‘ಕ್ಲಾಸ್ ಪ್ಲೇಯರ್’..! ಕೊಹ್ಲಿಯನ್ನು ಹೊಗಳಿದ ಬಿಸಿಸಿಐ ನೂತನ ಅಧ್ಯಕ್ಷ ಕನ್ನಡಿಗ ರೋಜರ್ ಬಿನ್ನಿ
T20 World Cup 2022: ಅಂತಹ ಪಂದ್ಯಗಳನ್ನು ನೀವು ಮತ್ತೆ ನೋಡುವುದು ಕಷ್ಟ. ಆ ಪಂದ್ಯ ಭಾಗಶಃ ಪಾಕಿಸ್ತಾನದ ಪರ ವಾಲಿತ್ತು. ಆದರೆ ಇದ್ದಕ್ಕಿದ್ದಂತೆ ಭಾರತ ಕಡೆ ತಿರುಗಿತು. ಅಭಿಮಾನಿಗಳು ಇಂತಹ ಪಂದ್ಯಗಳನ್ನೆ ಹೆಚ್ಚು ನೋಡಲು ಬಯಸುತ್ತಾರೆ ಎಂದಿದ್ದಾರೆ.
ಕಳೆದ 3 ವರ್ಷಗಳಿಂದ ಕಳಪೆ ಫಾರ್ಮ್ ಎದುರಿಸುತ್ತಾ ಸಿಕ್ಕಸಿಕ್ಕವರ ಬಾಯಿಗೆ ಸಿಕ್ಕಿಹಾಕಿಕೊಂಡಿದ್ದ ಕಿಂಗ್ ಕೊಹ್ಲಿ (Virat Kohli) ಮತ್ತೆ ತಮ್ಮ ಹಳೆಯ ಫಾರ್ಮ್ಗೆ ಮರಳಿದ್ದಾರೆ. ಕಳೆದ ಏಷ್ಯಾಕಪ್ನಲ್ಲಿ ಅಬ್ಬರದ ಶತಕ ಸಿಡಿಸುವುದರೊಂದಿಗೆ ಟೀಕಿಸುವವರ ಬಾಯಿ ಮುಚ್ಚಿಸಿದ್ದ ವಿರಾಟ್, ತನ್ನ ಪಾರ್ಮ್ ಅನ್ನು ಟಿ20 ವಿಶ್ವಕಪ್ನಲ್ಲೂ (T20 World Cup 2022) ಮುಂದುವರೆಸಿದ್ದಾರೆ. ಇದರ ಅಂಗವಾಗಿ ಪಾಕ್ ವಿರುದ್ಧ ಅಜೇಯ 82 ರನ್‌ಗಳನ್ನು ಬಾರಿಸಿದ್ದ ವಿರಾಟ್ ವೃತ್ತಿ ಜೀವನದ ಸ್ಮರಣೀಯ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ ಬಾಬರ್ ತಂಡದ ಪರ ವಾಲಿದ್ದ ಗೆಲುವನ್ನು ಕಸಿದುಕೊಂಡ ರೀತಿ ಕಂಡು ಇಡೀ ಕ್ರಿಕೆಟ್ ಜಗತ್ತೇ ಕೊಹ್ಲಿಯನ್ನು ಕೊಂಡಾಡಿತ್ತು. ಈಗ ಕೊಹ್ಲಿಯ ಬೊಂಬಾಟ್ ಇನ್ನಿಂಗ್ಸ್ಗೆ ಶಹಬ್ಬಾಸ್ ಎಂದಿರುವ ಬಿಸಿಸಿಐನ ನೂತನ ಅಧ್ಯಕ್ಷ ರೋಜರ್ ಬಿನ್ನಿ (Roger Binny) ಕೊಹ್ಲಿಯನ್ನು ಹೊಗಳಿ ಮಾತನಾಡಿದ್ದಾರೆ.
ಎಎನ್‌ಐ ಜೊತೆ ಮಾತನಾಡಿದ ಬಿನ್ನಿ, ಪಾಕ್ ವಿರುದ್ಧದ ಪಂದ್ಯ ನನಗೆ ಇನ್ನು ಕನಸಿನಂತೆ ಭಾಸವಾಗುತ್ತಿದೆ. ಸ್ಟೇಡಿಯಂನಲ್ಲಿ ಕೊಹ್ಲಿ ಹೇಗೆ ಅಬ್ಬರಿಸಿದರು ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಅದೊಂದು ದೊಡ್ಡ ಗೆಲುವು ಎಂದಿದ್ದಾರೆ.
