ETPL 2026: ಟಿ20 ತಂಡ ಖರೀದಿಸಿದ ಕ್ರಿಸ್ ಗೇಲ್

Chris Gayle: ಕ್ರಿಕೆಟ್ ಲೋಕದ 'ಯೂನಿವರ್ಸ್ ಬಾಸ್' ಕ್ರಿಸ್ ಗೇಲ್ ಈಗ ಕೇವಲ ಮೈದಾನದ ಆಟಗಾರನಲ್ಲ, ತಂಡದ ಒಡೆಯ! ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನೇತೃತ್ವದ ಪ್ರತಿಷ್ಠಿತ 'ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್' (ETPL) ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ಗ್ಲ್ಯಾಸ್ಗೋ ಫ್ರಾಂಚೈಸಿಯನ್ನು ಕ್ರಿಸ್ ಗೇಲ್ ಮತ್ತು ಮುಗಾಫಿ ಗ್ರೂಪ್ ಅಧಿಕೃತವಾಗಿ ತನ್ನದಾಗಿಸಿಕೊಂಡಿದೆ. 

ETPL 2026: ಟಿ20 ತಂಡ ಖರೀದಿಸಿದ ಕ್ರಿಸ್ ಗೇಲ್
Chris Gayle

Updated on: Apr 20, 2026 | 2:35 PM

ಟಿ20 ಕ್ರಿಕೆಟ್ ಲೀಗ್​ಗೆ ಮತ್ತೊಂದು ಟೂರ್ನಿ ಸೇರ್ಪಡೆಯಾಗುತ್ತಿದೆ. ಹೊಸ ಟೂರ್ನಿ ಆಯೋಜನೆಗೊಳ್ಳಲಿರುವುದು ದೂರದ ಯುರೋಪಿನಲ್ಲಿ. ಅದರಂತೆ ಶೀಘ್ರದಲ್ಲೇ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ಗೆ (ETPL) ಚಾಲನೆ ದೊರೆಯಲಿದೆ.  ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಸಹ-ಮಾಲೀಕತ್ವದ ಈ ಲೀಗ್‌ನಲ್ಲಿ, ಗ್ಲ್ಯಾಸ್ಗೋ ಫ್ರಾಂಚೈಸಿಯನ್ನು ವೆಸ್ಟ್ ಇಂಡೀಸ್​ನ ಮಾಜಿ ಕ್ರಿಕೆಟಿಗ ಕ್ರಿಸ್ ಗೇಲ್ ಖರೀದಿಸಿದ್ದಾರೆ.

 ‘ಗ್ಲ್ಯಾಸ್ಗೋ ಮುಗಾಫಿಯನ್ಸ್’

ವೆಸ್ಟ್ ಇಂಡೀಸ್‌ನ ಮಾಜಿ ಆಟಗಾರ ಕ್ರಿಸ್ ಗೇಲ್ ಅವರು ಕೇವಲ ಈ ತಂಡದ ಸಹ-ಮಾಲೀಕರಷ್ಟೇ ಅಲ್ಲದೆ, ಗ್ಲ್ಯಾಸ್ಗೋ ಮುಗಾಫಿಯನ್ಸ್ ತಂಡದ ಜಾಗತಿಕ ರಾಯಭಾರಿಯಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. ಈ ತಂಡದ ಮಾಲೀಕತ್ವದ ಜವಾಬ್ದಾರಿಯನ್ನು ತನ್ಶಾ ಬಾತ್ರಾ ವಹಿಸಿಕೊಂಡಿದ್ದು, ವಿಪುಲ್ ಅಗರ್ವಾಲ್ ನೇತೃತ್ವದ ‘ಮುಗಾಫಿ ಗ್ರೂಪ್’ ತಂಡದ ಡಿಜಿಟಲ್ ಮತ್ತು ವಾಣಿಜ್ಯ ವ್ಯವಹಾರಗಳನ್ನು ನೋಡಿಕೊಳ್ಳಲಿದೆ.

