ವಿಜಯ ಹಝಾರೆ ಟೂರ್ನಿಯಲ್ಲಿ ಕರ್ನಾಟಕ ತಂಡ ಕ್ವಾರ್ಟರ್ ಫೈನಲ್ಗೆ ತಲುಪಿದೆ. ಇದೀಗ ನಿರ್ಣಾಯಕ ಹಂತದಲ್ಲಿ ತಂಡಕ್ಕೆ ಸ್ಟಾರ್ ಆಟಗಾರರ ಆಗಮನವಾಗಿದೆ. ಅಂದರೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕಾಣಿಸಿಕೊಂಡಿದ್ದ ದೇವದತ್ ಪಡಿಕ್ಕಲ್ ಹಾಗೂ ಪ್ರಸಿದ್ಧ್ ಕೃಷ್ಣ ಕ್ವಾರ್ಟರ್ ಫೈನಲ್ಗೂ ಮುನ್ನ ಕರ್ನಾಟಕ ತಂಡವನ್ನು ಕೂಡಿಕೊಂಡಿದ್ದಾರೆ.
ಆದರೆ ಕರ್ನಾಟಕದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ವಿಜಯ ಹಝಾರೆ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಒಂದೇ ತಂಡದಲ್ಲಿದ್ದ ಪ್ರಸಿದ್ಧ ಕೃಷ್ಣ ಹಾಗೂ ದೇವದತ್ ಪಡಿಕ್ಕಲ್ ದೇಶೀಯ ಟೂರ್ನಿಗೆ ಮರಳಿದರೂ ರಾಹುಲ್ ಏಕೆ ರಾಜ್ಯ ತಂಡದ ಪರ ಕಣಕ್ಕಿಳಿಯಲು ಹಿಂದೇಟು ಹಾಕಿದ್ದಾರೆ ಎಂಬ ಪ್ರಶ್ನೆ ಮೂಡುವುದು ಸಹಜ.
ಈ ಪ್ರಶ್ನೆಗೆ ಉತ್ತರ ವಿಶ್ರಾಂತಿ. ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿದಿರುವ ರಾಹುಲ್ ವಿಶ್ರಾಂತಿಗಾಗಿ ಮನವಿ ಮಾಡಿದ್ದರು. ಇದಕ್ಕೆ ಬಿಸಿಸಿಐ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ. ವಿಜಯ ಹಝಾರೆ ಟೂರ್ನಿಯ ನಾಕೌಟ್ ಪಂದ್ಯಗಳಲ್ಲಿ ಕರ್ನಾಟಕ ಪರ ಕೆಎಲ್ ರಾಹುಲ್ ಕಾಣಿಸಿಕೊಳ್ಳುವುದಿಲ್ಲ.
ಇನ್ನು ಕೆಎಲ್ ರಾಹುಲ್ ಮುಂಬರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಗೂ ಕನ್ನಡಿಗ ಆಯ್ಕೆಯಾಗುವ ನಿರೀಕ್ಷೆಯಿದೆ. ಪ್ರಸ್ತುತ ಮಾಹಿತಿ ಪ್ರಕಾರ ಚಾಂಪಿಯನ್ಸ್ ಟ್ರೋಫಿಗೆ ಕೆಎಲ್ ರಾಹುಲ್ ಅವರನ್ನು 2ನೇ ವಿಕೆಟ್ ಕೀಪರ್ ಬ್ಯಾಟರ್ ಆಗಿ ಪರಿಗಣಿಸುವ ಸಾಧ್ಯತೆ ಹೆಚ್ಚಿದೆ. ಈ ಮೂಲಕ ರಾಹುಲ್ ಮತ್ತೆ ಬ್ಲೂ ಜೆರ್ಸಿಯಲ್ಲಿ ಕಣಕ್ಕಿಳಿಯಲಿದ್ದಾರೆ.
ಕರ್ನಾಟಕ ಏಕದಿನ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ನಿಕಿನ್ ಜೋಸ್, ಕೆವಿ ಅನೀಶ್, ಆರ್. ಸ್ಮರನ್, ಕೆಎಲ್ ಶ್ರೀಜಿತ್, ಅಭಿನವ್ ಮನೋಹರ್, ಶ್ರೇಯಸ್ ಗೋಪಾಲ್ (ಉಪನಾಯಕ), ಹಾರ್ದಿಕ್ ರಾಜ್, ಪ್ರಸಿದ್ಧ್ ಕೃಷ್ಣ, ವಿ. ಕೌಶಿಕ್, ವಿದ್ಯಾಧರ್ ಪಾಟೀಲ್, ಅಭಿಲಾಷ್ ಶೆಟ್ಟಿ, ಪ್ರವೀಣ್ ದುಬೆ, ಲುವ್ನಿತ್ ಸಿಸೋಡಿಯಾ, ಯಶೋವರ್ಧನ್ ಪರಂತಪ್. (ಸಾಂದರ್ಭಿಕ ಚಿತ್ರ)
Published On - 1:30 pm, Wed, 8 January 25