ಅಂತಹ ಪಂದ್ಯಗಳು ಮತ್ತೆ ನೋಡಲು ಸಿಗುವುದು ಕಷ್ಟ
ಅಲ್ಲದೆ ಭಾರತ- ಪಾಕ್ ನಡುವಿನ ಪಂದ್ಯದ ಬಗ್ಗೆ ಮಾತನಾಡಿರುವ ಬಿನ್ನಿ, ಅಂತಹ ಪಂದ್ಯಗಳನ್ನು ನೀವು ಮತ್ತೆ ನೋಡುವುದು ಕಷ್ಟ. ಆ ಪಂದ್ಯ ಭಾಗಶಃ ಪಾಕಿಸ್ತಾನದ ಪರ ವಾಲಿತ್ತು. ಆದರೆ ಇದ್ದಕ್ಕಿದ್ದಂತೆ ಭಾರತ ಕಡೆ ತಿರುಗಿತು. ಅಭಿಮಾನಿಗಳು ಇಂತಹ ಪಂದ್ಯಗಳನ್ನೆ ಹೆಚ್ಚು ನೋಡಲು ಬಯಸುತ್ತಾರೆ ಎಂದಿದ್ದಾರೆ. ಹಾಗೆಯೇ ಕೊಹ್ಲಿ ಆಟವನ್ನು ಮೆಚ್ಚಿರುವ ಬಿನ್ನಿ, ವಿರಾಟ್ ಕೊಹ್ಲಿ ಏನನ್ನೂ ಸಾಬೀತುಪಡಿಸುವ ಅಗತ್ಯವಿಲ್ಲ, ಅವರೊಬ್ಬ ಕ್ಲಾಸ್ ಪ್ಲೇಯರ್. ಅವರು ಒತ್ತಡದಲ್ಲಿ ಇನ್ನೂ ಅದ್ಭುತವಾಗಿ ಆಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: T20 World Cup 2022: ಹಾಲಿ ಚಾಂಪಿಯನ್ಗಳಿಗೆ ಎದುರಾಯ್ತು ಟೂರ್ನಿಯಿಂದ ಹೊರಬೀಳುವ ಭೀತಿ..!
ಸೋಲನ್ನು ಮುಕ್ತ ಮನಸಿನಿಂದ ಒಪ್ಪಿಕೊಳ್ಳಬೇಕು
ಅದೇ ಸಮಯದಲ್ಲಿ, ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ನಡೆದ ಕೊನೆಯ ಓವರ್‌ನ ನೋಬಾಲ್ ವಿವಾದ ಬಗ್ಗೆ ಮಾತನಾಡಿರುವ ಬಿನ್ನಿ, ನೀವು ಪಂದ್ಯವನ್ನು ಸೋತಾಗ ಅದನ್ನು ಮುಕ್ತ ಮನಸಿನಿಂದ ಒಪ್ಪಿಕೊಳ್ಳಬೇಕು ಎಂದಿದ್ದಾರೆ. ಇನ್ನು ಟೂರ್ನಿಯಲ್ಲಿ ಎರಡೂ ಪಂದ್ಯಗಳನ್ನು ಗೆದ್ದಿರುವ ರೋಹಿತ್ ಪಡೆ 4 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಟಿ20 ವಿಶ್ವಕಪ್ನಲ್ಲಿ ಇನ್ನು ಗೆಲುವಿನ ಖಾತೆಯನ್ನೇ ತೆರೆಯದೆ ಪಾಕಿಸ್ತಾನ ಆಡಿರುವ ಎರಡು ಪಂದ್ಯಗಳಲ್ಲಿ ಎರಡನ್ನು ಸೋತು ಶೂನ್ಯ ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
ಟಿ20 ವಿಶ್ವಕಪ್ನಲ್ಲಿ ಕೊಹ್ಲಿ ಫಾರ್ಮ್
ಟಿ20 ವಿಶ್ವಕಪ್ನಲ್ಲಿ ಆಡಿರುವ 2 ಪಂದ್ಯಗಳಲ್ಲಿ ಅಜೇಯರಾಗಿ ಪಂದ್ಯ ಮುಗಿಸಿದ ಕೊಹ್ಲಿ, ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 6 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 82 ರನ್ ಬಾರಿಸಿದರೆ, ನೆದರ್ಲ್ಯಾಂಡ್ಸ್ ವಿರುದ್ಧದ ಗೆಲುವಿನಲ್ಲಿ ಅತ್ಯಧಿಕ 62 ರನ್ ಗಳಿಸಿದರು. ಈ ಪಂದ್ಯದಲ್ಲಿ 44 ಎಸೆತಗಳನ್ನು ಎದುರಿಸಿದ ವಿರಾಟ್ 3 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ಈಗ ಸೂಪರ್ 12 ಸುತ್ತಿನಲ್ಲಿ ಭಾರತ ಭಾನುವಾರ ಪರ್ತ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ಭಾರತ 4 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸುವ ಮೂಲಕ ತನ್ನ ಅಭಿಯಾನವನ್ನು ಆರಂಭಿಸಿತು. ಇದಾದ ಬಳಿಕ ನೆದರ್ಲೆಂಡ್ಸ್ ತಂಡವನ್ನು 56 ರನ್‌ಗಳಿಂದ ಮಣಿಸಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Sat, 29 October 22