ಏಕಾಂಗಿಯಾಗಿ ಚಾಂಪಿಯನ್ಸ್ ಟ್ರೋಫಿಯನ್ನು ಆಯೋಜಿಸುವ ಆಸೆಯಲ್ಲಿದ್ದ ಪಾಕಿಸ್ತಾನಕ್ಕೆ ಭಾರತ ಹೈಬ್ರಿಡ್ ಮಾದರಿಯನ್ನು ಮುಂದಿಟ್ಟು ಬಿಗ್ ಶಾಕ್ ನೀಡಿತ್ತು. ಸಾಕಷ್ಟು ಹೋರಾಟದ ಬಳಿಕ ಹೈಬ್ರಿಡ್ ಮಾದರಿಗೆ ಪಾಕಿಸ್ತಾನ ಒಪ್ಪಿಕೊಳ್ಳಲೇಬೇಕಾಯಿತು. ಅದರಂತೆ ಇದೀಗ ಫೆಬ್ರವರಿಯಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನ ಹಾಗೂ ಯುಎಇ ಆತಿಥ್ಯವಹಿಸುತ್ತಿವೆ. ಅಂದರೆ ಭಾರತದ ಪಂದ್ಯಗಳು ಯುಎಇಯಲ್ಲಿ ನಡೆಯಲ್ಲಿವೆ. ಉಳಿದ ಪಂದ್ಯಗಳಿಗೆ ಪಾಕಿಸ್ತಾನ ಆತಿಥ್ಯ ನೀಡಲಿದೆ. ಆದರೆ ಇದೀಗ ಹೊರಬಿದ್ದಿರುವ ಮಾಹಿತಿ ಪ್ರಕಾರ, ಇಡೀ ಪಂದ್ಯಾವಳಿ ಪಾಕಿಸ್ತಾನದಿಂದ ಬೇರೆಡೆಗೆ ಸ್ಥಳಾಂತರವಾಗಬಹುದು ಎಂದು ಹೇಳಲಾಗುತ್ತಿದೆ. ಇದಕ್ಕೆ ಕಾರಣವೂ ಇದ್ದು, ಚಾಂಪಿಯನ್ಸ್ ಟ್ರೋಫಿಯನ್ನು ನಡೆಸಲು ನಿಗದಿಪಡಿಸಿರುವ ಮೂರು ಕ್ರೀಡಾಂಗಣಗಳು ಈ ಟೂರ್ನಿಯನ್ನು ಆಯೋಜಿಸಲು ಇನ್ನು ಸಿದ್ಧವಾಗಿಲ್ಲ. ಹೀಗಾಗಿ ಇಡೀ ಪಂದ್ಯಾವಳಿಯನ್ನು ಯುಎಇಗೆ ಸ್ಥಳಾಂತರಿಸಬಹುದು ಎನ್ನಲಾಗುತ್ತಿದೆ.
ಏಕದಿನ ಮಾದರಿಯಲ್ಲಿ ನಡೆಯಲ್ಲಿರುವ ಚಾಂಪಿಯನ್ಸ್ ಟ್ರೋಫಿ ಫೆಬ್ರವರಿ 19 ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಪಾಕಿಸ್ತಾನದಲ್ಲಿ ನಡೆಯಲಿದೆ. ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು ಪಾಕಿಸ್ತಾನದ ಲಾಹೋರ್, ರಾವಲ್ಪಿಂಡಿ ಮತ್ತು ಕರಾಚಿಯ 3 ಕ್ರೀಡಾಂಗಣಗಳಲ್ಲಿ ನಡೆಯಲಿವೆ. ವಿಸ್ಮಯಕಾರಿ ಸಂಗತಿ ಎಂದರೆ ಈ ಮೂರು ಕ್ರೀಡಾಂಗಣಗಳು ಇನ್ನೂ ಸಿದ್ಧವಾಗಿಲ್ಲ. ಇದೀಗ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ 40 ದಿನಗಳು ಮಾತ್ರ ಬಾಕಿ ಉಳಿದಿದ್ದು, ಪಾಕಿಸ್ತಾನದ ಎಲ್ಲಾ ಮೂರು ಕ್ರೀಡಾಂಗಣಗಳಲ್ಲಿ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ.
