T20 World Cup 2022: ಆಫ್ರಿಕಾ ವಿರುದ್ಧ ರಾಹುಲ್ ಬದಲು ಪಂತ್ಗೆ ಅವಕಾಶ? ಬ್ಯಾಟಿಂಗ್ ಕೋಚ್ ಹೇಳಿದ್ದೇನು?
T20 World Cup 2022: ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರಾಹುಲ್ ಬದಲು ರಿಷಭ್ ಪಂತ್ಗೆ ತಂಡದಲ್ಲಿ ಅವಕಾಶ ನೀಡಬೇಕು ಎಂಬ ಮಾತು ಕೇಳಿಬರುತ್ತಿವೆ. ಆದರೆ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವ ಬ್ಯಾಟಿಂಗ್ ಕೋಚ್ ರಾಥೋರ್ ಬೇರೆಯದ್ದೆ ಕಥೆ ಹೇಳಿದ್ದಾರೆ.
ಟಿ20 ವಿಶ್ವಕಪ್ನಲ್ಲಿ (T20 World Cup 2022) ಶುಭಾರಂಭ ಮಾಡಿರುವ ಟೀಂ ಇಂಡಿಯಾ (Team India) ಆಡಿರುವ ಎರಡು ಪಂದ್ಯಗಳನ್ನೇನೊ ಗೆದ್ದಿದೆ. ಆದರೆ ಬ್ಯಾಟಿಂಗ್ ವಿಭಾಗದಲ್ಲಿ ಆರಂಭಿಕ ಹಾಗೂ ಉಪನಾಯಕ ಕೆಎಲ್ ರಾಹುಲ್ ( KL Rahul) ಫ್ಲಾಪ್ ಶೋ ತಂಡಕ್ಕೆ ಹೊಸ ತಲೆನೋವು ತಂದಿದೆ. ಸೂಪರ್ 12 ಸುತ್ತಿನಲ್ಲಿ ಆಡಿರುವ ಎರಡು ಪಂದ್ಯಗಳಲ್ಲೂ ಆರಂಭಿಕರಾಗಿ ವಿಫಲರಾಗಿರುವ ರಾಹುಲ್ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 4 ರನ್ಗಳಿಗೆ ಸುಸ್ತಾದರೆ, ನೆದರ್ಲೆಂಡ್ಸ್ ವಿರುದ್ಧ 9 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಈ ಎರಡು ಪಂದ್ಯಗಳಲ್ಲಿ ಟೀಂ ಇಂಡಿಯಾ ಗೆದ್ದಿದ್ದರಿಂದ ರಾಹುಲ್ ಕಳಪೆ ಆಟ ತಂಡಕ್ಕೆ ಅಷ್ಟೇನೂ ಹೊಡೆತ ನೀಡಲಿಲ್ಲ. ಆದರೆ ಮುಂಬರುವ ಪ್ರತಿಯೊಂದು ಪಂದ್ಯಗಳು ಟೀಂ ಇಂಡಿಯಾ ಪಾಲಿಗೆ ಬಹಳ ಮುಖ್ಯವಾಗಿವೆ. ಆದ್ದರಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿರುವ ರಾಹುಲ್ ಬದಲು ರಿಷಭ್ ಪಂತ್ಗೆ (Rishabh Pant) ತಂಡದಲ್ಲಿ ಅವಕಾಶ ನೀಡಬೇಕು ಎಂಬ ಮಾತು ಕೇಳಿಬರುತ್ತಿವೆ. ಆದರೆ ಇವೆಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿರುವ ಬ್ಯಾಟಿಂಗ್ ಕೋಚ್ ರಾಥೋರ್ ಬೇರೆಯದ್ದೆ ಕಥೆ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ಮೊದಲು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಭಾರತ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ಗೆ, ಕೆಎಲ್ ರಾಹುಲ್ ಬದಲಿಗೆ ರಿಷಬ್ ಪಂತ್ ಅವರನ್ನು ಮುಂದಿನ ಪಂದ್ಯಗಳಲ್ಲಿ ಆರಂಭಿಕರಾಗಿ ಕಣಕ್ಕಿಳಿಸಲಾಗುತ್ತದೆಯೇ ಎಂದು ಪ್ರಶ್ನೆಯನ್ನು ಕೇಳಲಾಗಿದೆ.
