Bangladesh vs Scotland: ಟಿ20 ವಿಶ್ವಕಪ್ ಆರಂಭದ ಮೊದಲ ದಿನವೇ ಅಚ್ಚರಿ ಫಲಿತಾಂಶ: ಬಾಂಗ್ಲಾಕ್ಕೆ ಶಾಕ್ ನೀಡಿದ ಸ್ಕಾಟ್ಲೆಂಡ್
T20 World Cup 2021: ಸ್ಕಾಟ್ಲೆಂಡ್ ತಂಡ 53 ರನ್ ಆಗುವ ಹೊತ್ತಿಗೆ ತನ್ನ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ತಂಡಕ್ಕೆ ಆಸರೆಯಾದ ಆಲ್ರೌಂಡರ್ ಕ್ರಿಸ್ ಗ್ರೀವ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಮಹಾಟೂರ್ನಿಗೆ ಭಾನುವಾರ ಚಾಲನೆ ಸಿಕ್ಕಿದೆ. ಮೊದಲ ದಿನ ನಡೆದ ಬಿ ಗುಂಪಿನ ಮೊದಲ ಸುತ್ತಿನ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ತಂಡ ಬಾಂಗ್ಲಾದೇಶದ (Bangladesh vs Scotland) ವಿರುದ್ಧ 6 ರನ್ ಗಳ ಅಂತರದಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಬಾಂಗ್ಲಾದೇಶಕ್ಕೆ (BAN) ಬಿಗ್ ಶಾಕ್ ನೀಡಿದ್ದಲ್ಲದೆ ಇತರೆ ತಂಡಗಳಿಗೂ ಸಂದೇಶ ರವಾನಿಸಿದೆ. ಸ್ಕಾಟ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಕ್ರಿಸ್ ಗ್ರೀವ್ಸ್ (Chris Greaves) ಆಟದ (45 ರನ್ ಹಾಗೂ 2 ವಿಕೆಟ್) ನೆರವಿನಿಂದ ಗೆಲುವು ದಾಖಲಿಸಿ ಎರಡು ಅಂಕವನ್ನು ತನ್ನ ಖಾತೆಗೆ ಸೇರಿಸಿಕೊಂಡಿತು.
ಮೊದಲು ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಸ್ಕಾಟ್ಲೆಂಡ್ಗೆ ಬಾಂಗ್ಲಾ ಬೌಲರ್ಗಳು ಶಾಕ್ ಮೇಲೆ ಶಾಕ್ ನೀಡಿದರು. ನಾಯಕ ಸಿಯಾಟ್ಜರ್ರನ್ನು ಸೊನ್ನೆಗೆ ಪೆವಿಲಿಯನ್ಗೆ ಅಟ್ಟಿದರೆ, ಎಮ್ ಕ್ರಾಸ್ (11), ಬೆರ್ರಿಂಗ್ಟಾನ್ (2), ಮ್ಯಾಕ್ಲೆಡ್ (5), ಲೀಸ್ಕ್ (0) ಬೇಗನೆ ಔಟ್ ಆದರು. ಇದರ ನಡುವೆ ಕೊಂಚ ರನ್ ಕಲೆಹಾಕಿದ್ದ ಮನ್ಸೆ (23 ಎಸೆತ, 29 ರನ್) ವಿಕೆಟ್ ಕೂಡ ಸ್ಕಾಟ್ಲೆಂಡ್ ಕಳೆದುಕೊಂಡಿತು.
ಹೀಗೆ ಸ್ಕಾಟ್ಲೆಂಡ್ ತಂಡ 53 ರನ್ ಆಗುವ ಹೊತ್ತಿಗೆ ತನ್ನ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ಸಂದರ್ಭ ತಂಡಕ್ಕೆ ಆಸರೆಯಾದ ಆಲ್ರೌಂಡರ್ ಕ್ರಿಸ್ ಗ್ರೀವ್ಸ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಕುಸಿದ ತಂಡಕ್ಕೆ ನೆರವಾದರು. ಕೇವಲ 28 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಸಿಡಿಸಿ 45 ರನ್ ಚಚ್ಚಿ ತಂಡದ ಮೊತ್ತವನ್ನು ಏರಿಸಿದರು. ಇವರಿಗೆ 17 ಎಸೆತಗಳಲ್ಲಿ 22 ರನ್ ಬಾರಿಸಿ ಮಾರ್ಕ್ ವ್ಯಾಟ್ ಸಾತ್ ನೀಡಿದರು.
ಪರಿಣಾಮ ಸ್ಕಾಟ್ಲೆಂಡ್ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ 140 ರನ್ ಬಾರಿಸಿತು. ಬಾಂಗ್ಲಾ ಪರ ಮೆಹ್ದಿ ಹಸನ್ 4 ಓವರ್ಗೆ 19 ರನ್ ನೀಡಿ 3 ವಿಕೆಟ್ ಕಿತ್ತರೆ, ಶಕಿಬ್ ಮತ್ತು ಮುಸ್ತಫಿಜುರ್ ತಲಾ 2 ವಿಕೆಟ್ ಪಡೆದರು.
141 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಬಾಂಗ್ಲಾದೇಶ ನಿಯಮಿತವಾಗಿ ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಹಿನ್ನಡೆಗೆ ಒಳಗಾಯಿತು. ಅಂತಿಮವಾಗಿ ಏಳು ವಿಕೆಟ್ ನಷ್ಟಕ್ಕೆ 134 ರನ್ ಗಳಿಸಲಷ್ಟೇ ಸಮರ್ಥವಾಯಿತು. ಮುಷ್ಫಿಕುರ್ ರಹೀಂ (38), ನಾಯಕ ಮೆಹಮುದುಲ್ಲಾ (23), ಶಕೀಬ್ ಅಲ್ ಹಸನ್ (20) ಹಾಗೂ ಅಫಿಫ್ ಹುಸೇನ್ (18) ಹಾಗೂ ಮೆಹದಿ ಹಸನ್ (13*) ಹೋರಾಟವು ವ್ಯರ್ಥವೆನಿಸಿತು. ಸ್ಕಾಟ್ಲೆಂಡ್ ಪರ ಬ್ರಾಡ್ ವೀಲ್ ಮೂರು ಹಾಗೂ ಕ್ರಿಸ್ ಗ್ರೀವ್ಸ್ ಎರಡು ವಿಕೆಟ್ ಕಿತ್ತು ಮಿಂಚಿದರು.
T20 World Cup: ಟಿ20 ವಿಶ್ವಕಪ್ ಪ್ರತಿ ಆವೃತ್ತಿಯಲ್ಲೂ ಅತ್ಯಧಿಕ ರನ್ ಗಳಿಸಿದ ಆಟಗಾರರ ವಿವರ ಹೀಗಿದೆ
(Chris Greaves starred with bat and ball as Scotland shocked Bangladesh in Twenty20 World Cup)