ಮುಂದಿನ ವಾರ ಐಸಿಸಿ ಅಧಿಕಾರಿಗಳು ಪಾಕಿಸ್ತಾನಕ್ಕೆ ತೆರಳಿ ಕರಾಚಿ, ರಾವಲ್ಪಿಂಡಿ ಮತ್ತು ಲಾಹೋರ್ ಸ್ಟೇಡಿಯಂಗಳನ್ನು ಪರಿಶೀಲಿಸಲಿದ್ದಾರೆ ಎಂಬ ವರದಿಗಳಿವೆ. ಸರಿಯಾದ ಸಮಯಕ್ಕೆ ಕ್ರೀಡಾಂಗಣವನ್ನು ಸಿದ್ಧಪಡಿಸಲು ಪಿಸಿಬಿಗೆ ಗಡುವು ನೀಡಲಾಗಿದೆ. ಪಿಸಿಬಿ ಈ ಗಡುವಿನೊಳಗೆ ಕ್ರೀಡಾಂಗಣಗಳನ್ನು ಸಿದ್ಧಪಡಿಸದಿದ್ದರೆ, ಇಡೀ ಪಂದ್ಯಾವಳಿಯನ್ನು ಪಾಕಿಸ್ತಾನದಿಂದ ಸ್ಥಳಾಂತರಿಸಬಹುದು. ಹೀಗಾದಲ್ಲಿ ಸಂಪೂರ್ಣ ಚಾಂಪಿಯನ್ಸ್ ಟ್ರೋಫಿ ಯುಎಇಯಲ್ಲಿ ಆಯೋಜನೆಯಾಗಲಿದೆ.
ಪಾಕಿಸ್ತಾನದ ಸ್ಟೇಡಿಯಂಗಳ ಬಗ್ಗೆ ಹೇಳುವುದಾದರೆ ಗಡಾಫಿ ಸ್ಟೇಡಿಯಂ ಇನ್ನೂ ಸಿದ್ಧವಾಗಿಲ್ಲ. ಅಲ್ಲಿ ಯಾವುದೇ ಶೆಡ್‌ಗಳನ್ನು ಅಳವಡಿಸಲಾಗಿಲ್ಲ, ಯಾವುದೇ ಫ್ಲಡ್ ಲೈಟ್‌ಗಳನ್ನು ಅಳವಡಿಸಲಾಗಿಲ್ಲ. ಅಷ್ಟೇ ಅಲ್ಲ ಫ್ಯಾನ್ಗಳಿಗೆ ಕುರ್ಚಿಗಳನ್ನೂ ಅಳವಡಿಸಿಲ್ಲ. ಕ್ರೀಡಾಂಗಣದ ಸಂಪೂರ್ಣ ಸಿದ್ಧತೆಗೆ ಜನವರಿ 25 ಗಡುವು ನೀಡಲಾಗಿದ್ದು, ಈ ದಿನಾಂಕದೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳುವ ಸಾಧ್ಯತೆಗಳಿಲ್ಲ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಇದು ನಿಜವಾದರೆ ಪಾಕಿಸ್ತಾನದ ಪ್ರತಿಷ್ಠೆಗೆ ಧಕ್ಕೆಯಾಗುವುದು ಖಂಡಿತ. ಏಕೆಂದರೆ ಇಡೀ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಆಯೋಜಿಸಲು ಪಿಸಿಬಿ, ಐಸಿಸಿ ಮುಂದೆ ಹಟ ಹಿಡಿದು ಕುಳಿತಿತ್ತು. ಇದಲ್ಲದೆ ಬಿಸಿಸಿಐ ವಿರುದ್ಧವೂ ಬೆಂಕಿ ಉಗುಳಿತ್ತು. ಹೀಗಿರುವಾಗ ಕ್ರೀಡಾಂಗಣಗಳನ್ನು ಟೂರ್ನಿಗೆ ಸಿದ್ಧಪಡಿಸುವಲ್ಲಿ ಪಿಸಿಬಿ ಯಶಸ್ವಿಯಾಗದಿದ್ದರೆ, ವಿಶ್ವ ಕ್ರಿಕೆಟ್ ಮುಂದೆ ತಲೆಭಾಗಬೇಕಾಗುತ್ತದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:35 pm, Wed, 8 January 25