ಬವುಮಾಗೆ ಸೋಲಿನ ರುಚಿ ತೋರಿಸಿದ ‘ಕ್ಯಾಪ್ಟನ್’ ಕಮಿನ್ಸ್

ಎದುರಾಳಿ ತಂಡಗಳ ನಾಯಕರ ಗೆಲುವಿನ ನಾಗಾಲೋಟವನ್ನು ಕೊನೆಗೊಳಿಸುವುದರಲ್ಲಿ ತಾವೇ ಕಿಂಗ್ ಎಂಬುದನ್ನು ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಡರ್ಬನ್ ಟೆಸ್ಟ್‌ನಲ್ಲಿ ಸೌತ್ ಆಫ್ರಿಕಾವನ್ನು 214 ರನ್‌ಗಳ ಬೃಹತ್ ಅಂತರದಿಂದ ಬಗ್ಗುಬಡಿದ ಆಸೀಸ್ ಪಡೆ, ನಾಯಕನಾಗಿ ಇದುವರೆಗೆ ಸೋಲನ್ನೇ ಕಾಣದ ಟೆಂಬಾ ಬವುಮಾ ಅವರ ಅಜೇಯ ದಾಖಲೆಗೆ ಇತಿಶ್ರೀ ಹಾಡಿದೆ.

ಬವುಮಾಗೆ ಸೋಲಿನ ರುಚಿ ತೋರಿಸಿದ ಕ್ಯಾಪ್ಟನ್ ಕಮಿನ್ಸ್
Temba Bavuma - Pat Cummins
Image Credit source: GettyImages

Updated on: Oct 15, 2026 | 10:06 AM

ಕ್ರಿಕೆಟ್ ಜಗತ್ತಿನ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾದ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್ ಮತ್ತೊಮ್ಮೆ ತಮ್ಮ ಚಾಣಾಕ್ಷ ನಾಯಕತ್ವವನ್ನು ಸಾಬೀತುಪಡಿಸಿದ್ದಾರೆ. ಡರ್ಬನ್‌ನ ಕಿಂಗ್ಸ್‌ಮೇಡ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ 214 ರನ್‌ಗಳ ಬೃಹತ್ ಜಯ ದಾಖಲಿಸುವ ಮೂಲಕ, ಆಸ್ಟ್ರೇಲಿಯಾ ತಂಡವು ಆತಿಥೇಯರ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. ಈ ಭರ್ಜರಿ ಗೆಲುವಿನೊಂದಿಗೆ ಕ್ಯಾಪ್ಟನ್ ಕಮಿನ್ಸ್, ಸೌತ್ ಆಫ್ರಿಕಾದ ಟೆಸ್ಟ್ ನಾಯಕ ಟೆಂಬಾ ಬವುಮಾ ಅವರಿಗೆ ಸೋಲಿನ ರುಚಿ ತೋರಿಸಿದ್ದಾರೆ.

ಬವುಮಾ ಅಜೇಯ ಓಟಕ್ಕೆ ಬ್ರೇಕ್:

ಟೆಂಬಾ ಬವುಮಾ ಸೌತ್ ಆಫ್ರಿಕಾ ಟೆಸ್ಟ್ ತಂಡದ ನಾಯಕರಾದ ನಂತರ ಆಡಿದ 12 ಪಂದ್ಯಗಳಲ್ಲಿ (11 ಗೆಲುವು, 1 ಡ್ರಾ) ಒಂದರಲ್ಲೂ ಸೋತಿರಲಿಲ್ಲ. ಈ ಸುದೀರ್ಘ ಅಜೇಯ ದಾಖಲೆಯನ್ನು ಧೂಳೀಪಟ ಮಾಡಿದ ಕಮಿನ್ಸ್ ಪಡೆ, ಬವುಮಾ ಅವರಿಗೆ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ನಾಯಕನಾಗಿ ಮೊದಲ ಸೋಲಿನ ರುಚಿ ತೋರಿಸಿದೆ.

ಬ್ರೇಕ್​ಗಳ ಬೇಟೆಗಾರ ಕಮಿನ್ಸ್​:

ಎದುರಾಳಿ ತಂಡದ ನಾಯಕರ ಸುದೀರ್ಘ ಗೆಲುವಿನ ಓಟ ಅಥವಾ ಅಜೇಯ ದಾಖಲೆಗಳನ್ನು ಮುರಿಯುವುದರಲ್ಲಿ ಪ್ಯಾಟ್ ಕಮಿನ್ಸ್ ಸಿದ್ದಹಸ್ತರು ಎಂಬುದನ್ನು ಈ ಪಂದ್ಯ ಮತ್ತೊಮ್ಮೆ ನೆನಪಿಸಿದೆ.

