಿಡಿಸಿದರು. ಇನ್ನುಳಿದ ಬ್ಯಾಟರ್ಗಳು ಕೂಡ ಎರಡಂಕಿ ರನ್ಗಳನ್ನು ಕಲೆಹಾಕುವ ಮೂಲಕ ರನ್ ಗತಿ ಹೆಚ್ಚಿಸಿದರು. ಈ ಮೂಲಕ ಜಿಬ್ರಾಲ್ಟರ್ ತಂಡವು 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 243 ರನ್ ಕಲೆಹಾಕಿತು.
244 ರನ್ಗಳ ಕಠಿಣ ಗುರಿ:
ಈ ಗುರಿಯನ್ನು ಬೆನ್ನತ್ತಿದ ಬಲ್ಗೇರಿಯಾ ಪರ ಇಸಾ ಜಾರೊ 24 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 69 ರನ್ ಸಿಡಿಸಿದರು. ಇನ್ನು ಮಿಲೆನ್ ಗೊಗೆವ್ 27 ಎಸೆತಗಳಲ್ಲಿ 7 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ 69 ರನ್ ಚಚ್ಚಿದರು. ಆ ಬಳಿಕ ಬಂದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಮನನ್ ಬಶೀರ್ 21 ಎಸೆತಗಳಲ್ಲಿ 9 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 71 ರನ್ ಬಾರಿಸಿ ಅಬ್ಬರಿಸಿದರು.
ಈ ಮೂಲಕ ಬಲ್ಗೇರಿಯಾ ತಂಡವು 14.2 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 244 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಅದು ಕೂಡ ವಿಶ್ವ ದಾಖಲೆಯ ಚೇಸಿಂಗ್ನೊಂದಿಗೆ ಎಂಬುದು ವಿಶೇಷ.
ವಿಶ್ವ ದಾಖಲೆ:
ಈ ಪಂದ್ಯದಲ್ಲಿ ಬಲ್ಗೇರಿಯಾ ತಂಡವು 244 ರನ್ಗಳನ್ನು ಚೇಸ್ ಮಾಡಿರುವುದು ಕೇವಲ 14.2 ಓವರ್ಗಳಲ್ಲಿ. ಅಂದರೆ ಪ್ರತಿ ಓವರ್ಗೆ 17.02 ರನ್ ರೇಟ್ನಲ್ಲಿ ರನ್ ಕಲೆಹಾಕಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ 200+ ಗುರಿಯನ್ನು ಅತೀ ಹೆಚ್ಚಿನ ರನ್ ರೇಟ್ನಲ್ಲಿ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಬಲ್ಗೇರಿಯಾ ತಂಡ ತನ್ನದಾಗಿಸಿಕೊಂಡಿದೆ.
ಇದಕ್ಕೂ ಮುನ್ನ ಈ ದಾಖಲೆ ಸರ್ಬಿಯಾ ತಂಡದ ಹೆಸರಿನಲ್ಲಿತ್ತು. 2025 ರಲ್ಲಿ ಸ್ಲೋವೆನಿಯಾ ವಿರುದ್ಧದ ಪಂದ್ಯದಲ್ಲಿ ಸರ್ಬಿಯಾ 200 ರನ್ಗಳ ಗುರಿಯನ್ನು 14.1 ಓವರ್ಗಳಲ್ಲಿ ಚೇಸ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ 244 ರನ್ಗಳನ್ನು 14.2 ಓವರ್ಗಳಲ್ಲಿ ಬೆನ್ನತ್ತಿ ಗೆಲ್ಲುವ ಮೂಲಕ ಬಲ್ಗೇರಿಯಾ ಹೊಸ ಇತಿಹಾಸ ನಿರ್ಮಿಸಿದೆ.
41 ಸಿಕ್ಸ್, 487 ರನ್ಸ್:
ಇನ್ನು ಈ ಪಂದ್ಯದಲ್ಲಿ 487 ರನ್ಗಳು ಮೂಡಿಬಂದಿದ್ದು ಮತ್ತೊಂದು ವಿಶೇಷ. ಜಿಬ್ರಾಲ್ಟರ್ 243 ರನ್ಗಳನ್ನು ಕಲೆಹಾಕಿದರೆ, ಬಲ್ಗೇರಿಯಾ 244 ರನ್ ಕಲೆಹಾಕಿತು. ಈ ಮೂಲಕ ಉಭಯ ತಂಡಗಳು ಸೇರಿ 34.1 ಓವರ್ಗಳಲ್ಲಿ 487 ರನ್ಗಳನ್ನು ಕಲೆಹಾಕಿ ಹೊಸ ಇತಿಹಾಸ ಬರೆದರು.
ಇದನ್ನೂ ಓದಿ: T20 World Cup 2026: ಟಿ20 ವಿಶ್ವಕಪ್ಗೆ 15 ತಂಡಗಳು ಎಂಟ್ರಿ
ಹಾಗೆಯೇ ಈ ಪಂದ್ಯದಲ್ಲಿ ಮೂಡಿಬಂದ ಒಟ್ಟು ಸಿಕ್ಸರ್ಗಳ ಸಂಖ್ಯೆ 47. ಜಿಬ್ರಾಲ್ಟರ್ ಬ್ಯಾಟರ್ಗಳು 18 ಸಿಕ್ಸ್ಗಳನ್ನು ಬಾರಿಸಿದರೆ, ಬಲ್ಗೇರಿಯಾ ಬ್ಯಾಟ್ಸ್ಮನ್ಗಳು 23 ಸಿಕ್ಸ್ ಸಿಡಿಸಿದರು. ಈ ಮೂಲಕ ಒಟ್ಟು 41 ಸಿಕ್ಸರ್ಗಳೊಂದಿಗೆ ಈ ಪಂದ್ಯದಲ್ಲಿ 246 ರನ್ ಕಲೆಹಾಕಿರುವುದು ವಿಶೇಷ.
Published On - 12:56 pm, Sat, 12 July 25