ಲೀಗ್‌ನ ಕುರಿತಾದ ಮಾಹಿತಿ:

  • ಸ್ಥಾಪಕರು: ಈ ಲೀಗ್ ಅನ್ನು ಅಭಿಷೇಕ್ ಬಚ್ಚನ್ ಸೇರಿದಂತೆ ಸೌರವ್ ಬ್ಯಾನರ್ಜಿ, ಪ್ರಿಯಾಂಕಾ ಕೌಲ್ ಮತ್ತು ಧೀರಜ್ ಮಲ್ಹೋತ್ರಾ ಅವರು ಜೊತೆಗೂಡಿ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ (ETPL) ಸ್ಥಾಪಿಸಿದ್ದಾರೆ.
  • ದಿನಾಂಕ: ಚೊಚ್ಚಲ ಸೀಸನ್ ಆಗಸ್ಟ್ 26, 2026 ರಿಂದ ಸೆಪ್ಟೆಂಬರ್ 20, 2026 ರವರೆಗೆ ನಡೆಯಲಿದೆ.
  • ತಂಡಗಳು: ಗ್ಲ್ಯಾಸ್ಗೋ ಸೇರಿದಂತೆ ಆಮ್‌ಸ್ಟರ್‌ಡ್ಯಾಮ್, ಎಡಿನ್‌ಬರ್ಗ್, ಡಬ್ಲಿನ್, ಬೆಲ್‌ಫಾಸ್ಟ್ ಮತ್ತು ರೊಟರ್‌ಡ್ಯಾಮ್ ನಗರಗಳ ಒಟ್ಟು 6 ತಂಡಗಳು ಸ್ಪರ್ಧಿಸಲಿವೆ.
  • ಐಸಿಸಿ ಮಾನ್ಯತೆ: ಇದು ಐಸಿಸಿ (ICC) ಮಾನ್ಯತೆ ಪಡೆದ ಯುರೋಪ್‌ನ ಮೊದಲ ಫ್ರಾಂಚೈಸಿ ಆಧಾರಿತ ಟಿ20 ಲೀಗ್ ಆಗಿದೆ.

ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ:

ಕ್ರಿಸ್ ಗೇಲ್ ಅವರಂತಹ ದಿಗ್ಗಜರು ಲೀಗ್‌ಗೆ ಸೇರ್ಪಡೆಗೊಂಡಿರುವುದು ಕ್ರಿಕೆಟ್ ಪ್ರೇಮಿಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಜಾಗತಿಕ ಮಟ್ಟದಲ್ಲಿ ಕ್ರಿಕೆಟ್ ಅನ್ನು ಬೆಳೆಸುವ ನಿಟ್ಟಿನಲ್ಲಿ ಇದೊಂದು ದೊಡ್ಡ ಹೆಜ್ಜೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಮಿಚೆಲ್ ಮಾರ್ಷ್ ಅವರಂತಹ ಘಟಾನುಘಟಿ ಆಟಗಾರರು ವಿವಿಧ ತಂಡಗಳ ಪರವಾಗಿ ಒಪ್ಪಂದ ಮಾಡಿಕೊಂಡಿರುವುದು ಈ ಕೂಟದ ಮೆರುಗನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಭಾರತದ ಪೌರತ್ವದ ಆಫರ್ ತಿರಸ್ಕರಿಸಿದ್ದ ರಶೀದ್ ಖಾನ್!

ಇದೀಗ ಕ್ರಿಸ್ ಗೇಲ್ ‘ಗ್ಲ್ಯಾಸ್ಗೋ ಮುಗಾಫಿಯನ್ಸ್’ ತಂಡದ ಸಹ ಮಾಲೀಕರಾಗಿರುವ ಕಾರಣ ನಿಕೋಲಸ್ ಪೂರನ್ ಸೇರಿದಂತೆ ವೆಸ್ಟ್ ಇಂಡೀಸ್​ನ ಸ್ಟಾರ್ ಕ್ರಿಕೆಟಿಗರು ಕೂಡ ಯುರೋಪಿಯನ್ ಟಿ20 ಪ್ರೀಮಿಯರ್ ಲೀಗ್‌ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ.

 

Loading...
Unable to load recommendations.
Follow Us