
ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಬಳಿಸಿ ಮಿಂಚಿದ್ದ ಪ್ರಮುಖ ವೇಗಿ ಆಕಾಶ್ ದೀಪ್, ಗಾಯದ ಸಮಸ್ಯೆಯಿಂದ ಪಂದ್ಯದ ಉಳಿದ ಅವಧಿಯಿಂದ ಹೊರಬಿದ್ದಿದ್ದಾರೆ. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವ ವೇಳೆ ಹೆಲ್ಮೆಟ್‌ಗೆ ಚೆಂಡು ಬಡಿದು ‘ಕಂಕಷನ್’ (ತಲೆಗೆ ಪೆಟ್ಟು) ಉಂಟಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.
ಭಾರತದ ಮೊದಲ ಇನ್ನಿಂಗ್ಸ್‌ನ 53ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಆಕಾಶ್ ದೀಪ್ ಅವರಿಗೆ ಕಿವೀಸ್ ವೇಗಿ ಕೈಲ್ ಜೇಮಿಸನ್ ಎಸೆದ ಎರಡು ಅಪಾಯಕಾರಿ ಬೌನ್ಸರ್‌ಗಳು (ಮೊದಲ ಮತ್ತು ಐದನೇ ಎಸೆತ) ನೇರವಾಗಿ ಹೆಲ್ಮೆಟ್‌ಗೆ ಬಡಿದಿದ್ದವು. ಆ ಸಂದರ್ಭದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು, ಹೆಲ್ಮೆಟ್ ಬದಲಿಸಿ ಬ್ಯಾಟಿಂಗ್ ಮುಂದುವರಿಸಿದ್ದ ಆಕಾಶ್ ದೀಪ್, 52 ಎಸೆತಗಳಲ್ಲಿ 29 ರನ್ ಗಳಿಸಿ ಧ್ರುವ್ ಜುರೆಲ್ (88) ಅವರೊಂದಿಗೆ 46 ರನ್‌ಗಳ ನಿರ್ಣಾಯಕ ಜೊತೆಯಾಟವಾಡಿದ್ದರು.
ಆದರೆ, ನ್ಯೂಝಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದಾಗ ಆಕಾಶ್ ದೀಪ್ ಮೈದಾನಕ್ಕೆ ಇಳಿಯಲಿಲ್ಲ. ಬಿಸಿಸಿಐ ವೈದ್ಯಕೀಯ ತಂಡವು ಅವರ ಆರೋಗ್ಯದ ಮೇಲೆ ನಿಗಾ ವಹಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅವರನ್ನು ಪಂದ್ಯದಿಂದ ಹೊರಗಿಡಲಾಗಿದೆ ಎಂದು ಬಿಸಿಸಿಐ ಅಧಿಕೃತವಾಗಿ ತಿಳಿಸಿದೆ.
ಐಸಿಸಿ ನಿಯಮಗಳ ಪ್ರಕಾರ, ಪಂದ್ಯದ ವೇಳೆ ಮೈದಾನದಲ್ಲಿ ತಲೆಗೆ ಪೆಟ್ಟು ಬಿದ್ದು ಕಂಕಷನ್‌ಗೆ ಒಳಗಾದ ಆಟಗಾರನ ಬದಲಿಗೆ ‘ಅದೇ ರೀತಿಯ ಸಾಮರ್ಥ್ಯವಿರುವ’ ಬದಲಿ ಆಟಗಾರನನ್ನು ಪೂರ್ಣ ಪ್ರಮಾಣದಲ್ಲಿ ಆಡಿಸಲು ಅವಕಾಶವಿದೆ. ಆಕಾಶ್ ದೀಪ್ ವಿಷಯದಲ್ಲಿ ಈ ನಿಯಮದ ಅನ್ವಯಿಸಲಾಗಿದೆ. ಐಸಿಸಿ ಕಂಕಷನ್ ಸಬ್‌ಸ್ಟಿಟ್ಯೂಟ್‌ನ ಪ್ರಮುಖ ನಿಯಮಗಳು ಈ ಕೆಳಗಿನಂತಿದೆ…
ಮೈದಾನದಲ್ಲೇ ಗಾಯವಾಗಿರಬೇಕು: ಆಟಗಾರನಿಗೆ ಪಂದ್ಯದ ಸಕ್ರಿಯ ಆಟದ ವೇಳೆ (ಬ್ಯಾಟಿಂಗ್, ಬೌಲಿಂಗ್ ಅಥವಾ ಫೀಲ್ಡಿಂಗ್ ಮಾಡುವಾಗ) ಮೈದಾನದಲ್ಲಿ ಪೆಟ್ಟು ಬಿದ್ದಿರಬೇಕು. ಅಭ್ಯಾಸದ ವೇಳೆ ಅಥವಾ ಡ್ರೆಸ್ಸಿಂಗ್ ರೂಮ್‌ನಲ್ಲಿ ಗಾಯಗೊಂಡರೆ ಈ ನಿಯಮ ಅನ್ವಯಿಸುವುದಿಲ್ಲ.
ವೈದ್ಯಕೀಯ ದೃಢೀಕರಣ: ತಂಡದ ವೈದ್ಯಕೀಯ ಪ್ರತಿನಿಧಿಯು ಆಟಗಾರನನ್ನು ಪರೀಕ್ಷಿಸಿ ಕಂಕಷನ್ ಆಗಿರುವುದನ್ನು ದೃಢಪಡಿಸಬೇಕು.
