ಟೆಸ್ಟ್ ತಂಡಕ್ಕೆ ಮರಳಿರುವ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ಚೇತೇಶ್ವರ್ ಪೂಜಾರ (Cheteshwar Pujara) ಇದೀಗ ಏಕದಿನ ತಂಡದಲ್ಲಿಯೂ ತಮ್ಮ ಸ್ಥಾನ ಪಡೆದುಕೊಳ್ಳಲು ತಯಾರಿ ನಡೆಸುತ್ತಿದ್ದಾರೆ. ಪೂಜಾರ 8 ವರ್ಷಗಳ ಹಿಂದೆ ಭಾರತ ತಂಡಕ್ಕಾಗಿ ಕೊನೆಯ ಬಾರಿಗೆ ಏಕದಿನ ಪಂದ್ಯವನ್ನು ಆಡಿದ್ದರು. ಆ ಬಳಿಕ ಪೂಜಾರಗೆ ಏಕದಿನ ತಂಡದಲ್ಲಿ ಅಷ್ಟಾಗಿ ಅವಕಾಶ ಸಿಗಲಿಲ್ಲ. ಇದಕ್ಕೆ ಅವರ ಬ್ಯಾಟಿಂಗ್ ಸರಾಸರಿಯೂ ಕಾರಣವಾಗಿತ್ತು.ಹೀಗಾಗಿ ಟೆಸ್ಟ್ ಕಡೆ ಹೆಚ್ಚು ಒಲವು ತೋರಿದ್ದ ಪೂಜಾರ ಟೆಸ್ಟ್ ತಂಡದಲ್ಲಿ ಕೆಲವು ವರ್ಷಗಳ ಕಾಲ ಖಾಯಂ ಸ್ಥಾನ ಪಡೆದುಕೊಂಡಿದ್ದರು. ಆದರೆ ಕೆಲವು ಪಂದ್ಯಗಳಿಂದ ಪೂಜಾರ ಬ್ಯಾಟ್ ಸೈಲೆಂಟ್ ಆಗಿದ್ದನ್ನು ಗಮನಿಸಿದ ಬಿಸಿಸಿಐ ಅವರಿಗೆ ಟೆಸ್ಟ್ ತಂಡದಿಂದಲೂ ಕೋಕ್ ನೀಡಿತ್ತು. ಹೀಗಾಗಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಮುಂದಾದ ಪೂಜಾರ ವಿದೇಶಿ ಲೀಗ್ಗಳಲ್ಲಿ ಆಡಲು ಪ್ರಾರಂಭಿಸಿ, ಅಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದರು. ಹೀಗಾಗಿ ಅವರಿಗೆ ಟೀಂ ಇಂಡಿಯಾ ಟೆಸ್ಟ್ ತಂಡದಲ್ಲಿ ಸ್ಥಾನ ಸಿಕ್ಕಿತು. ವಿದೇಶಿ ಲೀಗ್ಗಳಲ್ಲಿ ಆಡುವುದನ್ನು ಮುಂದುವರೆಸಿರುವ ಪೂಜಾರ ಈಗ ಏಕದಿನ ಮಾದರಿಯಲ್ಲೂ ಅಬ್ಬರಿಸಿ ಸತತ ಎರಡನೇ ಶತಕದ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಇಂಗ್ಲೆಂಡಿನಲ್ಲಿ ಮತ್ತೆ ಶತಕದ ಮಳೆ
ಈ ವರ್ಷದ ಮಾರ್ಚ್‌ನಿಂದ ಇಂಗ್ಲೆಂಡ್‌ನಲ್ಲಿರುವ ಪೂಜಾರ ಸಸೆಕ್ಸ್ ಪರ ಸಾಕಷ್ಟು ಶತಕ ಹಾಗೂ ದ್ವಿಶತಕ ಬಾರಿಸಿದ್ದಾರೆ. ಕೌಂಟಿ ಚಾಂಪಿಯನ್‌ಶಿಪ್‌ನ ಎರಡನೇ ವಿಭಾಗದಲ್ಲಿ ಪೂಜಾರ 2 ದ್ವಿಶತಕ ಸೇರಿದಂತೆ ಒಟ್ಟು 5 ಶತಕ ಸಿಡಿಸಿದ್ದರು. ಭಾರತದ ಹಿರಿಯ ಬ್ಯಾಟ್ಸ್‌ಮನ್ ಈಗ ಏಕದಿನ ಪಂದ್ಯಾವಳಿಯಲ್ಲೂ ತಮ್ಮ ಶ್ರೇಷ್ಠ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಪೂಜಾರ ಸತತ ಎರಡನೇ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಎರಡು ದಿನಗಳ ಹಿಂದೆ ವಾರ್ವಿಕ್‌ಶೈರ್ ವಿರುದ್ಧ ಪೂಜಾರ 79 ಎಸೆತಗಳಲ್ಲಿ 107 ರನ್ ಗಳಿಸಿದ್ದರು.