  •  ರೋಹಿತ್ ಶರ್ಮಾ (2023): ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಸತತ 10 ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಕಮಿನ್ಸ್ ಇಡೀ ಸ್ಟೇಡಿಯಂ ಅನ್ನು ಮೌನವಾಗಿಸಿದ್ದರು.
  • ಟೆಂಬಾ ಬವುಮಾ (2026): ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ 12 ಪಂದ್ಯಗಳಿಂದ ಸೋಲರಿಯದ ಸರದಾರನಂತಿದ್ದ ಬವುಮಾ ಅವರ ಅಜೇಯ ಓಟಕ್ಕೆ ಕಮಿನ್ಸ್ ಬ್ರೇಕ್ ಹಾಕಿದ್ದಾರೆ.

ಇದನ್ನೂ ಓದಿ: ಐಪಿಎಲ್ ಮಿನಿ ಹರಾಜಿಗೂ ಮುನ್ನ ಬಿಗ್ ಡೀಲ್!

ಸರಣಿಯಲ್ಲಿ ಆಸೀಸ್ ಮುನ್ನಡೆ:

ಡರ್ಬನ್‌ನ ಕಿಂಗ್ಸ್‌ಮೇಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ, ತನ್ನ ಪ್ರಥಮ ಇನಿಂಗ್ಸ್‌ನಲ್ಲಿ 390 ರನ್ ಕಲೆಹಾಕಿತು. ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆರಂಭಿಸಿದ ಸೌತ್ ಆಫ್ರಿಕಾ ಕೇವಲ 284 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 106 ರನ್‌ಗಳ ಪ್ರಮುಖ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, 6 ವಿಕೆಟ್‌ಗೆ 314 ರನ್ ಗಳಿಸಿದ್ದಾಗ ಇನಿಂಗ್ಸ್ ಡಿಕ್ಲೇರ್ ಘೋಷಿಸಿತು.

ಈ ಮೂಲಕ ಸೌತ್ ಆಫ್ರಿಕಾ ತಂಡಕ್ಕೆ 421 ರನ್‌ಗಳ ಬೃಹತ್ ಗುರಿ ನೀಡಿತು. ಆದರೆ, ಈ ಕಠಿಣ ಗುರಿ ಬೆನ್ನಟ್ಟಿದ ಆತಿಥೇಯರು ಆಸೀಸ್ ಬೌಲರ್‌ಗಳ ಮಾರಕ ದಾಳಿಗೆ ಸಿಲುಕಿ 206 ರನ್‌ಗಳಿಗೆ ಸರ್ವಪತನ ಕಂಡರು. ಇದರೊಂದಿಗೆ ಆಸ್ಟ್ರೇಲಿಯಾ ತಂಡವು 214 ರನ್‌ಗಳ ಅದ್ಭುತ ಜಯ ಸಾಧಿಸಿತು. ಈ ಭರ್ಜರಿ ಗೆಲುವಿನೊಂದಿಗೆ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವು 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಸೌತ್ ಆಫ್ರಿಕಾ ಪ್ಲೇಯಿಂಗ್ 11: ಐಡೆನ್ ಮಾರ್ಕ್ರಾಮ್ , ರಯಾನ್ ರಿಕಲ್ಟನ್ , ಡೇವಿಡ್ ಬೆಡಿಂಗ್ಹ್ಯಾಮ್ ,
ಟೆಂಬಾ ಬವುಮಾ (ನಾಯಕ) , ಟ್ರಿಸ್ಟನ್ ಸ್ಟಬ್ಸ್ , ವಿಯಾನ್ ಮುಲ್ಡರ್ , ಕೈಲ್ ವೆರ್ರೆನ್ (ವಿಕೆಟ್ ಕೀಪರ್), ಮಾರ್ಕೊ ಯಾನ್ಸೆನ್ ,
ಸೈಮನ್ ಹಾರ್ಮರ್ , ಕೇಶವ ಮಹಾರಾಜ್ , ಅನ್ರಿಕ್ ನೋಕಿಯ.

ಇದನ್ನೂ ಓದಿ: ಅಬ್ಬರಿಸಿದ ಯುವ ಪಡೆ: ಪಾಕಿಸ್ತಾನ್ ತಂಡಕ್ಕೆ ದಾಖಲೆಯ ಗೆಲುವು!

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಟ್ರಾವಿಸ್ ಹೆಡ್ , ನಿಕ್ ಮ್ಯಾಡಿನ್ಸನ್ , ಮಾರ್ನಸ್ ಲ್ಯಾಬುಶೇನ್ , ಸ್ಟೀವ್ ಸ್ಮಿತ್ ,
ಮ್ಯಾಟ್ ರೆನ್​ಶಾ , ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್) , ಬ್ಯೂ ವೆಬ್‌ಸ್ಟರ್ , ಪ್ಯಾಟ್ ಕಮ್ಮಿನ್ಸ್ (ನಾಯಕ) , ಮಿಚೆಲ್ ಸ್ಟಾರ್ಕ್ ,
ನಾಥನ್ ಲಿಯಾನ್ , ಜೋಶ್ ಹೇಝಲ್‌ವುಡ್.

 

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us