ಕೈಬಿಡುವ ಮಾತೆ ಇಲ್ಲ
ಈ ಪ್ರಶ್ನೆಗೆ ಉತ್ತರಿಸಿದ ರಾಥೋರ್, “ಇಲ್ಲ, ನಾವು ಅಂತಹ ಯಾವುದೇ ಯೋಚನೆಗಳನ್ನು ಇದುವರೆಗು ಮಾಡಿಲ್ಲ. ಎರಡು ಪಂದ್ಯಗಳಲ್ಲಿ ವಿಫಲರಾದ ಮಾತ್ರಕ್ಕೆ ಅವರನ್ನು ತಂಡದಿಂದ ಕೈಬಿಡುವುದು ಸೂಕ್ತವಲ್ಲ. ರಾಹುಲ್ ನಿಜವಾಗಿಯೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದನ್ನು ಅಭ್ಯಾಸ ಪಂದ್ಯಗಳಲ್ಲಿ ಅವರು ಸಾಭೀತುಪಡಿಸಿದ್ದಾರೆ. ಹೀಗಾಗಿ ನಾವು ಸದ್ಯಕ್ಕೆ ಅಂತಃ ಯಾವುದೇ ಬದಲಾವಣೆಗಳನ್ನು ಮಾಡುತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: T20 World Cup 2022: ಹಾಲಿ ಚಾಂಪಿಯನ್ಗಳಿಗೆ ಎದುರಾಯ್ತು ಟೂರ್ನಿಯಿಂದ ಹೊರಬೀಳುವ ಭೀತಿ..!
ವಿರಾಟ್ ಫಾರ್ಮ್ ಬಗ್ಗೆ ಮಾತನಾಡಿದ ಬ್ಯಾಟಿಂಗ್ ಕೋಚ್, “ಪರಿಸ್ಥಿತಿಗಳು ಅವರನ್ನು ಒತ್ತಾಯಿಸಿದವು ಅಥವಾ ಪರಿಸ್ಥಿತಿಯು ಅವರನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಆಡಲು ಒತ್ತಾಯಿಸಿತು. ಈಗ ಕೊಹ್ಲಿ ಅದಕ್ಕೆ ತಕ್ಕಂತೆಯೇ ಆಡಿದ್ದಾರೆ. ತಮ್ಮ ಆಟದ ಶೈಲಿಯನ್ನು ಬದಲಾಯಿಸಲು ಅಥವಾ ತಂಡದ ಅವಶ್ಯಕತೆಗೆ ತಕ್ಕಂತೆ ಆಟಕ್ಕೆ ಹೊಂದಿಕೊಳ್ಳುವ ಗುಣ ಕೊಹ್ಲಿಯಲ್ಲಿದೆ. ಇಲ್ಲಿಯವರೆಗೆ ಕೊಹ್ಲಿ ಆ ಕೆಲವನ್ನು ಅದ್ಭುತವಾಗಿ ಮಾಡಿದ್ದಾರೆ, ಅದನ್ನು ಇನ್ನೂ ಕೂಡ ಮುಂದುವರಿಸುತ್ತಾರೆ ಎಂದು ನಮಗೆ ತಿಳಿದಿದೆ ಎಂದು ವಿಕ್ರಮ್ ರಾಥೋರ್ ಹೇಳಿದ್ದಾರೆ.
ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಫಾರ್ಮ್
ಟಿ20 ವಿಶ್ವಕಪ್ನಲ್ಲಿ ಆಡಿರುವ 2 ಪಂದ್ಯಗಳಲ್ಲಿ ಅಜೇಯರಾಗಿ ಪಂದ್ಯ ಮುಗಿಸಿದ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 82 ರನ್ ಬಾರಿಸಿದರೆ, ನೆದರ್ಲ್ಯಾಂಡ್ಸ್ ವಿರುದ್ಧದ ಗೆಲುವಿನಲ್ಲಿ ಅತ್ಯಧಿಕ 62 ರನ್ ಗಳಿಸಿದರು. ಈ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿದ ವಿರಾಟ್ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಈಗ ಸೂಪರ್ 12 ಸುತ್ತಿನಲ್ಲಿ ಭಾರತ ಭಾನುವಾರ ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