ಸಿಕ್ಸರ್ ಮತ್ತು ಬೌಂಡರಿಗಳ ಅಬ್ಬರ
ಈ ವೇಳೆ ಪೂಜಾರ ಇನ್ನಷ್ಟು ಅಪಾಯಕಾರಿ ಫಾರ್ಮ್ ಪ್ರದರ್ಶಿಸಿ 174 ರನ್‌ಗಳ ಇನ್ನಿಂಗ್ಸ್‌ನಲ್ಲಿ ಸರ್ರೆ ಬೌಲರ್‌ಗಳನ್ನು ಸರಿಯಾಗಿಯೇ ಬೆಂಡೆತ್ತಿದರು. ಭಾನುವಾರ, ಆಗಸ್ಟ್ 14 ರಂದು, ಪೂಜಾರ ಸರ್ರೆ ವಿರುದ್ಧ ಕೇವಲ 131 ಎಸೆತಗಳಲ್ಲಿ 20 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 174 ರನ್ ಗಳಿಸಿದರು.
69 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಪೂಜಾರ ನಂತರ 103 ಎಸೆತಗಳಲ್ಲಿ ಶತಕ ಪೂರೈಸಿದರು. ಇದರ ನಂತರ, ಪೂಜಾರ ಮುಂದಿನ 74 ರನ್‌ಗಳನ್ನು ಕೇವಲ 28 ಎಸೆತಗಳಲ್ಲಿ ಗಳಿಸಿದರು. ವಿಶೇಷವೆಂದರೆ ಇದು ಪೂಜಾರ ಅವರ ಲಿಸ್ಟ್ ಎ (ODI) ವೃತ್ತಿಜೀವನದ ಗರಿಷ್ಠ ಸ್ಕೋರ್ ಆಗಿದೆ.
ದ್ವಿಶತಕ ವಂಚಿತರಾದ ಪೂಜಾರ
ಪೂಜಾರ ತಮ್ಮ ಇನ್ನಿಂಗ್ಸ್ನಲ್ಲಿ ಒಂದೇ ಓವರ್‌ನಲ್ಲಿ ಸತತ ನಾಲ್ಕು ಬೌಂಡರಿಗಳನ್ನು ಸಹ ಹೊಡೆದರು. ಅದೇ ಸಮಯದಲ್ಲಿ, ಕೆಲವು ಬೌಲರ್‌ಗಳ ವಿರುದ್ಧ, ಪೂಜಾರ ಸತತ ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಪೂಜಾರ ಅವರ ಈ ಶೈಲಿ ಎದುರಾಳಿ ತಂಡದ ಹುಬ್ಬೇರುವಂತೆ ಮಾಡಿತು. ನಾಲ್ಕನೇ ಓವರ್‌ನಲ್ಲಿ ಕ್ರೀಸ್ಗೆ ಬಂದ ಪೂಜಾರ ಮೂರನೇ ವಿಕೆಟ್ಗೆ ಟಾಮ್ ಕ್ಲಾರ್ಕ್ ಜತೆ 205 ರನ್‌ಗಳ ಜೊತೆಯಾಟ ಹಂಚಿಕೊಂಡರು. ಕ್ಲಾರ್ಕ್ ಕೂಡ ಶತಕ ಬಾರಿಸಿದರು. ಪೂಜಾರ ಅವರಿಗೂ ದ್ವಿಶತಕ ಗಳಿಸುವ ಅವಕಾಶವಿತ್ತು, ಆದರೆ 48ನೇ ಓವರ್‌ನಲ್ಲಿ ಅವರು ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿ ಔಟಾದರು. ಅದೇನೇ ಇದ್ದರೂ, ಅವರ ಇನ್ನಿಂಗ್ಸ್ ಆಧಾರದ ಮೇಲೆ, ಸಸೆಕ್ಸ್ 350 ಕ್ಕೂ ಹೆಚ್ಚು ರನ್ ಗಳಿಸಿತು.
Published On - 7:48 pm, Sun, 14 August 22