‘ಲೈಕ್-ಫಾರ್-ಲೈಕ್’ ನಿಯಮ: ಬದಲಿ ಆಟಗಾರನು ಗಾಯಗೊಂಡ ಆಟಗಾರನಂತೆಯೇ ಪಾತ್ರ ಮತ್ತು ಕೌಶಲ್ಯ ಹೊಂದಿರಬೇಕು (ಬ್ಯಾಟರ್‌ಗೆ ಬ್ಯಾಟರ್, ಬೌಲರ್‌ಗೆ ಬೌಲರ್). ಇದರಿಂದ ತಂಡಕ್ಕೆ ಯಾವುದೇ ಅನಗತ್ಯ ಲಾಭ ಆಗಬಾರದು.
ಮ್ಯಾಚ್ ರೆಫರಿ ಅಂತಿಮ ನಿರ್ಧಾರ: ತಂಡದ ಮ್ಯಾನೇಜರ್ ಅಥವಾ ವೈದ್ಯಕೀಯ ಸಿಬ್ಬಂದಿ ಮ್ಯಾಚ್ ರೆಫರಿಗೆ ಮನವಿ ಸಲ್ಲಿಸಬೇಕು. ರೆಫರಿಯ ಒಪ್ಪಿಗೆಯೇ ಅಂತಿಮವಾಗಿರುತ್ತದೆ; ಇದನ್ನು ಪ್ರಶ್ನಿಸುವಂತಿಲ್ಲ.
ಪೂರ್ಣ ಪ್ರಮಾಣದ ಆಟ: ಸಾಮಾನ್ಯ ಬದಲಿ ಆಟಗಾರ ಕೇವಲ ಫೀಲ್ಡಿಂಗ್ ಮಾತ್ರ ಮಾಡಬಹುದು. ಆದರೆ ಕಂಕಷನ್ ಸಬ್‌ಸ್ಟಿಟ್ಯೂಟ್ ಆಟಗಾರನು ಉಳಿದ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲವನ್ನೂ ಮಾಡಬಹುದು.
ಮತ್ತೆ ಆಡುವಂತಿಲ್ಲ: ಒಮ್ಮೆ ಬದಲಿ ಆಟಗಾರನನ್ನು ತೆಗೆದುಕೊಂಡರೆ, ಗಾಯಗೊಂಡ ಆಟಗಾರನು ಆ ಪಂದ್ಯದಲ್ಲಿ ಮತ್ತೆ ಮೈದಾನಕ್ಕೆ ಇಳಿಯುವಂತಿಲ್ಲ.
ಮೊದಲ ಇನ್ನಿಂಗ್ಸ್‌ನಲ್ಲಿ 99 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದ ಆಕಾಶ್ ದೀಪ್ ಅವರ ಅನುಪಸ್ಥಿತಿ ಭಾರತದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತವಾಗಿದೆ. ಇವರ ಸ್ಥಾನಕ್ಕೆ ಸರಿಸಮನಾದ ವೇಗದ ಬೌಲರ್ ಆಗಿ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 3 ವಿಕೆಟ್ ಪಡೆದಿದ್ದ ಪ್ರಸಿದ್ಧ್ ಕೃಷ್ಣ ಅವರನ್ನು ಈ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಿಂದ ಕೈಬಿಟ್ಟು, ಯುವ ವೇಗಿ ಗುರ್ನೂರ್ ಬ್ರಾರ್ ಅವರಿಗೆ ಅವಕಾಶ ನೀಡಲಾಗಿತ್ತು. ಆದರೆ, ಇದೀಗ ಆಕಾಶ್ ದೀಪ್ ಗಾಯಗೊಂಡಿರುವ ಕಾರಣ ‘ಕಂಕಷನ್ ಸಬ್‌ಸ್ಟಿಟ್ಯೂಟ್’ ಆಗಿ ಪ್ರಸಿದ್ಧ್ ಅವರಿಗೆ ಅನಿರೀಕ್ಷಿತ ಅವಕಾಶ ಒಲಿದುಬಂದಿದೆ. ಅದರಂತೆ, ನ್ಯೂಝಿಲೆಂಡ್ ವಿರುದ್ಧದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಪ್ರಸಿದ್ಧ್ ಕೃಷ್ಣ ಟೀಮ್ ಇಂಡಿಯಾ ಪರ ಬೌಲಿಂಗ್ ದಾಳಿ ನಡೆಸಲಿದ್ದಾರೆ.
ಟೀಮ್ ಇಂಡಿಯಾ ಪ್ಲೇಯಿಂಗ್ 11: ಕೆ.ಎಲ್. ರಾಹುಲ್, ಯಶಸ್ವಿ ಜೈಸ್ವಾಲ್, ದೇವದತ್ ಪಡಿಕ್ಕಲ್, ಶುಭ್‌ಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಧ್ರುವ್ ಜುರೆಲ್, ಅನ್ಶುಲ್ ಕಂಬೋಜ್, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ.
ಇದನ್ನೂ ಓದಿ: ಟೀಮ್ ಇಂಡಿಯಾಗೆ ಮಾಡು ಇಲ್ಲವೇ ಮಡಿ ಸ್ಥಿತಿ: ಇಲ್ಲಿದೆ WTC ಫೈನಲ್ ಲೆಕ್ಕಾಚಾರ
ನ್ಯೂಝಿಲೆಂಡ್ ಪ್ಲೇಯಿಂಗ್ 11: ಟಾಮ್ ಲ್ಯಾಥಮ್ (ನಾಯಕ), ಡೆವೊನ್ ಕಾನ್ವೇ, ಹೆನ್ರಿ ನಿಕೋಲ್ಸ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಗ್ಲೆನ್ ಫಿಲಿಪ್ಸ್, ನಾಥನ್ ಸ್ಮಿತ್, ಕೈಲ್ ಜೇಮಿಸನ್, ಮ್ಯಾಟ್ ಹೆನ್ರಿ, ಜೇಕಬ್ ಡಫಿ.
Published On - 8:31 am, Sun, 29 November 26