AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಪೌರತ್ವದ ಆಫರ್ ತಿರಸ್ಕರಿಸಿದ್ದ ರಶೀದ್ ಖಾನ್!

IPL 2026 Rashid Khan: ಇಂಡಿಯನ್ ಪ್ರೀಮಿಯರ್ ಲೀಗ್​ನ ರಶೀದ್ ಖಾನ್ ಈವರೆಗೆ ಕೇವಲ 2 ತಂಡಗಳ ಪರ ಮಾತ್ರ ಆಡಿದ್ದಾರೆ. 2017 ರಲ್ಲಿ ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ ಕೆರಿಯರ್ ಆರಂಭಿಸಿದ್ದ ಅಫ್ಘಾನಿಸ್ತಾನ್ ಸ್ಪಿನ್ನರ್ ಸದ್ಯ ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿದ್ದಾರೆ.

ಭಾರತದ ಪೌರತ್ವದ ಆಫರ್ ತಿರಸ್ಕರಿಸಿದ್ದ ರಶೀದ್ ಖಾನ್!
Rashid Khan
ಝಾಹಿರ್ ಯೂಸುಫ್
|

Updated on: Apr 20, 2026 | 12:52 PM

Share

ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ಮತ್ತು ಐಪಿಎಲ್‌ನ ಸ್ಟಾರ್ ಬೌಲರ್ ರಶೀದ್ ಖಾನ್ (Rashid Khan) ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ಭರ್ಜರಿ ಪ್ರದರ್ಶನದಿಂದ ಅಲ್ಲ. ಬದಲಾಗಿ ತಮ್ಮ ಮುಂಬರುವ ಆತ್ಮಕಥೆ “Rashid Khan: From Streets to Stardom” ನಿಂದ. ಈ ಆತ್ಮಕಥೆಯಲ್ಲಿ ರಶೀದ್ ಖಾನ್ ಹಲವು ಕುತೂಹಲಕಾರಿ ವಿಷಯಗಳನ್ನು ಬಿಚ್ಚಿಟ್ಟಿದ್ದಾರೆ. ಇದರಲ್ಲೊಂದು ಭಾರತದ ಪೌರತ್ವದ ಆಫರ್​..!

ಹೌದು, ರಶೀದ್ ಖಾನ್​​​ ತಮಗೆ ಭಾರತದ ಪೌರತ್ವದ ಆಫರ್ ಬಂದಿತ್ತು ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಈ ಆಫರ್ ಹೊರತಾಗಿಯೂ ನಾನು ಅಫ್ಘಾನಿಸ್ತಾನ್ ಪರವೇ ಆಡಲು ನಿರ್ಧರಿಸಿದ್ದೆ. ಈ ಬಗ್ಗೆ ನನಗೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾದಿಂದ ಆಫರ್:

2023ರ ಐಪಿಎಲ್ ಸೀಸನ್ ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯ (BCCI) ಉನ್ನತ ಅಧಿಕಾರಿಯೊಬ್ಬರು ರಶೀದ್ ಖಾನ್ ಅವರನ್ನು ಭೇಟಿಯಾಗಿ ಭಾರತದ ಪೌರತ್ವ ಪಡೆಯುವಂತೆ ಮತ್ತು ಭಾರತದ ಪರವಾಗಿ ಆಡುವಂತೆ ಆಫರ್ ನೀಡಿದ್ರಂತೆ.

ಕೇವಲ ಭಾರತ ಮಾತ್ರವಲ್ಲದೆ, ಆಸ್ಟ್ರೇಲಿಯಾ ಕೂಡ ಅವರಿಗೆ ಪೌರತ್ವ ನೀಡಲು ಮುಂದಾಗಿತ್ತು ಎಂದು ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಈ ಆಫರ್ ಕೇಳಿ ನಿಜಕ್ಕೂ ನಾನು ಆಶ್ಚರ್ಯಗೊಂಡಿದ್ದೆ. ಅಲ್ಲದೆ “ನಾನು ನನ್ನ ಸ್ವಂತ ದೇಶಕ್ಕಾಗಿ ಮಾತ್ರ ಆಡುತ್ತೇನೆ,  ಇದರ ಹೊರತಾಗಿ ಬೇರೆ ಯಾವ ದೇಶಕ್ಕಾಗಿಯೂ ಆಡುವುದಿಲ್ಲ” ಎಂದು ಹೇಳುವ ಮೂಲಕ ಈ ಆಫರ್​ಗಳನ್ನು ನಿರಾಕರಿಸಿದ್ದೆ ಎಂದು ರಶೀದ್ ಖಾನ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ರಾಜಕೀಯ ಪರಿಸ್ಥಿತಿ ಹದಗೆಟ್ಟಿದ್ದರೂ ಸಹ, ತಮ್ಮ ತಾಯ್ನಾಡಿನ ಮೇಲಿರುವ ನಿಷ್ಠೆಯಿಂದಾಗಿ ನಾನು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ರಶೀದ್ ಖಾನ್ ತಮ್ಮ ಆತ್ಮಕಥೆಯಲ್ಲಿ ಉಲ್ಲೇಖಿಸಿದ್ದಾರೆ.

2018ರ ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ರಶೀದ್ ಖಾನ್ ಅವರ ಭರ್ಜರಿ ಪ್ರದರ್ಶನ ಕಂಡು ಅನೇಕ ಅಭಿಮಾನಿಗಳು ಅವರಿಗೆ ಭಾರತೀಯ ಪೌರತ್ವ ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಮನವಿ ಮಾಡಿದ್ದರು.  ಆ ಸಂದರ್ಭದಲ್ಲಿ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ರಶೀದ್ ಅಫ್ಘಾನಿಸ್ತಾನದ ಹೆಮ್ಮೆ ಎಂದು ಹೇಳಿಕೆ ನೀಡಿದ್ದರು.

ಇದೀಗ ಈ ಎಲ್ಲಾ ವಿಚಾರಗಳನ್ನು ರಶೀದ್ ಖಾನ್ ತಮ್ಮ “Rashid Khan: From Streets to Stardom”  ಆತ್ಮಕಥಾ ಪುಸ್ತಕದ ಮೂಲಕ ಬಹಿರಂಗಪಡಿಸಿದ್ದಾರೆ.

ಇದನ್ನೂ ಓದಿ: IPL 2026: ಐಪಿಎಲ್ ಪಾಯಿಂಟ್ಸ್ ಟೇಬಲ್​ನಲ್ಲಿ ಮಹತ್ವದ ಬದಲಾವಣೆ

ಸದ್ಯ ಗುಜರಾತ್ ಟೈಟಾನ್ಸ್ ಪರ ಐಪಿಎಲ್ ಆಡುತ್ತಿರುವ ರಶೀದ್ ಖಾನ್ 5 ಪಂದ್ಯಗಳಿಂದ ಕೇವಲ 6 ವಿಕೆಟ್ ಮಾತ್ರ ಪಡೆದಿದ್ದಾರೆ. ಇನ್ನು ಐಪಿಎಲ್​ನಲ್ಲಿ ಈವರೆಗೆ 141 ಮ್ಯಾಚ್​ಗಳನ್ನಾಡಿರುವ ಅಫ್ಘಾನ್ ಸ್ಪಿನ್ನರ್ 3309 ಎಸೆತಗಳಲ್ಲಿ 3920 ರನ್ ನೀಡಿ 164 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಐಪಿಎಲ್​ನಲ್ಲಿ 150+ ವಿಕೆಟ್ ಪಡೆದ ಬೌಲರ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

Follow Us